ಬೆಳಗಾವಿ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಗ್ಗೆ ಮೊಸಳೆ ಕಣ್ಣಿರು ಸುರಿಸುವ ರಾಹುಲಗಾಂಧಿಯವರೆ, ವಾಲ್ಮೀಕಿ ನಿಗಮದ ಹಣ ಬಳಕೆಯಾಗಿರುವ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಪ್ರತಿಭಟಿಸಿ ಆ ಜನಾಂಗದ ಅಭಿವೃದ್ಧಿಯ ಮೀಸಲು ಹಣ ಮರಳಿ ಪಡೆದು ಬದ್ದತೆ ತೋರಿಸಿ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.
ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ ಅವರು, ಚುನಾವಣಾ ಅಕ್ರಮದ ಕುರಿತು ಕಾಂಗ್ರೆಸ್ ಪ್ರಾಯೋಜಕತ್ವದ ಡೋಂಗಿ ಹೋರಾಟಕ್ಕೆ ಆ.5ರಂದು ರಾಜ್ಯಕ್ಕೆ ಬರುತ್ತಿರುವ ರಾಹುಲ್ ಗಾಂಧಿಯವರು ಮತ್ತು ಕಾಂಗ್ರೆಸ್ ನಾಯಕರು ಸದಾ ಎಸ್ ಸಿ, .ಎಸ್ ಟಿ ಜನಾಂಗದ ಬಗ್ಗೆ ಕಪಟ ನಾಟಕದ ಮಾತನಾಡುವುದನ್ನು ಬಿಟ್ಟು ವಾಲ್ಮೀಕಿ ಹಗರಣದ ನೂರಾರು ಕೋಟಿ ರೂಪಾಯಿಗಳ ಹಗರಣದ ಹಣ ವಾಪಸ್ಸು ಪಡೆಯುಲು ಹೋರಾಟ ನಡೆಸಲಿ.
ಕಳೆದ 2ವರ್ಷದಲ್ಲಿ ರಾಜ್ಯದ 2 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಾಗ,
ಸರಕಾರಿ ಆಸ್ಪತ್ರೆಗಳಲ್ಲಿ ಕಳಪೆ ಔಷಧಿ ಕೊಟ್ಟು, ಗರ್ಭಿಣಿಯರು, ಬಾಣಂತಿಯರು, ನವಜಾತ ಶಿಶುಗಳು ಮೃತಪಟ್ಟಾಗ ಕರ್ನಾಟಕಕ್ಕೆ ಬರದ ರಾಹುಲ್ ಗಾಂಧಿ,
ಮೈಕ್ರೋ ಫೈನಾನ್ಸ್ ಕಿರುಕುಳದಿಂದ 50ಕ್ಕೂ ಹೆಚ್ಚು ಜನರು ಸಾವಿಗೀಡಾದಾಗ, ಆತ್ಮಹತ್ಯೆ ಮಾಡಿಕೊಂಡಾಗ ತಾವು ಯಾಕೆ ಬರಲಿಲ್ಲ? ಆರ್ ಸಿ ಬಿ ಗೆಲುವಿನ ವಿಜಯೋತ್ಸವದ ಸಂದರ್ಭದಲ್ಲಿ 11 ಜನರು ಸಾವಿಗೀಡಾದಾಗ ಎಲ್ಲಿ ಹೋಗಿದ್ದಿರಿ ರಾಹುಲ್ ಗಾಂಧಿಯವರೆ? ಎಂದು ಪ್ರಶ್ನಿಸಿದ್ದಾರೆ.
ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ಗೊತ್ತಾಗಿ ನಾಟಕ ಪ್ರಾರಂಭವಾಗಿದೆ, ಕಾಂಗ್ರೆಸ್ ಗೆದ್ದಾಗ ಪ್ರಜಾಪ್ರಭುತ್ವದ ಗೆಲುವು ಕಾಂಗ್ರೆಸ್ ಸೋತಿದ್ದರೆ ಇವಿಎಂ ಮೇಲೆ ಅಥವಾ ಸ್ವಾಯತ್ತತೆ ಸಂಸ್ಥೆ ಚುನಾವಣಾ ಆಯೊಗದ ಮೇಲೆ ಆರೋಪಿಸುವುದು ಇವರಿಗೆ ಚಟವಾಗಿದೆ ಚುನಾವಣಾ ಅಕ್ರಮದ ವಿಷಯದಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವೇ ಅಧಿಕಾರ ದುರುಪಯೋಗ ಮಾಡಿರಬೇಕು. 2014ಕ್ಕೆ ಮೊದಲು ಕೇಂದ್ರದಲ್ಲಿ ಅಧಿಕಾರದಲ್ಲಿದ್ದುದು ಕಾಂಗ್ರೆಸ್ ಪಕ್ಷ. ರಾಜ್ಯದಲ್ಲಿ 2013ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ನಮ್ಮ ರಾಜ್ಯದಲ್ಲಿ 2013ರಿಂದ 2025ರ ವರೆಗೆ ಮಧ್ಯದ 4 ವರ್ಷಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸಂದರ್ಭದಲ್ಲೂ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು. 2014ರ ಲೋಕಸಭಾ ಚುನಾವಣೆ ನಡೆದಾಗಲೂ ಕಾಂಗ್ರೆಸ್ ಪಕ್ಷವೇ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. 2019ರಲ್ಲಿ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಪಕ್ಷ ಅಧಿಕಾರದಲ್ಲಿತ್ತು. 2024ರಲ್ಲಿ ಲೋಕಸಭಾ ಚುನಾವಣೆ ಆದಾಗಲೂ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದೆ ಚುನಾವಣಾ ಸಂದರ್ಭದಲ್ಲಿ ಶಿಕ್ಷಕರು, ತಹಶೀಲ್ದಾರ್, ಜಿಲ್ಲಾಧಿಕಾರಿ, ಬಿಬಿಎಂಪಿ ಕಮೀಷನರ್ ರನ್ನು ವರ್ಗಾವಣೆ ಮಾಡುವ ಅಧಿಕಾರ ನಿಮ್ಮ ಕೈಯಲ್ಲೇ ಇದೆ. ಚುನಾವಣಾ ಆಯೋಗವು ಚುನಾವಣಾ ದಿನಾಂಕ ನಿಗದಿ ಮಾಡುತ್ತದೆಯೇ ಹೊರತು ಪ್ರಭಾವ ಬೀರುವ ಸಾಮರ್ಥ್ಯ ಅದಕ್ಕಿಲ್ಲ. ಆಡಳಿತ ನಡೆಸುವವರು ಬೆದರಿಕೆ ಹಾಕಬಹುದು; ಚುನಾವಣಾ ಆಯೋಗವು ಬೆದರಿಕೆ ಹಾಕುವುದಿಲ್ಲ ಇವಿಎಂ ಹ್ಯಾಕರ್ ಬಗ್ಗೆ ಬಹಿರಂಗವಾಗಿ ಚಾಲೆಂಜ್ ಹಾಕಿದಾಗ ಎಲ್ಲಿ ಹೋಗಿದ್ದಿರಿ?
ಕಾಂಗ್ರೆಸ್ ಪಕ್ಷದ ಚುನಾವಣಾ ಅಕ್ರಮದ ಇತಿಹಾಸ ಒಮ್ಮೆ ನೆನಪಿಸಿಕೊಳ್ಳಲಿ, 1975ರಲ್ಲಿ ಜೂನ್‍ನಲ್ಲಿ ಅಲಹಾಬಾದ್ ಹೈಕೋರ್ಟ್ ಜಸ್ಟಿಸ್ ಜಗಮೋಹನ್ ಲಾಲ್ ಸಿನ್ಹ ರವರು ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರ ವಿರುದ್ಧ ತೀರ್ಪು ಕೊಟ್ಟಿದ್ದರಲ್ಲವೇ? ಅದನ್ನು ಸ್ವಲ್ಪ ನೆನಪಿಸಿಕೊಳ್ಳಿ ಎಂದು ಹಿಂದೆ ವಕೀಲರಾಗಿದ್ದ ಸಿದ್ದರಾಮಯ್ಯನವರಿಗೆ ಸವಾಲು ಹಾಕಿದ್ದಾರೆ. ರಾಯಬರೇಲಿ ಕ್ಷೇತ್ರದಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು, ಅಕ್ರಮ ನಡೆಸಿ ಚುನಾವಣೆ ಗೆದ್ದಿದ್ದಾರೆಂದು ಕೋರ್ಟ್ ತೀರ್ಪು ಕೊಡಲಾಗಿತ್ತು. ಕಾಂಗ್ರೆಸ್ಸಿನದು ಅಧಿಕಾರ ದುರುಪಯೋಗ, ಚುನಾವಣಾ ಅಕ್ರಮದ ಇತಿಹಾಸವೆ ಇದೆ.
ಅಂದು ಅಜ್ಜಿಯ ಚುನಾವಣಾ ಅಕ್ರಮ ಮರೆತಿರುವ ಮೊಮ್ಮಗ ರಾಹುಲ್ ಗಾಂಧಿಯವರು ತಾನು ಕಳ್ಳರ ಪರ ಎಂಬಂತೆ ಹೇಳಿಕೆ ಕೊಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ವರದಿ ಮಂಜು ಎಂ.ಚಿಕ್ಕಣ್ಣವರ



















