ಸದಾಪುಷ್ಪವು ಒಂದು ಔಷಧೀಯ ಗುಣವುಳ್ಳ ಸಸ್ಯವಾಗಿದೆ. ಗುಲಾಬಿ ಮಿಶ್ರಿತ ಕೆಂಪು, ಬಿಳಿ ಮುಂತಾದ ಬಣ್ಣಗಳಲ್ಲಿ ಈ ಸಸ್ಯವು ಕಾಣಸಿಗುತ್ತದೆ. ಎಲ್ಲಾ ಋತುವಿನಲ್ಲಿಯೂ ಹೂಬಿಡುವ ಕಾರಣ ಇದನ್ನು ಸದಾಪುಷ್ಪ ಅಥವಾ ನಿತ್ಯಪುಷ್ಪ ಎಂದು ಕರೆಯುತ್ತಾರೆ. ಈ ಗಿಡಮೂಲಿಕೆ ನಮ್ಮ ದೇಶದ್ದಲ್ಲ. ಮೆಡಗಾಸ್ಕರ್ ಇದರ ತವರೂರು. ಉದ್ಯಾನವನಗಳಲ್ಲಿ ಅಲಂಕಾರ ಪುಷ್ಪವಾಗಿ ಬೆಳೆಸಲು ತಂದ ಈ ಪುಟ್ಟಗಿಡ, ಇಡೀ ಭಾರತವನ್ನೇ ವ್ಯಾಪಿಸಿದೆ. ಎಲೆಗಳು ಹಸಿರು ಮತ್ತು ಎದುರು ಬದಿರಾಗಿರುತ್ತವೆ. ಗುಲಾಬಿ ಅಥವಾ ಬಿಳಿ ಬಣ್ಣದ ಹೂ ಬಿಡುತ್ತವೆ. ಮತ್ತೊಂದು ಬಗೆಯಲ್ಲಿ ಬಿಳಿ ಹೂಗಳ ಮಧ್ಯೆ ಗುಲಾಬಿ ಬಣ್ಣವಿರುತ್ತದೆ. ಆದರೆ ಗುಣದಲ್ಲಿ ಎಲ್ಲವೂ ಒಂದೇ ಆಗಿರುತ್ತದೆ. ಇಡೀ ವರ್ಷವೂ ಹೂ ಬಿಡುತ್ತದೆ, ಸಣ್ಣ ಕಣಗಿಲೆ ಎಂದು ಕರೆಯಲ್ಪಡುವ ಈ ಹೂವಿನಲ್ಲಿರುವ ಔಷಧೀಯ ಗುಣ ಅದೆಷ್ಟೋ ಖಾಯಿಲೆಗಳಿಗೆ ರಾಮಬಾಣವಾಗಿದೆ.
ಸದಾಪುಷ್ಪದ ವೈಜ್ಞಾನಿಕ ಹೆಸರು ಕ್ಯಾಥೆರ್ಯಂತಸ್ ರೋಸಿಯಸ್. ಇದು ಎಪೋಸೈನೇಸಿ ಎಂಬ ಕುಲಕ್ಕೆ ಸೇರಿದ ಗಿಡವಾಗಿದೆ. ಇದು ಒಂದು ಬಹುವಾರ್ಷಿಕ ಸಸ್ಯವೂ ಹೌದು. ಈ ಸಸ್ಯದ ಕಾಂಡವು ಮೆದುವಾಗಿರುತ್ತದೆ. ಒಂದು ಮೀಟರ್ ನಷ್ಟು ಉದ್ದ ಬೆಳೆಯುತ್ತದೆ. ಈ ಸಸ್ಯದ ಹೂವುಗಳು ಐದು ದಳಗಳನ್ನು ಹೊಂದಿರುತ್ತದೆ. ಎಲೆಗಳು ಲಂಬ ಗೋಲಾಕಾರದಲ್ಲಿ ಇದ್ದು ಚೂಪಾದ ತುದಿಯನ್ನು ಹೂಂದಿರುತ್ತೇವೆ. ಇದರ ಬೀಜವನ್ನು ಬಿತ್ತಿ ಸಸ್ಯವನ್ನು ಬೆಳೆಸಬಹುದು. ಮತ್ತು ಬೇರು ಹಾಗೂ ಕಾಂಡಗಳಿಂದ ಕೂಡಾ ಗಿಡವನ್ನು ಪಡೆಯಬಹುದು. ಇದನ್ನು ಮರಳು ಮಿಶ್ರಿತ ಮೆತ್ತನೆ ಮಣ್ಣು ಹಾಗೂ ನೀರಿನ ಅಭಾವವಿರುವ ಪ್ರದೇಶದಲ್ಲೂ ಈ ಸಸ್ಯವನ್ನು ಯಶಸ್ವಿಯಾಗಿ ಬೆಳೆಸಬಹುದು.
1950 ರಲ್ಲಿ ಈ ಗಿಡವನ್ನು ವಿಜ್ಞಾನಿಗಳು ಪರೀಕ್ಷೆಗೆ ಒಳಪಡಿಸಿದಾಗ ಇದರಲ್ಲಿ ಔಷಧಿ ಗುಣಗಳು ಇರುವುದು ಪತ್ತೆಯಾಯಿತು. ಇದರಂತೆ ಸದಾಪುಷ್ಪವು 66 ಬಗೆಯ ಕ್ಷಾರಪದಾರ್ಥಗಳನ್ನು ಹೊಂದಿದೆ. ಸದಾಪುಷ್ಪವನ್ನು ಸಂಸ್ಕರಿಸಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುತ್ತಾರೆ.ಎಲೆಗಳಲ್ಲಿ ದೊರಕುವ ವಿನ್‍ಕ್ರಿಸ್ಟಿನ್ ಮತ್ತು ವಿನ್‍ಬ್ಲಾಸ್ಟಿನ್‍ನನ್ನು ರಕ್ತದ ಕ್ಯಾನ್ಸರ್ ನಿವಾರಣೆಯಲ್ಲಿ ಮಹತ್ವ ಪೂರ್ಣವಾಗಿ ಕೆಲಸ ಮಾಡುತ್ತದೆ. ಅಲ್ಲದೆ ಮಧುಮೇಹ ರೋಗದ ನಿಯಂತ್ರಕವಾಗಿ ಬಳಸುತ್ತಾರೆ. ಎಳೆ ಮಗುವಿನ ಹೊಟ್ಟೆನೋವು ನಿವಾರಣೆಗೆ ಎಲೆಗಳ ರಸವನ್ನು ಉಪಯೋಗಿಸುವುದು ಸಹ ಕಾಣುತ್ತೇವೆ. ರಕ್ತದ ಒತ್ತಡದ ಸಮಸ್ಯೆಯಲ್ಲೂ ಸದಪುಷ್ಪದ ಕ್ಷಾರವನ್ನು ಉಪಯೋಗಿಸುವುದುಂಟು. ಅನೇಕ ಖಾಯಿಲೆಗಳಿಗೆ ಇದನ್ನು ಮನೆ ಮದ್ದಾಗಿ ಉಪಯೋಗಿಸುತ್ತಾರೆ. ಅನೇಕ ಹೆಸರುಗಳಿಂದ ಕರೆಯಲ್ಪಡುವ ಸದಾಪುಷ್ಪವನ್ನು ಶತಮಾನಗಳಿಂದ ಸಾಂಪ್ರದಾಯಿಕ ಔಷಧದಲ್ಲಿ ಬಳಸಲಾಗುತ್ತಿದೆ. ಈ ಹೂವುಗಳು ನೋಡಲು ಸುಂದರವಾಗಿದ್ದು, ಇದು ಔಷಧೀಯ ಗುಣಗಳನ್ನು ಹೊಂದಿದೆ. ಅನೇಕ ಖಾಯಿಲೆಗಳ ನಿರ್ವಹಣೆಯಲ್ಲಿ ಇದು ಪ್ರಯೋಜನಕಾರಿಯಾಗಿದೆ.
ರಕ್ತದ ಕ್ಯಾನ್ಸರ್ ಸಮಸ್ಯೆಗೆ ಸಂಜೀವಿನಿ
ಈ ಗಿಡದ ಒಂದು ಹಿಡಿ ಎಲೆಗಳನ್ನು ತಂದು ನೆರಳಿನಲ್ಲಿ ಚೆನ್ನಾಗಿ ಒಣಗಿಸಿ ಚೂರ್ಣ ಮಾಡುವುದು. ಅರ್ಧ ಟೀ ಚಮಚ ಚೂರ್ಣವನ್ನು ಒಂದು ಚೆಂಬು ನೀರಿಗೆ ಹಾಕಿ ಕಾಯಿಸಿ ಆರಿಸಿ ಕುಡಿಯುವುದು. ಮೂರು ಟೀ ಚಮಚ ದಿವಸಕ್ಕೆ ಎರಡು ಬಾರಿ ಬೆಳಿಗ್ಗೆ ಮತ್ತು ಸಾಯಂಕಾಲ ಉಪಯೋಗಿಸಿದರೆ ರೋಗ ತಡೆಗಟ್ಟಲು ಸಹಕಾರಿ ಆಗಬಹುದು. ಇದು ರಕ್ತದ ಕ್ಯಾನ್ಸರಿಗೆ ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಈ ರೀತಿ ರಕ್ತದ ಕ್ಯಾನ್ಸರ್ ಆದವರಿಗೆ ಉಳಿಸುವ ಸಾಮರ್ಥ್ಯ ಈ ಗಿಡಕ್ಕೆ ಇದೆ ಅಂದರೆ ಅತಿಶಯೋಕ್ತಿಯಾಗಲಾರದು.
ಸಕ್ಕರೆ ಕಾಯಿಲೆಗೆ ಪರಿಣಾಮಕಾರಿ
ಈ ಗಿಡದ ನಾಲ್ಕೈದು ಹಸಿರೆಲೆಗಳನ್ನು ತಂದು ಚೆನ್ನಾಗಿ ತೊಳೆದು ಪ್ರತಿನಿತ್ಯ ಬೆಳಗ್ಗೆ ತಿನ್ನುವುದು. ಅಥವಾ ಬರಿಹೊಟ್ಟೆಯಲ್ಲಿ ನಿತ್ಯ ಪುಷ್ಟಿ ಹೂಗಳನ್ನು ಅಗೆದು ತಿನ್ನುವುದು. ನಾಲ್ಕು ಬಿಳೀ ಪುಷ್ಪವನ್ನು ಅರ್ಧ ಬಟ್ಟಲು ನೀರಿಗೆ ಹಾಕಿ ಕಾಯಿಸಿ ಕಾಲು ಬಟ್ಟಲು ಕಷಾಯವನ್ನು ತಣ್ಣಗೆ ಮಾಡಿ ಬೆಳಗ್ಗೆ ಬರೀ ಹೊಟ್ಟೆಯಲ್ಲಿ ಸೇವಿಸುವುದರಿಂದ ಸಕ್ಕರೆ ಖಾಯಿಲೆ ತಡೆಗಟ್ಟಬಹುದು. ಹಾಗೆಯೇ ಸದಾಪುಷ್ಪದ ಬೇರನ್ನು ತೆಗೆದುಕೊಂಡು ತೊಳೆದು ನೆರಳಿನಲ್ಲಿ ಒಣಗಿಸಿ ಸಣ್ಣಗೆ ಪುಡಿಮಾಡಿ ಒಂದರಿಂದ ಎರಡು ಚಿಟಿಕಿಯಷ್ಟು ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ನಿಯಮಿತವಾಗಿ ತಿಂದರೆ ಸಕ್ಕರೆ ಖಾಯಿಲೆಯು ಹತೋಟಿಗೆ ಬರಬಹುದಾಗಿದೆ. ಆಯುರ್ವೇದದ ಪ್ರಕಾರ ಮಧುಮೇಹ ನಿರ್ವಹಣೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಂಯುಕ್ತಗಳನ್ನು ಸದಾಪುಷ್ಪ ಒಳಗೊಂಡಿದೆ. ಮಧುಮೇಹ ನಿರ್ವಹಣೆಯಲ್ಲಿ ಈ ಗಿಡದ ಪ್ರಮುಖ ಪ್ರಯೋಜನವೆಂದರೆ ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸುವ ಸಾಮರ್ಥ್ಯವನ್ನು ಹೊಂದಿದೆ. ವಿಶೇಷವಾಗಿ ವಿನ್‌ಕಾಮೈನ್ ಮತ್ತು ವಿನ್‌ಬ್ಲಾಸ್ಟಿನ್, ಇದು ಹೈಪೊಗ್ಲಿಸಿಮಿಕ್ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತದೆ. ಈ ಸಂಯುಕ್ತಗಳು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಸಸ್ಯದ ಇನ್ನೊಂದು ಪ್ರಮುಖ ಕೆಲಸವೆಂದರೆ ಆಲ್ಕಲಾಯ್ಡ್‌ಗಳು ಮೇದೋಜ್ಜೀರಕ ಗ್ರಂಥಿಯಲ್ಲಿನ ಬೀಟಾ ಕೋಶಗಳ ಪುನರುತ್ಪಾದನೆಯಲ್ಲಿ ಸಹಾಯ ಮಾಡುತ್ತವೆ. ಇದು ಇನ್ಸುಲಿನ್ ಸ್ರವಿಸುವಿಕೆಗೆ ಕಾರಣವಾಗಿದೆ. ಈ ಪುನರುತ್ಪಾದನೆಯು ಇನ್ಸುಲಿನ್ ಅನ್ನು ಉತ್ಪಾದಿಸುವ ಮತ್ತು ನಿಯಂತ್ರಿಸುವ ಮೂಲಕ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಪರಿಣಾಮ ಇದು ಲಿಪಿಡ್ ಪ್ರೊಫೈಲ್‌ಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದು ಮತ್ತು ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಒಟ್ಟಾರೆ ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸಿ, ಉತ್ತಮವಾಗಿಡುತ್ತದೆ. ಜೊತೆಗೆ ಸದಾಪುಷ್ಪದ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ದೇಹದಲ್ಲಿನ ಹಾನಿಕಾರಕ ಫ್ರೀ ರಾಡಿಕಲ್‌ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಈ ತೊಡಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ಅದರ ಉರಿಯೂತದ ಪರಿಣಾಮಗಳು ಮಧುಮೇಹಕ್ಕೆ ಸಂಬಂಧಿಸಿದ ಕೆಲವು ದೀರ್ಘಕಾಲದ ಉರಿಯೂತವನ್ನು ನಿವಾರಿಸುತ್ತದೆ.
ಅಧಿಕ ರಕ್ತ ದಿವ್ಯ ಔಷಧಿ
ಸದಾಪುಷ್ಪದ ಎಲೆಗಳನ್ನು ತಂದು ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಿಕೊಳ್ಳುವುದು. ಒಂದು ಟೀ ಚಮಚ ಚೂರ್ಣವನ್ನು ಒಂದು ಬಟ್ಟಲು ನೀರಿಗೆ ಹಾಕಿ ಚೆನ್ನಾಗಿ ಕಾಯಿಸಿ ಕಷಾಯ ಮಾಡುವುದು. ತಣ್ಣಗಾದ ಮೇಲೆ 1/8 ಬಟ್ಟಲು ಕಷಾಯವನ್ನು ಸೇವಿಸುವ ಮುಖಾಂತರ ಬಿಪಿ ತಡೆಗಟ್ಟಲು ಸಹಕಾರಿಯಾಗಲಿದೆ. ಹಾಗೂ ಅಧಿಕ ರಕ್ತದ ಒತ್ತಡ ಇದ್ದವರು ಪ್ರಾರಂಭದ ಸಮಯದಲ್ಲಿ ಬಿಳಿ ಸದಾಪುಷ್ಪದ ಎಲೆಗಳನ್ನು ತೆಗೆದುಕೊಂಡು ಅದರ ರಸ ತೆಗೆದು ಬೆಳಗ್ಗೆ ಅಥವಾ ರಾತ್ರಿ ಎರಡರಿಂದ ಮೂರು ಸಣ್ಣ ಚಮಚದಷ್ಟು ತೆಗೆದುಕೊಂಡರೆ ಅಧಿಕ ರಕ್ತದೊತ್ತಡ ಹಿಡಿತದಲ್ಲಿ ಇಟ್ಟುಕೊಳ್ಳಬಹುದು.
ಸುಟ್ಟ ಗಾಯ ಮತ್ತು ಬೊಬ್ಬಗಳಿಗೆ ಇದು ಸಹಕಾರಿ
ಸದಾಪುಷ್ಪ ಗಿಡದ ಒಂದು ಹಿಡಿ ಹಸಿ ಎಲೆಗಳನ್ನು ತಂದು ಚೆನ್ನಾಗಿ ರಸ ತೆಗೆಯುವುದು. ಈ ರಸದಲ್ಲಿ ಸ್ವಲ್ಪ ಹಸಿ ಅಕ್ಕಿ ಹಿಟ್ಟನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಗಾಯದ ಮೇಲೆ ಮಂದವಾಗಿ ಲೇಪಿಸುವುದು.
ಬೇಧಿ ಮತ್ತು ರಕ್ತ ಭೇಧಿಯಲ್ಲಿ ಉಪಯೋಗ
10ಗ್ರಾಂ ಸದಾಪುಷ್ಪವು ಹಸಿರೆಲೆಗಳನ್ನು ತಂದು ಚೆನ್ನಾಗಿ ಕಾಯಿಸಿ ಕಷಾಯ ಮಾಡುವುದು.ತಣ್ಣಗಾದ ಮೇಲೆ ಈ ಕಷಾಯವನ್ನು ಎರಡು ಭಾಗ ಮಾಡಿ ಬೆಳಿಗ್ಗೆ ಮತ್ತು ಸಾಯಂಕಾಲ ಸೇವಿಸುವುದು. ಹೀಗೆ 5 ರಿಂದ 7 ದಿವಸ ಉಪಚಾರವನ್ನು ಮುಂದುವರೆಸುವುದು. ಮಲಬದ್ದತೆಯನ್ನು ಸಹ ನಿವಾರಿಸಬಲ್ಲ ಗುಣ ಈ ಮೂಲಿಕೆಗೆ ಇದೆ ಎಂದು ತಿಳಿದು ಬಂದಿದೆ.
ಗಾಯಗಳಿಂದ ರಕ್ತಸ್ರಾವ ರೋಗಕ್ಕೆ
ಗಾಯ ವಾಸಿಯಾಗಲು ಒಣಗಿದ ನಿತ್ಯಪುಷ್ಟಿ ಎಲೆಯನ್ನು ಗಾಯಗಳ ಮೇಲೆ ಹಾಕುವುದರಿಂದ ಗಾಯಗಳು ವಾಸಿಯಾಗುವವು. ಅಲ್ಲದೆ ಗಾಯವಾದ ಜಾಗಕ್ಕೆ ಸದಾಪುಷ್ಪದ ಎಲೆಗಳನ್ನು ತೆಗೆದುಕೊಂಡು ಅರಶಿನದ ಜೊತೆ ನುಣ್ಣಗೆ ಅರೆದು ಅದರ ಲೇಪವನ್ನು ಗಾಯವಾದ ಜಾಗಕ್ಕೆ ದಿನದಲ್ಲಿ ಎರಡರಿಂದ ಮೂರು ಬಾರಿ ಹಚ್ಚಿದರೆ ಗಾಯ ಕೂಡಲೇ ವಾಸಿಯಾಗುತ್ತದೆ. ಮೂಗಿನಿಂದ ರಕ್ತ ಸ್ರಾವ ಆಗುತ್ತಿದ್ದರೆ ಸದಾಪುಷ್ಪ ಮತ್ತು ಎಳ ದಾಳಿಂಬೆಯ ರಸವನ್ನು ತೆಗೆದು ಮೂಗಿಗೆ ಹಾಕಿದರೆ ಮೂಗಿನಿಂದ ಆಗುವ ರಕ್ತಸ್ರಾವ ಗುಣವಾಗುತ್ತದೆ, ಅಲ್ಲದೆ ಗಂಟಲು ಕೆರೆತ, ಬಾಯಿ ಹುಣ್ಣು, ಒಸಡಿನಲ್ಲಿ ರಕ್ತಸ್ರಾವ ಆಗುತ್ತಿದ್ದವರಿಗೆ ಇದು ಅತ್ಯಂತ ಅತ್ಯುತ್ತಮ ಔಷಧಿವಾಗಿದೆ.
ಹೀಗೆ ಸದಾಪುಷ್ಪವು ಅನೇಕ ರೋಗಗಳಿಗೆ ಜೀವದಾನ ನೀಡುವ ಅದ್ಭುತ ಗಿಡವಾಗಿದೆ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು. ಅಂತೆಯೇ
ಈ ಸದಾಪುಷ್ಪವು ಬೆಳೆಸಲು ಕಡಿಮೆ ನೀರು ಸಾಕು. ಇದರ ಬುಡ ಒಣಗಿದಾಗ ಮಾತ್ರ ನೀರು ಹಾಕಿದರಾಯಿತು. ಇದು ಮಣ್ಣಿನಲ್ಲಿರುವ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದಕ್ಕೆ ಸೂರ್ಯನ ಬೆಳಕು ಇದ್ದರೆ ಸಾಕು.ಇದು ಉತ್ತಮವಾಗಿ ಬೆಳೆದು ಮಾನವರಿಗೆ ಅನುಕೂಲ ಮಾಡಿಕೊಡುವ ದಿವ್ಯ ಔಷಧಿ ಗಿಡವಾಗಿದೆ.
ಆಶಯ ಮಾತು: ಸದಾಪುಷ್ಪ ಗಿಡವು ಅನೇಕ ಖಾಯಿಲೆಗಳಿಗೆ ಪರಿಹಾರ ನೀಡುವದಂತು ಗ್ಯಾರಂಟಿ. ಆದರೂ ಯಾವುದಾದರೂ ಒಂದು ಹೊಸ ಆಯುರ್ವೇದ ಪದ್ಧತಿಯನ್ನು ಬಳಸುವ ಮುನ್ನ ಒಬ್ಬ ಒಳ್ಳೆಯ ಆಯುರ್ವೇದ ತಜ್ಞರನ್ನು ಭೇಟಿಯಾಗೋದು ಅಷ್ಟೇ ಉತ್ತಮ. ನಿಮ್ಮ ಆರೋಗ್ಯದ ಸದ್ಯದ ಪರಿಸ್ಥಿತಿಯನ್ನು ಮತ್ತು ನೀವು ಈಗ ತೆಗೆದುಕೊಳ್ಳುತ್ತಿರುವ ಔಷಧಿಗಳ ವಿವರಗಳನ್ನು ಅವರಿಗೆ ನೀಡಿ ಅವರಿಂದ ಸೂಕ್ತ ಸಲಹೆಗಳನ್ನು ಪಡೆದು ನೀವು ಇಷ್ಟ ಪಡುವ ಹೊಸತೊಂದು ಆಯುರ್ವೇದ ಪದ್ಧತಿಗೆ ನಿಮ್ಮನ್ನು ಒಡ್ಡಿಕೊಳ್ಳಬೇಕೇ ಅಥವಾ ಬೇಡವೇ ಎಂಬುದನ್ನು ಅವರಿಂದ ಸಲಹೆ ಪಡೆದುಕೊಳ್ಳುವುದು ಸೂಕ್ತ ಮತ್ತು ಅವಶ್ಯ ಪ್ರಕ್ರಿಯೆಯಾಗಿದೆ.
- ಸಂಗಮೇಶ ಎನ್ ಜವಾದಿ
ಬರಹಗಾರರು, ಪತ್ರಕರ್ತರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು.
ಬೀದರ ಜಿಲ್ಲೆ.
9663809340.



















