ಬಳ್ಳಾರಿ / ಕಂಪ್ಲಿ : ಕಳೆದ ಮೂರು ದಿನದಿಂದ ಉಕ್ಕಿ ಹರಿಯುತ್ತಿದ್ದ ಕಂಪ್ಲಿ-ಕೋಟೆಯ ತುಂಗಭದ್ರಾ ನದಿ ಪ್ರವಾಹವು ಗುರುವಾರ ಇಳಿಕೆ ಕಂಡಿದೆ.
ಮಲೆನಾಡಿನಲ್ಲಿ ಮಳೆ ಪ್ರಭಾವ ಕಡಿಮೆಯಾದ ಹಿನ್ನಲೆ ತುಂಗಭದ್ರ ಜಲಾಶಯಕ್ಕೆ ಬರುವ ಒಳ ಹರಿವಿನ ಪ್ರಮಾಣ ಇಳಿಕೆ ಕಂಡಿದ್ದು, ಇದರಿಂದ ಜಲಾಶಯದಿಂದ ಮಧ್ಯಾಹ್ನದ ಒತ್ತಿಗೆ ನದಿ ಪ್ರವಾಹ ಸುಮಾರು 86 ಸಾವಿರ ಕ್ಯೂಸೆಕ್ಗೆ ಇಳಿಮುಖವಾಗಿದೆ. ಇದರಿಂದ ಇಲ್ಲಿನ ಜನರು ನಿಟ್ಟುಸಿರುವ ಬಿಡುವಂತಾದರೂ, ಅಧಿಕಾರಿಗಳ ತಳಮಳದ ಆಲೋಚನೆಯಿಂದಾಗಿ ಸೇತುವೆ ಮೇಲೆ ಸಂಚಾರ ಇಲ್ಲದಂತಾಗಿದೆ.
ಸತತ ಮೂರು ದಿನ ಸೇತುವೆ ಮೇಲೆ ನೀರು ಹರಿದ ಪರಿಣಾಮ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಇಂದು ನೀರು ಇಳಿಮುಖವಾಗಿ ಸೇತುವೆ, ದೇವಸ್ಥಾನಗಳು ಕಾಣುತ್ತಿವೆ. ಸೇತುವೆ ಮೇಲಿನ ನೀರು ಇಳಿಮುಖವಾಗಿದ್ದರಿಂದ ಪಾದಚಾರಿ ಅಥವಾ ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ, ಇಲ್ಲಿನ ರೈತರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ವೃದ್ಧರಿಗೆ ಬಹಳಷ್ಟು ಅನುಕೂಲವಾಗುತ್ತದೆ. ಈ ದೃಷ್ಠಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಸಂಚಾರಕ್ಕೆ ಮುಕ್ತ ಅವಕಾಶ ಮಾಡಿಕೊಡಬೇಕೆಂದು ಪ್ರತಿಯೊಬ್ಬರ ಹಕ್ಕೋತ್ತಾಯವಾಗಿದೆ.
ಕಂಬಿಗಳಲ್ಲಿ ಜಲಸಸ್ಯ :
ಇಲ್ಲಿನ ನದಿ ನೀರು ಇಳಿಕೆ ಕಂಡಿತಾದರೂ, ಸೇತುವೆ ಕಂಬಿಗಳಲ್ಲಿ ಜಲಸಸ್ಯ ಆವರಿಸಿಕೊಂಡಿರುವುದು ಕಂಡು ಬಂತು. ಇಲ್ಲಿನ ಕಸ, ಕಡ್ಡಿ ಸೇರಿದಂತೆ ಜಲಸಸ್ಯವನ್ನು ಪುರಸಭೆಯಿಂದ ಸ್ವಚ್ಚಗೊಳಿಸಬೇಕಾಗಿದೆ. ಪ್ರತಿ ಬಾರಿಯೂ ನೀರು ಇಳಿಕೆ ತತ್ಕ್ಷಣದಲ್ಲಿ ಸ್ವಚ್ಚತಾ ಕಾರ್ಯ ಮಾಡಲಾಗುತ್ತಿತ್ತು. ಆದರೆ, ಇಂದು ಸ್ವಚ್ಚತೆಯತ್ತ ಮುಖ ಮಾಡದಂತ ಪರಿಸ್ಥಿತಿ ಕಂಡು ಬಂತು.
ವರದಿ : ಜಿಲಾನಸಾಬ್ ಬಡಿಗೇರ್



















