
ಗುರುಮಠಕಲ್ ನಲ್ಲಿ ಕಣ್ಮನ ಸೆಳೆದ ಕೈಕುಸ್ತಿ ಪಂದ್ಯ.

ಗುರುಮಠಕಲ್ ಪಟ್ಟಣದ ಕಾಕಲವಾರ ಬೇಸ್ ಆಂಜನೇಯ ಸನ್ನಿಧಿಯಲ್ಲಿ ನಡೆಯುವ ಗಡಿ ಭಾಗದ ಪ್ರಸಿದ್ಧ ಗ್ರಾಮೀಣ ಕ್ರೀಡೆಯಾದ ಕೈಕುಸ್ತಿ ಪಂದ್ಯಾವಳಿಯು ನೆರೆದ ಸಾವಿರಾರು ನೋಡುಗರ ಮನ ಸೆಳೆಯಿತು.
ಗುರುಮಠಕಲ್: ಪಟ್ಟಣದ ಕಾಕಲವಾರ ಬೇಸ್ ನ ಪ್ರಸಿದ್ಧ ಆಂಜನೇಯ ಸ್ವಾಮಿ ಉತ್ಸವವು ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡಿತು.
ಪ್ರತಿವರ್ಷದ ಸಂಪ್ರದಾಯದಂತೆ ಈ ಬಾರಿ ಬೆನಕನ ಅಮವಾಸೆಯು ಶ್ರಾವಣಮಾಸದ ಕೊನೆಯ ಶನಿವಾರದಂದು ಬಂದ ಪ್ರಯುಕ್ತ ಪಟ್ಟಣದ ಎಲ್ಲಾ ದೇವಸ್ಥಾನಗಳಲ್ಲಿ ಆಂಜನೇಯ ಸ್ವಾಮಿಗೆ ವಿಶೇಷ ಅಭಿಷೇಕ ಅಲಂಕಾರ ನಡೆದವು.
ಆಂಜನೇಯ ಸ್ವಾಮಿಯ ಎತ್ತರದ ಮೂರ್ತಿಯನ್ನು ಪಟ್ಟಣದ ಮುಖ್ಯರಸ್ತೆಗಳಲ್ಲಿ ಜಯಘೋಷಗಳ ನಡುವೆ ಡೊಳ್ಳು ಭಾಜಾ ಭಜಂತ್ರಿ ಮತ್ತು ಭಜನೆಯ ಮೂಲಕ ಮೆರವಣಿಗೆ ಮಾಡಲಾಯಿತು.
ಈ ಗಡಿಭಾಗದ ಪ್ರಸಿದ್ದ ಗ್ರಾಮೀಣ ಭಾಗದ ಪ್ರಮುಖ ಕ್ರೀಡೆಯಾದ ಕೈಕುಸ್ತಿ ಪಂದ್ಯಾವಳಿಯು ದೇವಸ್ಥಾನದ ಪ್ರಮುಖ ಆಕರ್ಷಣೆಯಾಗಿತ್ತು.
ಬೆಳಿಗ್ಗೆಯಿಂದ ರಾತ್ರಿವರೆಗೆ ನಡೆಯುವ ಈ ಪಂದ್ಯವಳಿಗಳಲ್ಲಿ ಭಾಗವಹಿಸಲು ಸುತ್ತಮುತ್ತಲಿನ ಗ್ರಾಮಗಳು, ತಾಂಡಾಗಳು ಸೇರಿದಂತೆ ತೆಲಂಗಾಣ ರಾಜ್ಯದ ಗ್ರಾಮಗಳ ಭಕ್ತಾದಿಗಳು ಆಗಮಿಸುವುದು ವಿಶೇಷವಾಗಿದೆ.
ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಬಂದ ಭಕ್ತರಿಗೆ ಅನ್ನಸಂತರ್ಪಣೆ ಜೊತೆಗೆ ಪಂದ್ಯಾವಳಿಗಳನ್ನು ವೀಕ್ಷಿಸಲು ಅನುಕೂಲ ಮಾಡಲಾಗಿತ್ತು.
ಕಾಕಲವಾರ ಬೇಸ್ ಆಂಜನೇಯ ಸ್ವಾಮಿ ಜಾತ್ರಾ ಉತ್ಸವಕ್ಕೆ ಆಗಮಿಸುವ ಜನರ ಸುರಕ್ಷತೆಗಾಗಿ ಪೊಲೀಸರು ಸೂಕ್ತ ಭದ್ರತಾ ವ್ಯವಸ್ಥೆ ಮಾಡಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















