ಉತ್ತರ ಕನ್ನಡ/ ಶಿರಸಿ :ಇತ್ತೀಚಿಗೆ ಗಾಯತ್ರಿ ಗೆಳೆಯರ ಬಳಗದಲ್ಲಿ ಜಸ್ಟಿಸ್ ಜಿ ಎನ್ ಸಭಾಹಿತ, ಜಸ್ಟಿಸ್ ವಿ ಜಿ ಸಭಾಹಿತ ಸ್ಮರಣೆ, ಉಪನ್ಯಾಸ ನೀಡುತ್ತಾ ಶಂಕರ ಹೆಗಡೆ ಭದ್ರನ್ ಅವರು, ಸಿದ್ದೇಶ್ವರ ಸ್ವಾಮೀಜಿಗಳು ಸರಳಾತಿ ಸರಳ ವ್ಯಕ್ತಿಗಳಾಗಿದ್ದರು, ಅವರು ದೇವರ ಅಪರೂಪದ ಸೃಷ್ಟಿ; ಕೋಟಿಗೊಬ್ಬ ಎಂದು ತಾತ್ವಿಕ ನಿಲುವು, ಬಡತನ, ಅಜ್ಞಾನ ನಿವಾರಣೆ ಕುರಿತು ಅವರ ಚಿಂತನೆಗಳನ್ನು ಮನೋಜ್ಞವಾಗಿ ತಿಳಿಸಿ ಮುಂದುವರೆದು, ಸಿದ್ದೇಶ್ವರ ಸ್ವಾಮೀಜಿಗಳ ಬಹುಮುಖ ಚಿಂತನೆಯ, ದೃಷ್ಟಿಕೋನದ ನಾಲ್ಕಾರು ದೃಷ್ಟಾಂತಗಳನ್ನು ಉದಾಹರಣೆ ನೀಡಿ, ಅವರು ಇಪ್ಪತ್ತಕ್ಕೂ ಹೆಚ್ಚು ಕೃತಿ ರಚನೆ ಮಾಡಿದ್ದು, ಅವರ ಕೃತಿಗಳಾದ ಶಿವಸೂತ್ರ, ಪತಂಜಲ ಸೂತ್ರ, ಭಕ್ತಿ ಸೂತ್ರ ಪುಸ್ತಕಗಳನ್ನು ಪ್ರಧಾನಿ ಮೋದಿ ಅವರಿಂದ ಬಿಡುಗಡೆಗೊಳಿಸಿದ್ದರು. ಮೋದಿಯವರು ಅವರನ್ನು ಬಹಳ ಮೆಚ್ಚಿಕೊಂಡಿದ್ದರು ಎಂದು ತಿಳಿಸಿದರು. ಮೌನ ಅರ್ಥವಾಗದಿದ್ದರೆ ಮಾತು ಅರ್ಥವಾಗದು ಎಂಬ ನಿಲುವಿನವರಾಗಿದ್ದರು ಎಂದು ಸಿದ್ದೇಶ್ವರ ಸ್ವಾಮೀಜಿಗಳ ಕುರಿತು ಪಾಂಡಿತ್ಯಪೂರ್ಣ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಉತ್ಸಾಹಿ ಸ್ವ ಉದ್ಯೋಗಕ್ಕೆ ಮಾದರಿಯಾದ ಸಂತೋಷ ಹೆಬ್ಬಾರ ಅವರನ್ನು ಸನ್ಮಾನಿಸಲಾಯಿತು. ಸಂತೋಷ ಹೆಬ್ಬಾರ ಅವರನ್ನು ಪರಿಚಯಿಸುತ್ತಾ ಆಶಯ ನುಡಿಗಳನ್ನಾಡಿದ ಸಾಹಿತಿ, ಪ್ರಾಧ್ಯಾಪಕ ಉಮೇಶ ನಾಯ್ಕ ಅವರು, ಯಶಸ್ಸಿಗೆ, ಮಾಲಕನು ಸೇವಕನೂ ಆಗಿರಬೇಕು ಅಂತಹ ಅಪರೂಪದ ಗುಣಗಳನ್ನು ಹೆಬ್ಬಾರರು ಹೊಂದಿದ್ದಾರೆ,
ಸಮಾಜದಲ್ಲಿ, ಸೇವೆಯಲ್ಲಿ ಮಾನವೀಯ ಸ್ಪರ್ಶ ಹೊಂದಿರುವಂತಹ ಇಂತಹ ಯುವಕರನ್ನು ಗುರುತಿಸುವುದರಿಂದ ಯುವಜನತೆಯಲ್ಲಿ ಸ್ವಾವಲಂಬನೆ ಬದುಕಿಗೆ ಪ್ರೇರಣೆಯಾಗಲಿದೆ, ಅವರು ವಿದ್ಯುತ್ ಬಳಸದೆ ಸೌರ ವಿದ್ಯುತ್ ನಂತಹ ನೈಸರ್ಗಿಕ ಶಕ್ತಿಯನ್ನು ಬಳಸಿ ಕೃಷಿಕರು ಹೇಗೆ ಹೊಸಹೊಸ ಪರಿಕರಗಳನ್ನು ಉಪಯೋಗಿಸಿ, ಪ್ರಯೋಜನ ಪಡೆಯಬಹುದು ಎಂಬುದಕ್ಕೆ
ಉತ್ತಮ ಉದಾಹರಣೆ ಎಂದು ಅವರ ಸಾಹಸ ಮನೋವೃತ್ತಿ ಸಮಾಜಕ್ಕೆ ಮಾದರಿಯದು ಎಂದು ತಿಳಿಸಿದರು ಹಾಗೂ ಸದ್ದಿಲ್ಲದೆ ಇಂತಹ ಗುರುತಿಸುವಿಕೆ ಕಾರ್ಯ ಮಾಡುತ್ತಿರುವ ಬಳಗದವರನ್ನು ಶ್ಲಾಘಿಸಿದರು.
ಸನ್ಮಾನಕ್ಕೆ ಉತ್ತರಿಸುತ್ತಾ ಸಂತೋಷ ಹೆಬ್ಬಾರ ಅವರು, ನನ್ನ ಇಂತಹ ಕಾರ್ಯಕ್ರಮಗಳಿಗೆ ಜನರ ಸಹಕಾರ ಅಗತ್ಯ, ನನ್ನ ಈ ಸನ್ಮಾನ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಹೇಳಿ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿರಸಿ ತಾಲೂಕ ಮಡಿವಾಳರ ಸಂಘದ ಅಧ್ಯಕ್ಷ ಈಶ್ವರ ಗಿಡ್ಡನ್ ರವರು ಇಂತಹ ಉತ್ತಮ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿ, ಯುವಕರು ಧೈರ್ಯದಿಂದ ಸ್ವಾವಲಂಬನೆಯತ್ತ ಹೆಜ್ಜೆ ಹಾಕಲಿ ಎಂದು ಆಶಿಸಿದರು.
ಗಾಯತ್ರಿ ಗೆಳೆಯರ ಬಳಗದ ಮುಖ್ಯಸ್ಥ ಎಂ ಎಸ್ ಹೆಗಡೆಯವರು, ಇಂತಹ ಕಾರ್ಯಕ್ರಮಗಳ ಯಶಸ್ಸಿಗೆ ಮಾಧ್ಯಮದವರ ಸಹಕಾರ ಬಹಳವಿದ್ದು, ವಿಶೇಷವಾಗಿ ಮಾಧ್ಯಮದವರನ್ನುರನ್ನು ಸ್ಮರಿಸುತ್ತಾ, ಉಪನ್ಯಾಸಕರು, ಸನ್ಮಾನಿತರಿಗೆ ಗೌರವ ಸಮರ್ಪಣೆ ಮಾಡಿ ಎಲ್ಲರನ್ನೂ ವಂದಿಸಿದರು.
ಲೇಖಕಿ ತಾರಾ ಹೆಗಡೆಯವರು ಎಲ್ಲರನ್ನೂ ಸ್ವಾಗತಿಸಿ, ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಈ ಸಂದರ್ಭದಲ್ಲಿ ಎಲ್ ಆರ್ ಭಟ್- ಲಕ್ಷ್ಮಣ ಶಾನಭಾಗ-ವಿ ಆರ್ ಭಟ್- ಪ್ರಭಾತ ಹೆಗಡೆ- ಎಂ ಜಿ ಹೆಗಡೆ ದಂಪತಿಗಳು, ಡಾ. ರಾಮಚಂದ್ರ ಹೆಗಡೆ ಬಂಡಿಮನೆ, ರಾಮ್ ಪೈ , ಮನೋಹರ ಮಲ್ಮನೆ, ಎಂ ಜಿ ಭಾಗವತ, ಎಲ್ ಜಿ ಭಟ್ಗದ್ದೆ, ಸಿ ಎಸ್ ಹೆಗಡೆ ಎಸ್ ವಿ ಹೆಗಡೆ, ಆರ್ ಎಸ್ ಹೆಗಡೆ, ಡಿ ಎಸ್ ಹೆಗಡೆ, ಕೆ ಪಿ ಹೆಗಡೆ, ತ್ರಿವೇಣಿ ಹೆಗಡೆ, ಕೃಷ್ಣವೇಣಿ ಹೆಗಡೆ, ಆಶಾ ಸಭಾಹಿತ, ಎಸ್ ಮಂಜುನಾಥ, ಆರ್ ಜಿ ದೇಶಪಾಂಡೆ, ಕಾಶಿನಾಥ ಹೆಗಡೆ ಹಾಗೂ ಸಂತೋಷ ಹೆಬ್ಬಾರ ಅವರ ಕುಟುಂಬದ ಸದಸ್ಯರು ಹಾಜರಿದ್ದರು ಎಂದು ಶ್ರೀ
ವಿ ಜಿ ಗಾಯತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಕೊಡಕ್ಕಲ್ ಶಿವಪ್ರಸಾದ್



















