
ಬಾಗಲಕೋಟೆ/ ಜಮಖಂಡಿ :ಸತ್ಸಂಗದಲ್ಲಿ ಸದ್ಗತಿ ಇದೆ ಸತ್ಯಾಸತ್ಯತೆ, ಸಜ್ಜನಿಕೆಯ ಸಾರವೇ ಅಡಗಿದೆ, ಮನುಷ್ಯನನ್ನು ಸವಿ ಬದುಕಿನತ್ತ ಕರೆದುಕೊಂಡು ಹೋಗುವ ಸತ್ಸಂಗವು ಮಾನವನು ಹೇಗೆ ಸಂತೃಪ್ತ ಬದುಕನ್ನು ರೂಢಿಸಿಕೊಳ್ಳಬೇಕು ಎಂಬುದನ್ನು ಕಲಿಸುತ್ತದೆ ಎಂದು ಪರಮಪೂಜ್ಯ ಪಾವನ ಮೂರ್ತಿಗಳಾದ ಯಡಹಳ್ಳಿ ಚಂದ್ರಶೇಖರ ಶ್ರೀಗಳು ಅಭಿಪ್ರಾಯ ಪಟ್ಟರು. ಮುಧೋಳ ತಾಲೂಕಿನ ಯಡಹಳ್ಳಿ ಇಂಗಳಗಿಯ ಶ್ರೀಅಡವಿ ಸಿದ್ದೇಶ್ವರ ಮಠದಲ್ಲಿ ಇತ್ತೀಚಿಗೆ ನಡೆದ “ಗುರುಸ್ಮರಣೆ” ಕಾರ್ಯಕ್ರಮದ ಪಾವನ ಸನ್ನಿಧಾನವನ್ನು ವಹಿಸಿ ಮಾತನಾಡಿ ಮಾನವೀಯ ಸಂಬಂಧಗಳು ಗಟ್ಟಿಗೊಳ್ಳಬೇಕಾದರೆ ಬದುಕಿನೊಳಗೆ ಸಹನೆ ಸೌಹಾರ್ದತೆ, ಸದುವಿನಯ, ನಿರಂತರ ಕ್ರಿಯಾಶೀಲವಾಗಿ ಇರಬೇಕಾಗುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಶರಣಬಸವ ಶಾಸ್ತ್ರಿಗಳು ಮಾತನಾಡಿ ಸತ್ಸಂಗದೊಳಗೆ ಮನುಷ್ಯ ಬದುಕುವುದನ್ನು ಗಳಿಸಿಕೊಳ್ಳುವುದೇ ಸಿರಿತನ. ಬದುಕುವ ರೀತಿ ನೀತಿಗಳು ಎಚ್ಚರಿಕೆ ತಪ್ಪಿದ್ದರಿಂದಲೇ ಸಜ್ಜನಿಕೆ ಸದ್ಭಾವಗಳಿಗೆ ಅವಕಾಶ ದೊರೆಯುತ್ತಿಲ್ಲ. ಸಜ್ಜನ ಸದ್ಭಾವಗಳನ್ನು ರೂಢಿಸಿಕೊಂಡು ಬಾಳುವುದೇ ಯಶಸ್ವಿನಿ ಒಳಗುಟ್ಟಾಗಿದೆ ಎಂದರು. ಜಗದ್ಗುರು ಶ್ರೀ ರೇಣುಕಾಚಾರ್ಯ ಶ್ರೀಮಠದ ಕುಮಾರ ಶ್ರೀಗಳು ಸಜ್ಜನರ ಸಂಗದಿಂದ ಸದ್ಗುಣಗಳು ಪ್ರಾಪ್ತಿಯಾಗುತ್ತವೆ ಎಂದರು. ಸೇವಾ ಧುರೀಣರಾದ ಸದಾಶಿವ ಜಮಖಂಡಿ ಅವರು ಚಂದ್ರಶೇಖರ ಶ್ರೀಗಳ ಪಾದಪೂಜೆ ಮಾಡಿ ಶ್ರೀಗಳನ್ನು ಗೌರವಿಸಿ ಆಶೀರ್ವಾದ ಪಡೆದುಕೊಂಡರು. ಗಣೇಶ ಶಾಸ್ತ್ರಿಗಳು ಸಂಚಾಲಕರಾಗಿ ಕಾಯ೯ ನಿವ೯ಹಿಸಿದರು. ನೆರೆದ ಭಕ್ತಸ್ತೋಮಕ್ಕೆ ಸದಾಶಿವ ಜಮಖಂಡಿ ಪ್ರಸಾದ ವ್ಯವಸ್ಥೆ ಮಾಡಿದ್ದರು.
- ಕರುನಾಡ ಕಂದ



















