ಬಳ್ಳಾರಿ / ಕಂಪ್ಲಿ : ವಿದ್ಯುತ್ ಸ್ಪರ್ಶದಿಂದಾಗಿ ರೈತರು ಬೆಳೆದಿದ್ದ ಕಬ್ಬು ಬೆಳೆಯು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿರುವ ಘಟನೆ ತಾಲೂಕು ಸಮೀಪದ ಬುಕ್ಕಸಾಗರದ ಹೊರವಲಯದಲ್ಲಿ ನಡೆದಿದೆ.
ಇಲ್ಲಿನ ಕಿನ್ನೂರೇಶ್ವರ ದೇವಸ್ಥಾನ ಬಳಿಯಲ್ಲಿರುವ ಸರ್ವೆ ನಂ.118 ಮತ್ತು 119ರಲ್ಲಿರುವ ಸುಮಾರು 4 ಎಕರೆ 10 ಸೆಂಟ್ಸ್ ಜಮೀನಿನಲ್ಲಿ ಕಬ್ಬು ಬೆಳೆದಿದ್ದು, ಇನ್ನೇನು ಕಟಾವು ಹಂತಕ್ಕೆ ಬಂದಿದ್ದ ಬೆಳೆಯು ಬೆಂಕಿಯಲ್ಲಿ ಬೆಂದು, ರೈತರ ಕಣ್ಣಲ್ಲಿ ನೀರು ತರಿಸಿದೆ.
ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ಸೆ.30ರಂದು ಕಟ್ ಆಗಿ ಕಬ್ಬಿನ ಹೊಲಕ್ಕೆ ಬಿದ್ದ ಪರಿಣಾಮ ಇಲ್ಲಿನ ಕಬ್ಬಿನ ಹೊಲವು ಸಂಪೂರ್ಣವಾಗಿ ಸುಟ್ಟು ಕರಕಲವಾಗಿದೆ. ಸತತ 10 ತಿಂಗಳು ಹಗಲು ರಾತ್ರಿ ಎನ್ನದೇ ಶ್ರಮಪಟ್ಟು ಬೆಳೆಸಿದ ರೈತನ ಕಬ್ಬು ಬೆಂಕಿಗಾಹುತಿಯಾಗಿ ನಷ್ಟಕ್ಕೆ ದೂಡಿದೆ. ಎಕರೆಗೆ 40-50 ಸಾವಿರದಂತೆ ಸುಮಾರು 2 ಲಕ್ಷ ವ್ಯಯೆಸಿ ಕಬ್ಬು ಬೆಳೆಯಲಾಗಿದೆ. ಇದರಿಂದ ನಷ್ಟ ಪರಿಹಾರ ಒದಗಿಸಬೇಕೆಂಬುದು ರೈತರ ಒತ್ತಾಯವಾಗಿದೆ.
ಇಲ್ಲಿನ ಕಬ್ಬು ಬೆಳೆಗೆ ಬೆಂಕಿ ಬೀಳಲು ಕಾರಣವಾದ ತಂತಿಗಳನ್ನು ಕೂಡಲೇ ಬದಲಿಸಿ, ಉದ್ದದ ತಂತಿಗಳ ಮಧ್ಯದಲ್ಲಿ ಕಂಬಗಳನ್ನು ಅಳವಡಿಸಿ, ಮುಂದಿನ ಘಟನೆಗೆ ಆಸ್ಪದ ನೀಡದಂತೆ ಅಧಿಕಾರಿಗಳು ಮುಂಜಾಗ್ರತವಾಗಿ ಕ್ರಮವಹಿಸಬೇಕಾಗಿದೆ.
ಇಲ್ಲಿನ ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಆರ್‌ಐ ಮಹಮ್ಮದ್ ಶರೀಪ್, ವಿ.ಎ ಮೌನೇಶ, ಜೆಸ್ಕಾಂ ಜೆಇ ಕೃಷ್ಣಮೂರ್ತಿ ಇವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೃಷಿ ಇಲಾಖೆ ಅಧಿಕಾರಿಗಳು ಕಬ್ಬು ಬೆಳೆಯ ನಷ್ಟದ ವರದಿಯನ್ನು ನೀಡಿದ ನಂತರ ನಷ್ಟರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದೆಂದು ತಿಳಿಸಿದ್ದಾರೆ.
ಜೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ರೈತರ ಬೆಳೆಗಳು ಬೆಂಕಿಗೆ ಭಸ್ಮವಾಗುತ್ತಿವೆ. ಇಲ್ಲಿನ ಪ್ರಗತಿಪರ ರೈತ ಐ.ಚಂದ್ರಶೇಖರರೆಡ್ಡಿ ಅವರಿಗೆ ಸೇರಿದ ಸುಮಾರು ನಾಲ್ಕು ಎಕರೆಯ ಕಬ್ಬು ಬೆಳೆಯಲ್ಲಿ ವಿದ್ಯುತ್ ತಂತಿಗಳು ಕಟ್ ಆದ ಪರಿಣಾಮ ಬೆಂಕಿ ಬಿದ್ದು ಸುಮಾರು 4 ಎಕರೆ ಕಬ್ಬು ಸುಟ್ಟು ಭಸ್ಮವಾಗಿದೆ. ಇದರಿಂದ ಸುಮಾರು 4 ಲಕ್ಷ ರೂ.ಗಳ ಬೆಳೆ ನಷ್ಟವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರದಿಂದ ಬೆಳೆ ನಷ್ಟ ಪರಿಹಾರ ಒದಗಿಸಬೇಕು ಮತ್ತು ರೈತರ ಜಮೀನುಗಳಲ್ಲಿ ಹಾಕಿರುವ ವಿದ್ಯುತ್ ತಂತಿಗಳನ್ನು ಬದಲಿಸುವ ಜೊತೆಗೆ ಉದ್ದದ ತಂತಿಗಳ ಮಧ್ಯದಲ್ಲಿ ಹೊಸ ಕಂಬಗಳನ್ನು ಅಳವಡಿಸಿ, ಜೋತಾಡದಂತೆ ಕ್ಲಿಪ್‌ಗಳನ್ನು ಹಾಕಿ, ಮುಂದಿನ ದಿನದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ಜಾಗೃತಿವಹಿಸಬೇಕು. ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಎಂಬಂತೆ ಕಟಾವು ಹಂತಕ್ಕೆ ಬಂದ ಬೆಳೆ ಸುಟ್ಟು, ನಷ್ಟದಲ್ಲಿ ಬೆಂದು ಹೋಗುವಂತೆ ಮಾಡಿದೆ.
- ಎಲ್. ಎಸ್. ರುದ್ರಪ್ಪ, ಜಿಲ್ಲಾ ಮುಖಂಡ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಜೆ.ಕಾರ್ತಿಕ) ಸಂಘಟನೆ.
ನಮ್ಮ ಸ್ವಂತ ಜಮೀನಿನಲ್ಲಿ ಕಬ್ಬು ಬೆಳೆದಿದ್ದು, ಇನ್ನೇನು ಕಟಾವು ಹಂತಕ್ಕೆ ಬಂದಿದ್ದ ಬೆಳೆಯು ವಿದ್ಯುತ್ ತಂತಿ ಕಟ್ ಆಗಿ ಬಿದ್ದ ಪರಿಣಾಮ ಸಂಪೂರ್ಣವಾಗಿ ಸುಟ್ಟಿದೆ. ಇಲ್ಲಿನ 4 ಎಕರೆಯಷ್ಟು ಕಬ್ಬು ಸುಟ್ಟು ಹೋಗಿದೆ. ಇದರಿಂದ ಲಕ್ಷಾಂತರ ನಷ್ಟವಾಗಿದ್ದು, ನಷ್ಟ ಪರಿಹಾರ ಒದಗಿಸಬೇಕು. ಈ ಹಿಂದೆ ಇಲ್ಲಿನ ರೈತರ ಕಬ್ಬಿನ ಹೊಲಕ್ಕೆ ವಿದ್ಯುತ್ ತಂತಿ ಸ್ವರ್ಶದಿಂದ ಬೆಳೆ ನಷ್ಟವಾಗಿರುವ ಉದಾಹರಣೆ ಬಹಳಷ್ಟಿವೆ. ಆದ್ದರಿಂದ ಅಧಿಕಾರಿಗಳು ಎಚ್ಚರವಹಿಸಿ, ತಂತಿಗಳ ಮಧ್ಯದಲ್ಲಿ ಕಂಬಗಳನ್ನು ಹಾಕಿ, ವಿದ್ಯುತ್ ಅವಘಡವಾಗದಂತೆ ನಿಗಾವಹಿಸಬೇಕು.
- ಐ.ಚಂದ್ರಶೇಖರರೆಡ್ಡಿ, ಕಬ್ಬು ಬೆಳೆಗಾರ, ಬುಕ್ಕಸಾಗರ.
ವರದಿ : ಜಿಲಾನಸಾಬ್ ಬಡಿಗೇರ್




















