
ಬಳ್ಳಾರಿ / ಕಂಪ್ಲಿ : ಮಹಿಳೆಯರು, ನಿರುದ್ಯೋಗಿಗಳು, ಸ್ವಯಂ ಉದ್ಯೋಗವನ್ನು ಕ್ಯೆಗೊಳ್ಳುವುದರಿಂದ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಣೆಗೊಳ್ಳಲಿದೆ ಎಂದು ಶಾಸಕ ಜೆ.ಎನ್.ಗಣೇಶ ತಿಳಿಸಿದರು.
ಆವರು ತಾಲ್ಲೂಕಿನ ರಾಮಸಾಗರ ಗ್ರಾಮದ ಶ್ರೀ ನಗರೇಶ್ವರ ದೇವಸ್ಥಾನದ ಆವರಣದಲ್ಲಿ ಸಮೃದ್ಧಿ ಸಂಜೀವಿನಿ ಒಕ್ಕೂಟದಿಂದ ಬುಧವಾರ ಏರ್ಪಡಿಸಿದ್ದ ವಾರದ ಸಂತೆಯನ್ನು ಉದ್ಘಾಟಿಸಿ ಮಾತನಾಡಿ, ಬದಲಾದ ವೈಜ್ಞಾನಿಕ ಯುಗದಲ್ಲಿ ಒಬ್ಬರ ದುಡಿಮೆಯಿಂದ ಕುಟುಂಬದ ನಿರ್ವಹಣೆ ಅಸಾದ್ಯವಾಗಿದ್ದು, ಮನೆಯಲ್ಲಿನ ಮಹಿಳೆಯರು ಸಹಿತ ಏನಾದರೊಂದು ಸ್ವಯಂ ಉದ್ಯೋಗವನ್ನು ಕ್ಯೆಗೊಳ್ಳುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸ್ವ-ಸಹಾಯಕ ಸಂಘಗಳ ಒಕ್ಕೂಟದಿಂದ ಪ್ರತಿವಾರ ಸಂತೆ ನಡೆಸುವುದರಿಂದ ವಿವಿಧ ರೀತಿಯ ವ್ಯಾಪಾರಗಳನ್ನು ಕೈಗೊಂಡು ಆರ್ಥಿಕವಾಗಿ ಸಬಲರಾಗಬಹುದಾಗಿದೆ. ಇಂತಹ ವ್ಯಾಪಾರಗಳಿಗೆ ಬ್ಯಾಂಕುಗಳಿಂದ ಸಾಲ ಸೌಲಭ್ಯಗಳಿದ್ದು, ಅದನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ವ್ಯಾಪಾರ ಮಾಡಿ ಆರ್ಥಿಕವಾಗಿ ಸದೃಢರಾಗಬೇಕೆಂದ ಅವರು ವಾರದ ಸಂತೆಯನ್ನು ವೀಕ್ಷಿಸಿ ಸ್ವ-ಸಹಾಯ ಸಂಘಗಳ ವ್ಯಾಪಾರಸ್ಥರಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ತಾಲ್ಲೂಕು ಪಂಚಾಯತಿ ಇಒ ಆರ್. ಕೆ. ಶ್ರೀ ಕುಮಾರ್ ಮಾತನಾಡಿ, ಸ್ವ-ಸಹಾಯ ಸಂಘಗಳು ತಯಾರಿಸುವ ವಿವಿಧ ವಸ್ತುಗಳ ಮಾರಾಟಕ್ಕೆ ಸೂಕ್ತ ಮಾರುಕಟ್ಟೆಯನ್ನು ಒದಗಿಸಿಕೊಡುವುದಾಗಿ ತಿಳಿಸಿದರು.
ಗ್ರಾಮ ಪಂಚಾಯತಿ ಅಭಿವ್ರುದ್ಧಿ ಅಧಿಕಾರಿ ಎನ್.ಮಲ್ಲಿಕಾರ್ಜುನ ಮಾತನಾಡಿ, ಗ್ರಾ.ಪಂ.ವ್ಯಾಪ್ತಿಯಲ್ಲಿ 132 ಸ್ವ ಸಹಾಯ ಸಂಘಗಳಿದ್ದು, ಈ ಎಲ್ಲಾ ಸಂಘಗಳು ಒಕ್ಕೂಟ ರಚನೆ ಮಾಡಿಕೊಂಡಿವೆ. ಈ ಒಕ್ಕೂಟದಿಂದ ವಾರದ ಸಂತೆಯನ್ನು ಏರ್ಪಡಿಸಲಾಗಿದೆ. ಈ ವಾರದ ಸಂತೆಯಿಂದ ಸ್ವ ಸಹಾಯಕ ಸಂಘಗಳ ಸದಸ್ಯರಿಗೆ ಅನುಕೂಲವಾಗಲಿದ್ದು, ಸ್ವಸಹಾಯ ಸಂಘಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಆಧಿಕಾರಿ ರಾಜೇಂದ್ರ, ಗ್ರಾ.ಪಂ ಅಧ್ಯಕ್ಷೆ ಎಂ.ಆಶಾ, ಗ್ರಾ.ಪಂ.ಸದಸ್ಯ ಮೌಲಾಸಾಬ್, ಒಕ್ಕೂಟದ ಅಧ್ಯಕ್ಷೆ ಲಲಿತಮ್ಮ, ಕಾರ್ಯದರ್ಶಿ ನಾಗರಾಜರಾವ್ ಕುಲಕರ್ಣಿ, ಮುಖಂಡರಾದ ಎಚ್.ಶಿವಶಂಕರಗೌಡ, ಬಿ.ನಾರಾಯಣಪ್ಪ, ಕಂಪ್ಲಿ ಪುರಸಭೆ ಸದಸ್ಯ ಸಿ.ಆರ್.ಹನುಮಂತ, ತಾ.ಪಂ. ಮಾಜಿ ಸದಸ್ಯ ಕೋಟೆ ಷಣ್ಮುಖ, ಸ್ವ ಸಹಾಯ ಸಂಘಗಳ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















