ಜಗತ್ತಿನ ಅದ್ಭುತ ಸೃಷ್ಟಿ ಎಂದರೆ ಅದು ಮಾನವ ಸೃಷ್ಟಿ. ಇದನ್ನು ವ್ಯಾಖ್ಯಾನ ಮಾಡುವುದು ಅಷ್ಟು ಸುಲಭವಲ್ಲ. ವೈಜ್ಞಾನಿಕ ಲೋಕ ಮತ್ತು ಆಧ್ಯಾತ್ಮಿಕ ಲೋಕ ಇವೆರಡರ ಹಿನ್ನೆಲೆಯಲ್ಲಿ ಅರ್ಥೈಸಿದರು ಹೀಗೆಯೇ ಎಂದು ಹೇಳಲು ಅಸಾಧ್ಯ. ಇಂತಹ ಹುಟ್ಟಿನ ಬಗ್ಗೆ ನಿರಂತರ ಸಂಶೋಧನೆ ನಡೆದರು, ನಡೆಯುತ್ತಿದ್ದರೂ ಹುಟ್ಟಿನ ಗುಟ್ಟು ರಟ್ಟಾಗಿಲ್ಲ. ಅದೇನೇ ಇರಲಿ ಮಾನವರು ಮಾತ್ರ ಪುಣ್ಯವಂತರು.
ಮಾನವ ಜನ್ಮ ಬಹುದೊಡ್ಡದು ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ ಎನ್ನುವ ಮಾತು ಜನಜನಿತವಾಗಿದೆ. ಹಲ್ಲು ಇದ್ದವರಿಗೆ ಕಡಲೆ ಇಲ್ಲ, ಕಡಲೆ ಇದ್ದವರಿಗೆ ಹಲ್ಲು ಇಲ್ಲ ಎನ್ನುವ ಮಾತು ಎಲ್ಲರ ಕಿವಿಯಲ್ಲಿ ಬಿದ್ದಿದೆ. ಎಲ್ಲದೂ ಎಲ್ಲರಿಗೂ ಸಿಗುವುದಿಲ್ಲ ಒಂದಿಷ್ಟಾದರೂ ಕೊರತೆ ಇದ್ದೇ ಇರುತ್ತದೆ. ಅದೆಲ್ಲಾ ಪಾಪ ಕರ್ಮಗಳ ಫಲ ಎಂದು ಭಾವಿಸಿ ಸುಮ್ಮನಾಗುವುದು ಮನುಷ್ಯನ ಗುಣವಾಗಿದೆ. ನಮ್ಮಲ್ಲಿ ಏನಾದರು ಕೊರತೆಯದಾಗ ದೇವರನ್ನು ಶಪಿಸುವುದು ಸರ್ವೇ ಸಾಮಾನ್ಯ. ಹುಟ್ಟು ಸಾವು ಯಾರ ಕೈಯಲ್ಲಿ ಕೂಡಾ ಇಲ್ಲ. ಇಂತಹ ಅಚ್ಚರಿ ಬದುಕಿನ ನಡುವೆ ಮನುಷ್ಯ ಜನ್ಮ ಬೆಳೆದಿದೆ.
ನಾವು ಅಂದುಕೊಂಡಂತೆ ಆಗದಿದ್ದಾಗ ಬೇಸರವಾಗುವುದು ಸಹಜ. ಅದು ಅನಿವಾರ್ಯತೆ ಎನಿಸಿದಾಗ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಕಲ್ಲೊಳಗಿನ ಪುಷ್ಪದಂತೆ ಬೆಳೆಯುತ್ತೇವೆ. ಜೀವ ಬದುಕಿನ ನಡುವೆ ಇಂತಹ ಲಕ್ಷಾಂತರ ಸನ್ನಿವೇಶಗಳು, ಘಟನೆಗಳು ಹಾಗೂ ವೈಕಲ್ಯತೆ ನಮ್ಮ ನಡುವೆ ಬಂದು ಹೋಗುತ್ತವೆ.ಕೆಲವರು ಎದುರಿಸಲು ಹೆದರಿದರೆ ಇನ್ನೂ ಕೆಲವರು ಸಮಸ್ಯೆಗಳನ್ನೆ ಮೆಟ್ಟಿಲು ಮಾಡಿಕೊಂಡು ಕನಸಿನ ಶಿಖರ ಏರುತ್ತಾರೆ. ಇದಕ್ಕೆ ಸಾವಿರಾರು ಉದಾಹರಣೆ ಕೊಡಬಹುದು. ಸ್ಥಳೀಯವಾಗಿ ನಾನು ನೋಡಿದ ಪ್ರಕರಣವನ್ನು ಇಲ್ಲಿ ಬರೆದಿರುವೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನಲ್ಲಿ ಅರಳಿಕೊಪ್ಪ ಎನ್ನುವ ಒಂದು ಪುಟ್ಟ ಗ್ರಾಮವಿದೆ. ಚಿಕ್ಕ ಪುಟ್ಟ ಕೆಲಸವನ್ನು ಮಾಡಿಕೊಂಡು ತನ್ನೆರೆಡು ದೇವರ ಮಕ್ಕಳೊಂದಿಗೆ ಸುಧಾಕರರವರು ಬೆಟ್ಟದಷ್ಟು ಕಷ್ಟವಿದ್ದರೂ ಸಾಸಿವೆ ಕಾಳಷ್ಟು ನೋವನ್ನು ಹೇಳದೆ ಬದುಕು ಸಾಗಿಸುತ್ತಿದ್ದಾರೆ. ಇವರಿಗೆ ದೀಪಿಕಾ ಎನ್ನುವ ಮೊದಲ ಮಗಳಿದ್ದಾಳೆ. ಈ ಮಗುವು ಹುಟ್ಟಿನಿಂದಲೇ ಮೂತ್ರಕೋಶಕ್ಕೆ ಸಂಬಂಧಪಟ್ಟ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಈ ಕಾಯಿಲೆ ತುಂಬಾ ಅಪರೂಪವಾದ ಕಾಯಿಲೆಯಾಗಿದ್ದು ಲಕ್ಷಾಂತರ ಜನರಲ್ಲಿ ಒಬ್ಬರಿಗೆ ಬರುವುದು ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ತಂದೆ ತಾಯಿಗಳು ಹೇಗಾದರೂ ಮಾಡಿ ಮಗುವಿಗೆ ಚಿಕಿತ್ಸೆ ಕೊಡಿಸಬೇಕು ಎಂದು ಹಲವಾರು ಆಸ್ಪತ್ರೆಗಳನ್ನು ಸುತ್ತಿ ಲಕ್ಷಾಂತರ ರೂಪಾಯಿ ಸುರಿದು ಕೈ ಚೆಲ್ಲಿ ಕುಳಿತಿದ್ದಾರೆ. ಹಲವಾರು ಸಂಘಟನೆಗಳು, ಸಮಾಜ ಮುಖಿ ಸಂಸ್ಥೆಗಳು ಹಾಗೂ ಹೃದಯವಂತ ದಾನಿಗಳು ತಮ್ಮ ಕೈಲಾದಷ್ಟು ಸಹಾಯ ಮಾಡಿದರೂ ಕೂಡ ಒಳಿತಾಗಿಲ್ಲ.
ಈ ಕಾಯಿಲೆಯು ಮಗುವಿನ ಜೀವನ ಕಸಿದುಕೊಂಡಿದ್ದು, ಪೋಷಕರು ನರಳಿ ಕೊರಗಿ ಸೋತು ಸತ್ತು ಬದುಕಿರುವರು. ಒಂದೆಡೆ ಆರೋಗ್ಯದ ನೋವು ಮತ್ತೊಂದೆಡೆ ಶಿಕ್ಷಣ ಕೊರತೆ. ಮಗುವಿಗೆ ಕಲಿಯುವ ಆಸೆ ಆದರೆ ತನ್ನ ಕಾಯಿಲೆ ಇದಕ್ಕೆ ಸ್ಪಂದಿಸುತ್ತಿಲ್ಲ ಎನ್ನುವ ಕೊರಗು ದಿನದಿಂದ ದಿನಕ್ಕೆ ಬಾದಿಸಿತು. ಹೆತ್ತವರ ಆತ್ಮ ಬೆಂಬಲ ಹಾಗೂ ಬಾಹ್ಯ ಬೆಂಬಲವೇ ಶ್ರೀರಕ್ಷೆ ಎಂದು ಅರಿತಿದ್ದ ಮಗು ಅವರ ಇರುವಿಕೆಯನ್ನು ಯಾವಾಗಲೂ ಬಯಸಿ ಬೇಡುತ್ತಿದ್ದಳು.
ಎಲ್ಲರಂತೆ ತಾನು ಕೂಡ ಶಾಲೆಗೆ ಹೋಗಬೇಕು ಎನ್ನುವ ಹಂಬಲ ಆದರೆ ಅವಳ ಕಾಯಿಲೆ ಮೂಲೆಗೆ ನೂಕುತ್ತಿರುವುದು ಶೋಚನಿಯ. ಇಂತಹ ಕಾಯಿಲೆಯನ್ನು ಮನಸ್ಸಿನಿಂದ ನೂಕಿ ಮನೆಯಲ್ಲಿ ಕೂತು ಓದಬೇಕು ಎನ್ನುವ ಹಠ ಅವಳಲ್ಲಿ ಮೊಳಕೆಯಾಯಿತು. ಇದರ ಫಲವಾಗಿ ಒಂದು ದಿನ ಕೂಡ ಶಾಲೆ ನೋಡದೆ ಅತ್ಯುತ್ತಮವಾದ ಅಂಕಗಳೊಂದಿಗೆ ಮೆಟ್ರಿಕ್ ಉತ್ತಿರ್ಣಳಾದಳು. ಇಲ್ಲಿಗೆ ಶಿಕ್ಷಣ ನಿಲ್ಲಿಸದೆ ಮತ್ತಷ್ಟು ಓದಬೇಕು ಎನ್ನುವ ಮಹದಾಸೆ ಚಿಗುರಿತು. ನಂತರ ಖಾಸಗಿಯಾಗಿ ಪಿಯುಸಿ, ಮತ್ತು ಬಿ.ಎ. ಮುಗಿಸಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದೆ ಗಣಕಯಂತ್ರ ಶಿಕ್ಷಣ ಪೂರ್ಣಗೊಳಿಸಿ ಆನ್ಲೈನ್ ಕೆಲಸವನ್ನು ಹುಡುಕಿಕೊಂಡು ಕೆಲಸ ನಿರ್ವಹಿಸಲು ಸಿದ್ದವಾಗಿದ್ದಾಳೆ. ಇಂತಹ ಸಂದರ್ಭದಲ್ಲಿ
ಅವಳಿಗೆ ಬೆನ್ನೆಲುಬಾಗಿ ನಿಲ್ಲಲು ಸಿದ್ದವಾದ ಸಂಸ್ಥೆ ನಗು ಫೌಂಡೇಶನ್. ನಗು ಫೌಂಡೇಶನ್ ಮತ್ತು ಕ. ಸಿ. ಚಾ. ಟ್ರಸ್ಟ್ ಸಹಯೋಗದಲ್ಲಿ ಒಂದು ಲ್ಯಾಪ್ಟಾಪ್ ನೀಡಿ ಮನೆಯಲ್ಲಿಯೇ ಕುಳಿತು ಕೆಲಸ ಮಾಡಲು ಕೆಲಸ ನೀಡಿ ಮಗುವಿನ ಬಾಳಿಗೆ ಬೆಳಕಾಗಿರುವುದು ಅತ್ಯಂತ ಸಂತೋಷದ ವಿಷಯ.
- ಕರುನಾಡ ಕಂದ ಪತ್ರಿಕೆ



















