ಬಳ್ಳಾರಿ / ಕಂಪ್ಲಿ : ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿರುವ ವೀರಭದ್ರೇಶ್ವರ ದೇವಸ್ಥಾನದ 17ನೇ ವಾರ್ಷಿಕೋತ್ಸವ, ಗಂಗೆಸ್ಥಳ ಹಾಗೂ ಅಗ್ನಿಕುಂಡ ಹಾಯುವ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.
ಸಮೀಪದ ಯಲ್ಲಮ್ಮ ಕ್ಯಾಂಪಿನಲ್ಲಿ ಗಂಗೆ ಪೂಜೆಯನ್ನು ನೆರವೇರಿಸಿದ ನಂತರ ಗಂಗೆ ಕೊಡವನ್ನು ಹೊತ್ತು ಗುಗ್ಗಳಗಳನ್ನು ಹಿಡಿದು ಪುರವಂತರ ವೀರಗಾಸೆ, ಸಮಾಳ, ತಾಷಾರಾಂ ಡೋಲ್ ಗಳ ಮೂಲಕ ಸ್ವಾಮಿಯ ಮೆರವಣಿಗೆ ಅದ್ದೂರಿಯಿಂದ ಜರುಗಿತು. ಮೆರವಣಿಗೆಯ ಮಾರ್ಗದದ್ದಕ್ಕೂ ವೀರಗಾಸೆಯ ಪುರವಂತರಾದ ಹೊಸಳ್ಳಿಯ ವೀರಭದ್ರಯ್ಯ ಆಕರ್ಷಕ ವೀರಭದ್ರನ ನೃತ್ಯ ಮಾಡುತ್ತಾ ಒಡಪುಗಳನ್ನು ಹೇಳುತ್ತಾ ಭಕ್ತರಿಗೆ ಶಸ್ತ್ರಗಳನ್ನು ಹಾಕುತ್ತಾ ಸಾಗಿದರು. ಮೆರವಣಿಗೆಯಲ್ಲಿ ಅನೇಕ ಭಕ್ತರು ಗುಗ್ಗಳವನ್ನು ಹಿಡಿದು ನೃತ್ಯವನ್ನು ಮಾಡಿದರು.
ಗಂಗೆಸ್ಥಳ ಹಾಗೂ ಗುಗ್ಗಳ ಮೆರವಣಿಗೆ ದೇವಸ್ಥಾನವನ್ನು ತಲುಪಿದ ನಂತರ ವೀರಾಗಾಸೆಯವರು ಮತ್ತು ಪುರೋಹಿತರು ಅಗ್ನಿಕುಮಡವನ್ನು ಹಾಯಲು ದೇವರ ವರವನ್ನು ಬೇಡಿದರು. ವೀರಭದ್ರೇಶ್ವರ ಸ್ವಾಮಿ ತನ್ನ ಬಲಗಡೆಯಿಂದ ಬಿಲ್ವ ಪತ್ರೆಯನ್ನು ದಯಪಾಲಿಸದ ನಂತರ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಿದ್ದ ಅಗ್ನಿ ಕುಂಡಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ ಆರಂಭದಲ್ಲಿ ಸಮಾಳದ ನಾಗಪ್ಪ ಅಗ್ನಿಕುಂಡವನ್ನು ಹಾಯ್ದರೆ, ನಂತರ ವೀರಾಗಸೆಯ ಪುರವಂತರು, ಕಳಸ ಹಿಡಿದ ಮಹಿಳೆ ಈರಮ್ಮ, ತುಂಬಿದ ಕೊಡವನ್ನು ಹೊತ್ತ ದೇವಸ್ಥಾನದ ಮುಖ್ಯಸ್ಥರಾದ ಜಿ.ಓಂಕಾರಸ್ವಾಮಿ ಅಗ್ನಿಕುಂಡವನ್ನು ಹಾಯುವ ಮೂಲಕ ತಮ್ಮ ಭಕ್ತಿಯನ್ನು ಪ್ರದರ್ಶಿಸಿದರು.
ನಂತರ ಹರಕೆ ಹೊತ್ತ ಭಕ್ತರು ಅಗ್ನಿ ಕುಂಡವನ್ನು ಹಾಯುವ ಮೂಲಕ ತಮ್ಮ ಹರಕೆಯನ್ನು ತೀರಿಸಿದರು. ನಂತರ ವೀರಭದ್ರೇಶ್ವರ ಸ್ವಾಮಿಗೆ ಮಹಾಮಂಗಳಾರತಿ ನೆರವೇರಿಸಿದರು. ಇದಕ್ಕೂ ಮುನ್ನ ಬೃಹತ್ ದೊಡ್ಡ ವೀರಭದ್ರ ಸ್ವಾಮಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕಗಳು ಸೇರಿದಂತೆ ವಿವಿಧ ಅಭಿಷೇಕಗಳನ್ನು ನೆರವೇರಿಸಿ ನೂತನ ವಸ್ತ್ರ ಹಾಗೂ ಹೂಗಳಿಂದ ಅಲಂಕರಿಸಿದ್ದರು.
ನಂತರ ನೆರೆದಿದ್ದ ಸಕಲ ಸದ್ಭಕ್ತರಿಗೆ ಅನ್ನಸಂತರ್ಪಣೆ ಜರುಗಿತು. ಕಾರ್ಯಕ್ರಮದಲ್ಲಿ ಸದ್ಭಕ್ತರಾದ ಸಮಾಳದ ನಾಗಪ್ಪ, ಹೊಸಹಳ್ಳೀಯ ವೀರಭದ್ರಯ್ಯ, ನಂ.10 ಮುದ್ದಾಪುರದ ಗೌಳೇರು ರಾಚಯ್ಯ, ಬಳೆ ವೀರೇಶ್, ದೇವಸ್ಥಾನದ ಮುಖ್ಯಸ್ಥರಾದ ಜಿ.ಓಂಕಾರಸ್ವಾಮಿ, ಮುರಳೀಧರ ಶೆಟ್ಟಿ, ನಂ.10 ಮುದ್ದಾಪುರ ಹಾಗೂ ಕಂಪ್ಲಿ ಪಟ್ಟಣದ ನೂರಾರು ಸದ್ಭಕ್ತರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















