ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ ರಾಮಸಾಗರ ಗ್ರಾಮದ ಆರಾಧ್ಯ ದೈವ ತುರಮುಂದಿ ಬಸವೇಶ್ವರ ಮತ್ತು ನೀಲಮ್ಮನವರ ಜೋಡಿ ಮಹಾರಥೋತ್ಸವವು ಗೌರಿ ಹುಣ್ಣಿಮೆಯ ದಿನವಾದ ಅತ್ಯಂತ ಶ್ರದ್ಧೆ, ಭಕ್ತಿ, ಸಡಗರ, ಸಂಭ್ರಮಗಳಿಂದ ಜರುಗಿತು.
ಈ ರಥೋತ್ಸವವು ಸುತ್ತಮುತ್ತಲ ಗ್ರಾಮಗಳಿಗೆ ಅತ್ಯಂತ ದೊಡ್ಡ ಜಾತ್ರಾ ಮಹೋತ್ಸವವಾಗಿದೆ. ರಥೋತ್ಸವದ ನಿಮಿತ್ತ ಕಳೆದ ನಾಲ್ಕು ದಿನಗಳಿಂದ ತುರಮುಂದಿನ ಬಸವೇಶ್ವರರ ದೇಗುಲದಲ್ಲಿ ಕಂಕಣ ಧಾರಣೆ, ಜೋಡಿ ರಥಗಳಿಗೆ ಕಳಸ ಧಾರಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳು ಯಶಸ್ವಿಯಾಗಿ ಜರುಗಿದವು. ಪ್ರತಿದಿನ ಬಸವೇಶ್ವರನ ಶಿಲಾ ಪ್ರತಿಮೆಗೆ ವಿಶೇಷ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆಗಳು ನಡೆದವು. ರಥೋತ್ಸವದ ಮುನ್ನದಿನದಂದು ತುರಮುಂದಿ ಬಸವೇಶ್ವರ ಮತ್ತು ಮಹಾದಾಸೋಹಿ ಕಲಬುರಗಿಯ ಶರಣಬಸವೇಶ್ವರರ ಪುರಾಣ ಗ್ರಂಥ, ಭಾವಚಿತ್ರದ ಮೆರವಣಿಗೆ ಆಕರ್ಷಕ ಹೂವಿನ ಪಲ್ಲಕ್ಕಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತ್ತು. ಬಸವೇಶ್ವರರ ಶಿಲಾ ವಿಗ್ರಹಕ್ಕೆ ರುದ್ರಾಭಿಷೇಕ, ಪಂಚಾಮೃತ ಸೇರಿದಂತೆ ವಿವಿಧ ಅಭಿಷೇಕಗಳು, ಸಹಸ್ರ ಬಿಲ್ವಾರ್ಚನೆ ಮತ್ತು ವಿವಿಧ ಪೂಜೆಗಳು ನಡೆದವು. ನಂತರ ವಿಗ್ರಹವನ್ನು ವಿವಿಧ ಹೂಗಳಿಂದ ಅಲಂಕರಿಸಿ ಮಹಾಮಂಗಳಾರತಿ ಮಾಡಿದರು. ನಂತರ ಜೋಡಿ ರಥಗಳ ಮುಂದೆ ವಿಶೇಷ ಹೋಮ, ಹವನ, ಯಜ್ಞಗಳನ್ನು ನಡೆಸಿ ಮಡಿ ತೇರನ್ನು ಎಳೆದರು.
ಗ್ರಾಮದ ಮಹಿಳೆಯರು ಮಕ್ಕಳು ಹೊಸ ಬಟ್ಟೆಗಳನ್ನು ಧರಿಸಿ ಬಸವೇಶ್ವರನಗೆ ಹೋಳಿಗೆ ನೈವೇದ್ಯ ಮಾಡಿ ಪೂಜೆ ಸಲ್ಲಿಸಿದರು. ನಂತರ ಸಕಲ ಮಂಗಳ ವಾದ್ಯಗಳ, ಕಹಳೆ ವಾದನ, ಡೊಳ್ಳು, ತಾಷಾ ರಾಂಡೋಲ್ , ಕೋಲಾಟ, ನಂದಿಕೋಲುಗಳ ಪ್ರದರ್ಶನದೊಂದಿಗೆ ತುರಮುಂದಿ ಬಸವೇಶ್ವರ ಮತ್ತು ನೀಲಮ್ಮನವರ ಜೋಡಿ ಮಹಾರಥೋತ್ಸವವು ಆಕರ್ಷಕ ಹೂವಿನ ಪಲ್ಲಕ್ಕಿಯೊಂದಿಗೆ ಗ್ರಾಮದ ರಾಜಬೀದಿಯಲ್ಲಿ ಸಡಗರ ಸಂಭ್ರಮಗಳಿಂದ ಜರುಗಿತು. ರಥಗಳಿಗೆ ಸದ್ಭಕ್ತರು ಹೂ ಉತ್ತತ್ತಿಗಳನ್ನು ಎಸೆದು ತಮ್ಮ ಹರಕೆಗಳನ್ನು ತೀರಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















