
ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದ ಚಿತ್ತು ತಂದೆ ಗೋಪು ಜಾದವ ರವರ ಸುಮಾರು 5 ಎಕರೆ ಹೊಲದಲ್ಲಿ ಈ ಲಕ್ಕಿ ರೋಗ ಕಂಡು ಬಂದಿದೆ. ಸುಮಾರು ತಿಂಗಳಿಂದ ಸುರಿಯುತ್ತಿದ್ದ ಮಳೆಯ ಪರಿಣಾಮ ತಾಲ್ಲೂಕಿನಲ್ಲಿ ತೊಗರಿ ಬೆಳೆ ಗೊಡ್ಡು ಅಂದರೆ ಲಕ್ಕಿ ರೋಗಕ್ಕೆ ತಿರುಗಿದ್ದು ಅನ್ನದಾತರು ಕಂಗಾಲಾಗಿದ್ದಾರೆ.
ಈ ಪ್ರದೇಶದ ರೈತರು ಮೊದಲೇ ತೊಗರಿ ಬೆಳೆ ಮೇಲೆ ಅವಲಂಬಿತರಾಗಿ ಪ್ರತಿವರ್ಷ ಮುಂಗಾರಿನಲ್ಲಿ ಅತಿ ಹೆಚ್ಚು ತೊಗರಿ ಬಿತ್ತನೆ ಮಾಡುತ್ತಾರೆ.
ಸಿಕ್ಕಾಪಟ್ಟೆ ಖರ್ಚು ಮಾಡಿ ಕಷ್ಟಪಟ್ಟು ಎಷ್ಟೋ ಸಲ ಉತ್ತಮ ಇಳುವರಿ ತೆಗೆದಾಗಲೂ ಸರಿಯಾದ ಬೆಂಬಲ ಬೆಲೆ ದೊರೆಯದೆ ಕೃಷಿಕರು ಹೈರಾಣಾಗಿದ್ದಾರೆ. ಕೈಗೆ ಬಂದಂತಹ ತುತ್ತು ಬಾಯಿಗೆ ಬರದಂತಾಯಿತು ಎಂದು ರೈತರು ಅಳಲು ತೋಡಿಕೊಂಡರು. ಪ್ರತಿ ವರ್ಷ ಆ ವೇಳೆ ಹೆಸರು, ಉದ್ದು ಆದರೂ ಚೆನ್ನಾಗಿ ಬೆಳೆದು ಒಂದಿಷ್ಟು ಖರ್ಚಿಗೆ ಅನುಕೂಲ ಮಾಡಿಕೊಳ್ಳಬಹುದಿತ್ತು.
ಆದರೆ ಈ ವರ್ಷ ಮಿತಿಮೀರಿ ಸುರಿದ ಮಳೆಗೆ ಮುಂಗಾರಿನ ಹೆಸರು, ಉದ್ದು ಮೊದಲೇ ಕೈ ಕೊಟ್ಟಿವೆ. ತೊಗರಿಯಾದರೂ ಕೈ ಹಿಡಿಯುತ್ತಾ ಎಂದುಕೊಂಡಿದ್ದ ರೈತರಿಗೆ ಹೂವು, ಮೊಗ್ಗು ಮೂಡುವ ಮುಂಚೆಯೇ ತೊಗರಿ ಗೊಡ್ಡುರೋಗ ಬಾಧೆಗೆ ತುತ್ತಾಗಿದ್ದನ್ನು ನೋಡಿ ಮರುಗುತ್ತಿದ್ದಾರೆ.
ರಟಕಲ್, ಕಂಚನಾಳ, ಹುಲಸಗೋಡ, ಮುಕ್ರಂಬ, ಕಂದಗೋಳ, ಗೊಣಗಿ, ಬೆಡಸೂರ ಮುಂತಾದ ಗ್ರಾಮಗಳಿಂದ ರೈತರು ಕೃಷಿ ಅಧಿಕಾರಿಗಳಿಗೆ ಕರೆ ಮಾಡಿ ತೊಗರಿ ಗೊಡ್ಡು ರೋಗಕ್ಕೆ ಹೋಗಿದ್ದರ ಬಗ್ಗೆ ಗಮನಕ್ಕೆ ತರುತ್ತಿದ್ದಾರೆ.
ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಬೆಳವಣಿಗೆ ಕುಂಠಿತಗೊಂಡಿವೆ. ಕೆಲವು ಕಡೆ ರೈತರು ನೆಟ್ ರೋಗದ ತೊಗರಿ ಪೂರ್ತಿಯಾಗಿ ಕಿತ್ತುಹಾಕಿ ಸಂಕಷ್ಟ ತೋಡಿಕೊಳ್ಳುತ್ತಿದ್ದಾರೆ.
ಕೇವಲ ತೊಗರಿಯೊಂದೇ ಬಿತ್ತನೆ ಮಾಡಿದ್ದ ರೈತರು ಈಗ ನೆಟಿರೋಗ ಕಂಡು ಕುಸುಬೆ, ಕಡ್ಡಿಯೂ ಬಿತ್ತನೆ ಮಾಡದ ಸ್ಥಿತಿಯಲ್ಲಿ ದಿಕ್ಕುತೋಚದೆ ಕುಳಿತಿದ್ದಾರೆ. ಕೃಷಿ ಮನೆತನದ ವರ್ಷದ ಖರ್ಚಿನ ಚಿಂತೆ ಮಾಡುತ್ತಿದ್ದಾರೆ. ಬೆಳೆ ವೀಕ್ಷಣೆಗೆ ಬಂದ ಕೃಷಿ ವಿಜ್ಞಾನಿ ಇಸೂಫ್ ಅಲಿ ಕೆವಿಕೆ ಕಲ್ಬುರ್ಗಿ, ವೀರೇಶ್ ರಾಥೋಡ ಎಡಿಎ ಚಿಂಚೋಳಿ, ರೈತರಾದ ಚಿತ್ತು ಜಾದವ, ಚನ್ನಪ್ಪ, ರೈತ ಮಹಿಳೆ ವಿಠೋಬಾಯಿ, ವೀರಣ್ಣ ಗಂಗಾಣಿ ಅಧ್ಯಕ್ಷ ರೈತ ಸಂಘ ಮತ್ತು ರೈತ ಸೇನೆ ಕಾಳಗಿ ಸೇರಿದಂತೆ ಇನ್ನೂ ಅನೇಕರಿದ್ದರು.
ವರದಿ ಎಸ್. ವಿ. ಗಂಗಾಣಿ



















