ಗುರುಮಠಕಲ್: ನ. 30 ಅನುಮಾನಾಸ್ಪದ ಅಕ್ಕಿ ಸಾಗಾಟ ಪ್ರಕರಣದ ಹಿನ್ನೆಲೆ ತಾಲ್ಲೂಕು ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ನಾಗೇಶ್ ಗದ್ದಗಿ ಅವರು ಸಂಪೂರ್ಣ ತನಿಖೆ ನಡೆಸುವಂತೆ ಗುರುಮಠಕಲ್ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರು.
ನವೆಂಬರ್ 29ರ ರಾತ್ರಿ ಬಳ್ಳಾರಿ ಜಿಲ್ಲೆಯ ಶ್ರೀ ಗಣೇಶ್ ಆಗೋ ಫುಡ್ಸ್ ಸಂಸ್ಥೆಯ ಹೆಸರಿನಲ್ಲಿ ನೋಂದಾಯಿತ ಲಾರಿ (ನಂ: ಎ.ಪಿ.26–ಯ್ಯ–3195) ರಾಯಚೂರು ಜಿಲ್ಲೆಯಿಂದ ತೆಲಂಗಾಣ ರಾಜ್ಯದ ವಿಕರಾಬಾದ್ ಜಿಲ್ಲೆಗೆ ಅಕ್ಕಿ ಸಾಗಿಸುತ್ತಿದ್ದ ವೇಳೆ, ಚಿನ್ನಾಕಾರ–ಧರ್ಮಪೂರ ಮುಖ್ಯರಸ್ತೆಯಲ್ಲಿ ಲಾರಿ ಕೆಟ್ಟು ನಿಂತಿದೆ.
ಆ ಸಂದರ್ಭ ವಾಹನದ ಒಳಗಿನ ಅಕ್ಕಿಯ ಚೀಲಗಳು ನಡುರಸ್ತೆಗೆ ಬಿದ್ದಿದ್ದನ್ನು ಸ್ಥಳೀಯರು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ ಸಂಚಾರ ಸುಗಮಗೊಳಿಸಿದ್ದು, ಆಹಾರ ಇಲಾಖೆಯ ಅಧಿಕಾರಿಗಳು ಮಾದರಿ ಪರೀಕ್ಷೆ ನಡೆಸಿದರು. ಪ್ರಾಥಮಿಕ ಪರೀಕ್ಷೆಯಲ್ಲಿ ಇದು ಅನ್ನಭಾಗ್ಯ ಯೋಜನೆಯ ಅಕ್ಕಿ ಅಲ್ಲವೆಂದು ಹೇಳಿದರೂ, ಚೀಲಗಳಲ್ಲಿ ಪೋಷಕಾಂಶಯುಕ್ತ (ಪ್ರೋಟಿನ್ಯುಕ್ತ) ಧಾನ್ಯ ಕಂಡು ಬಂದಿದ್ದು, ಅನುಮಾನ ಹುಟ್ಟಿಸುವಂತಾಗಿದೆ ಎಂದು ಇಂದು ನೀಡಿರುವ ಮನವಿಯಲ್ಲಿ ವಿವರಿಸಿದ್ದಾರೆ.
ನಾಗೇಶ್ ಗದ್ದಗಿ ಮಾತನಾಡಿ, “ಈ ಅಕ್ಕಿ ಅನ್ನಭಾಗ್ಯ ಯೋಜನೆಯ ಅಕ್ಕಿಯೇ ಆಗಿರುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಪ್ರಕರಣ ದಾಖಲಿಸಿ ಸಂಪೂರ್ಣ ತನಿಖೆ ನಡೆಸಿ, ಭವಿಷ್ಯದಲ್ಲಿ ಇಂತಹ ಅಕ್ರಮಗಳು ನಡೆಯದಂತೆ ಸರ್ಕಾರ ಎಚ್ಚರ ವಹಿಸಬೇಕು,” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಕಾಶಪ್ಪ ದೊರೆ, ಗೋಪಾಲ ಕೃಷ್ಣ ಮೇಧಾ, ರಾಮು ಕೊಡಗಂಟಿ, ನಿಖಿಲ್ ಢಗೆ ಹಾಗೂ ಅಯಜ್ ಅಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ ಜಗದೀಶ್ ಕುಮಾರ್ ಭೂಮಾ




















