
ಬೆಳಗಾವಿ : ಅಥಣಿಯು ಜಿಲ್ಲೆ ಆಗಬೇಕು ಎಂಬ ದೀರ್ಘಕಾಲದ ಬೇಡಿಕೆ ಇದ್ದು ಮತ್ತಷ್ಟು ಬಲ ನೀಡುವ ಉದ್ದೇಶದಿಂದ ನಿನ್ನೆ ಪಟ್ಟಣದಲ್ಲಿ ಬೃಹತ್ ಪ್ರಮಾಣದ ಪ್ರತಿಭಟನೆ ಜರುಗಿತು. ವಿವಿಧ ಹೋರಾಟ ಸಮಿತಿಗಳು, ರೈತ ಸಂಘಟನೆಗಳು, ವ್ಯಾಪಾರಿಗಳು ಹಾಗೂ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಅಥಣಿ ಜಿಲ್ಲೆ ರಚನೆಗೆ ಸರ್ಕಾರವು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾಕಾರರು ಕೈಯಲ್ಲಿ ಫಲಕ, ಬ್ಯಾನರ್ಗಳನ್ನು ಹಿಡಿದು “ಅಥಣಿಗೆ ಜಿಲ್ಲೆ ಹಕ್ಕು, ವಿಳಂಬ ಬೇಡ”, “ಸರ್ಕಾರ ತಕ್ಷಣ ಘೋಷಿಸಬೇಕು” ಎಂದು ಘೋಷಣೆ ಕೂಗಿದರು. ಪ್ರತಿಭಟನೆ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಶಾಂತಿಯುತವಾದ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರು ಮಾತನಾಡುತ್ತಾ
ಅಥಣಿಯ ಜನಸಂಖ್ಯೆ, ಭೌಗೋಳಿಕ ವ್ಯಾಪ್ತಿ, ಆಡಳಿತಾತ್ಮಕ ತೊಂದರೆಗಳ ಹಿನ್ನೆಲೆಯಲ್ಲಿ ಜಿಲ್ಲೆ ರಚನೆ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು. ಹಲವು ವರ್ಷಗಳಿಂದ ಬೇಡಿಕೆ ಇರಿಸಿಕೊಂಡಿದ್ದರೂ ಸರ್ಕಾರದಿಂದ ಸ್ಪಷ್ಟ ನಿರ್ಧಾರ ಬಾರದಿರುವುದನ್ನು ಅವರು ಖಂಡಿಸಿದರು.
ಪ್ರತಿಭಟನೆಯಲ್ಲಿ ಗಚ್ಚಿನ ಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು , ಶೆಟ್ಟರ್ ಮಠದ ಶ್ರೀ ಮರುಳಸಿದ್ದ ಮಹಾಸ್ವಾಮಿಗಳು, ಶ್ರೀ ಶಶಿಕಾಂತ್ ಗುರೂಜಿ, ಕಾಂಗ್ರೆಸ್ ಮುಖಂಡರಾದ ಗಜಾನನ ಮಂಗಸೂಳಿ, ಅಥಣಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರಾದ ಪ್ರಶಾಂತ್ ತೊಡಕರ್, ಆರ್ ಎಸ್ ಪಿ ಸಮೂಹ ಸಂಸ್ಥೆಯ ಅಧ್ಯಕ್ಷರು ರವಿ ಪೂಜಾರಿ, ವಕೀಲರಾದ ಮೀತೀಶ್ ಪಟ್ಟಣ್ , ಶಶಿಕಾಂತ್ ಬಾಡಗಿ, ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ದತ್ತ ವಾಸ್ಟರ್, ಮಹಿಳೆಯರು, ಯುವಕರು, ಬಿಜೆಪಿಯ ಅಥಣಿ ಮಂಡಲ ಅಧ್ಯಕ್ಷರಾದ ಶ್ರೀ ಗಿರೀಶ್ ಬುಟಾಳಿ, ಬಿಜೆಪಿ ಮುಖಂಡರಾದ ಸಂಪತ್ ಕುಮಾರ್ ಶೆಟ್ಟಿ, ಯುವ ಕಾಂಗ್ರೆಸ್ ಮುಖಂಡರಾದ ಮಂಜು ಹೋಳಿಕಟ್ಟಿ, ಮಹಾಂತೇಶ್ ಬಾಡಗಿ, ರಾಮನಗೌಡ ಪಾಟೀಲ, ಮಾಜಿ ಸೈನಿಕರು ಹಾಗೂ ರೈತರು ,ಹಿರಿಯರು ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.
ವರದಿ. ವಿಠ್ಠಲ ಖೋಕಾಟೆ ಅಥಣಿ



















