(ಜನವರಿ ೩ ವ್ಯಾಕರಣತೀರ್ಥ ಚಂದ್ರಶೇಖರಶಾಸ್ತ್ರಿಗಳ ಜನ್ಮದಿನ. ತನ್ನಿಮಿತ್ತ ಈ ಲೇಖನ)
ಕನ್ನಡ ಬಂಟರ ಬಂಟ ಕನ್ನಡ ಕೊಂಕರರ ಕಿಂಕರರ ಕಿಂಕರ ನಾಂ ಕನ್ನಡ ಲೆಂಕರ ಲಂಕ ಕನ್ನಡ ತೊತ್ತೆನಗೆ ಬೇರೆ ಗತಿಮತಿಯುಂಟೇ. ಹೀಗೆಂದು ತಮ್ಮ ಕನ್ನಡಾಭಿಮಾನ ಮರೆದ ಧೀಮಂತ ವಿದ್ವಾಂಸ ಶ್ರೀ ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿ ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.
೧೯೪೦ ಧಾರವಾಡದಲ್ಲಿ ನಡೆದ ಅಖಿಲಭಾರತ ೨೫ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ತಮ್ಮನ್ನು ಮೇಲಿನಂತೆ ಪರಿಚಯಿಸಿಕೊಂಡವರು ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಗಳು.
ಸ್ವತಃ ಕನ್ನಡ ಮಾತ್ರ ಭಾಷೆಯವರಾಗಿ ಸಂಸ್ಕೃತ ಪಾಂಡಿತ್ಯ ಗಳಿಸಿ ತೆಲುಗು, ಉರ್ದು, ಇಂಗ್ಲೀಷ್, ಹಿಂದಿ ಮತ್ತು ಮರಾಠಿ ಮುಂತಾದ ಹಲವು ಭಾಷಾ ಪರಿಣತಿಯನ್ನು ಪಡೆದುಕೊಂಡವರು. ಇಷ್ಟಾದರೂ ಅವರು ಕನ್ನಡ ನಾಡುನುಡಿ ಸಾಹಿತ್ಯಕ್ಕಾಗಿಯೇ ತಮ್ಮ ಸಮಸ್ತ ಧೀಶಕ್ತಿಯನ್ನು ಮೀಸಲಾಗಿಟ್ಟರು.
ಬಾಲ್ಯ ಜೀವನ: ಆಗಿನ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದ ಈಗಿನ ವಿಜಯನಗರ ಜಿಲ್ಲೆಯ (ಹಿಂದೆ ಬಳ್ಳಾರಿ ಜಿಲ್ಲೆಯ) ಹೂವಿನ ಹಡಗಲಿ ತಾಲೂಕಿನ ಹೊಳಲು ಗ್ರಾಮದ ಹಿರೇಮಠದ ಪಟ್ಟದಯ್ಯನವರು ಮತ್ತು ಬಸಮ್ಮನವರಿಗೆ ಏಕೈಕ ಪುತ್ರನಾಗಿ ೧೮೯೨ರ ಜನವರಿ ಮೂರರಂದು ಚಂದ್ರಶೇಖರ ಜನಿಸಿದರು. ಜಂಗಮ ದಾಸೋಹದಿಂದಲೇ ಹೊಟ್ಟೆ ತುಂಬಿಸುತ್ತಿದ್ದ ತಂದೆ ಪಟ್ಟದಯ್ಯನವರನ್ನು ಇವರು ಚಿಕ್ಕವಯಸ್ಸಿನಲ್ಲಿಯೇ ಕಳೆದುಕೊಂಡರು. ಚಂದ್ರಶೇಖರ ತಾಯಿಯಯ ಊರಾದ ಮಾಗಳ ಗ್ರಾಮದ ಹಾಲವಡ್ಡಿ ಮಠದಲ್ಲಿಯೇ ಬಾಲ್ಯ ಕಳೆಯಬೇಕಾಗಿತ್ತು.
ಎಳೆತನದಿ ಕೆಚ್ಚೆದೆಯ ಹೋರಾಟ : ಚಂದ್ರಶೇಖರ ಶಾಸ್ತ್ರಿಯವರು ತರಗತಿಯ ಎಲ್ಲಾ ವಿಷಯಗಳ ಕಲಿಕೆಯಲ್ಲಿ ಮುಂದಿದ್ದರು. ಒಮ್ಮೆ ತರಗತಿಯ ಶಿಕ್ಷಕರು ಲೆಕ್ಕ ಮಾಡಲು ಹೇಳಿದರು. ಪಕ್ಕದ ವಿದ್ಯಾರ್ಥಿ ಲೆಕ್ಕ ತಪ್ಪಾಗಿ ಮಾಡಿದ್ದರೂ ಸಹ ಶಿಕ್ಷಕರು ಸರಿಯೆಂದು ಅಂಕ ನೀಡಿದ್ದರು. ಇದು ಶಾಸ್ತ್ರಿಯವರಿಗೆ ಸರಿ ಕಾಣಲಿಲ್ಲ. ಶಿಕ್ಷಕರ ಕ್ರಮವನ್ನು ವಿರೋಧಿಸಿ ಧೈರ್ಯವಾಗಿ ಎದ್ದು ನಿಂತು ಹೇಳಿದರು. ಶಾಸ್ತ್ರಿಯವರ ಮಾತುಗಳಿಂದ ಸಿಟ್ಟಿಗೆದ್ದ ಶಿಕ್ಷಕರು ಅವರನ್ನು ಸಿಕ್ಕಾಪಟ್ಟೆ ಹೊಡೆದುದಲ್ಲದೇ ಪ್ರಶ್ನೆ ಮಾಡಿದುದಕ್ಕಾಗಿ ಶಾಲೆಯಿಂದ ಹೊರಹಾಕಿದರು. ಅದು ಅನ್ಯಾಯದ ವಿರುದ್ದ ಶಾಸ್ತ್ರಿಯವರ ಮೊದಲ ಹೋರಾಟ ಎನ್ನಬಹುದು.
ಸಾಧನೆಗೆ ಬಡತನ ಅಡ್ಡಿಯಾಗಲಿಲ್ಲ: ಶಾಲೆ ಬಿಟ್ಟು ಬಂದ ಚಂದ್ರಶೇಖರ ಶಾಸ್ತ್ರಿಗೆ ತಾಯಿಯ ಜೊತೆ ಕೂಲಿ ಕೆಲಸ ಅನಿವಾರ್ಯವಾಗಿತ್ತು. ನಾಲ್ಕು ವರ್ಷಗಳು ಹೀಗೆಯೇ ಕಳೆದವು. ಬಾಲಕ ಚಂದ್ರಶೇಖರ ಕಾಲಲ್ಲಿ ಜಂಗು, ಬಗಲಲ್ಲಿ ಜೋಳಿಗೆ, ಕೈಯಲ್ಲಿ ಬೆತ್ತ ಹಿಡಿದು ಮನೆಮನೆಗೆ ಕೋರಧಾನ್ಯದಲಿ ಭವತಿ ಭಿಕ್ಷಾಂದೇಹಿ ಎಂಬ ಹಿಟ್ಟಿನ ಕಾಯಕ ಪೂರೈಸಿ ಕೂಲಿನಾಲಿ ಮಾಡಿ ಜೀವಿಸಬೇಕು. ಆದರೂ ವಿದ್ಯೆ ಕಲಿಯುವ ಆಸೆ ಬತ್ತಿರಲಿಲ್ಲ. ಇಂತಹ ವೇಳೆ ಇವರ ಜೀವನಕ್ಕೆ ಬೆಳಕಾಗಿ ಬಂದವರು ಬ್ಯಾಡಗಿಯ ಸಿದ್ದಲಿಂಗ ಹೊಸ ಅಂಗಡಿಯವರು.
ಓದುವ ಹುಚ್ಚು: ವಿದ್ಯಾರ್ಥಿ ದೆಸೆಯಿಂದಲೂ ಚಂದ್ರಶೇಖರ ಶಾಸ್ತ್ರಿಗಳಿಗೆ ಓದುವ ಹುಚ್ಚು ಹೆಚ್ಚಿತ್ತು. ಗದುಗಿನ ತೋಂಟದಾರ್ಯ ಮಠದಲ್ಲಿನ ನಿಯಮಾನುಸಾರ ರಾತ್ರಿ ೧೦ ಗಂಟೆಗೆ ಮಠದ ದೀಪಗಳನ್ನು ಆರಿಸಲಾಗುತ್ತಿತ್ತು. ಇದರಿಂದಾಗಿ ಇವರ ಓದಿಗೆ ಕತ್ತರಿ ಬೀಳುತ್ತಿತ್ತು. ಇದನ್ನು ತಪ್ಪಿಸಲು ಗದ್ದುಗೆಯ ದೀಪದಿಂದ ಎಣ್ಣೆಯನ್ನು ಕದ್ದು ತಂದು ಜೊತೆಗಾರರು ಮಲಗಿದ ನಂತರ ದೀಪ ಹಚ್ಚಿಕೊಂಡು ಓದುತ್ತಿದ್ದರು. ಈ ನಡುವೆ ದಿನಪತ್ರಿಕೆಗಳನ್ನು ಓದುವ ಹುಚ್ಚೂ ಹತ್ತಿತ್ತು. ಅದು ಅವರನ್ನು ಪತ್ರಿಕೆ ತರಿಸುವವರ ಮನೆ ಬಾಗಿಲಿಗೆ ತಂದು ನಿಲ್ಲಿಸಿತ್ತು. ಬಡ ವಿದ್ಯಾರ್ಥಿಯ ಪತ್ರಿಕೆ ಓದುವ ಹವ್ಯಾಸಕ್ಕೆ ಮಣಿದ ಮನೆಯವರು ಪತ್ರಿಕೆ ಓದಲು ಕೊಡುತ್ತಿದ್ದರು.
ಸಂಸ್ಕೃತ ಕಲಿಕೆಯ ಹಾದಿ :
ಚಂದ್ರಶೇಖರ ಶಾಸ್ತ್ರಿಯವರಲ್ಲಿದ್ದ ಕಲಿಯುವ ಆಸೆಯನ್ನು ನೋಡಿ ಸಿದ್ದಲಿಂಗ ಹೊಸ ಅಂಗಡಿಯವರು ಬ್ಯಾಡಗಿಯ ಮುಪ್ಪಿನಸ್ವಾಮಿಗಳ ಸಂಸ್ಕೃತ ಪಾಠಶಾಲೆಗೆ ಸೇರಿಸಿದರು. ಆಗ ಚಂದ್ರಶೇಖರ ಶಾಸ್ತ್ರಿಯವರಿಗೆ ೧೭ ವರ್ಷ. ಸಂಸ್ಕೃತ ಎಂದರೇನೆಂದು ತಿಳಿಯದ ಶಾಸ್ತ್ರಿಗಳಿಗೆ ಯಾವುದಾದರೇನು ಕಲಿಯಬೇಕೆಂಬ ಹಂಬಲವಿತ್ತು. ಹೀಗಾಗಿ ಅರ್ಧಕ್ಕೆ ನಿಂತು ಹೋಗಿದ್ದ ವ್ಯಾಸಂಗ ಪುನಃ ಮುಂದುವರೆಯಿತು. ೧೯೧೨ರಲ್ಲಿ ಬ್ಯಾಡಗಿಯಲ್ಲಿ ಪ್ಲೇಗ್ ಹರಡಿದ್ದರಿಂದ ಶಿರಹಟ್ಟಿಯ ಫಕ್ಕೀರಸ್ವಾಮಿಗಳ ಮಠದಲ್ಲಿ ಜ್ಯೋತಿಷ್ಯ ಪಾಠಶಾಲೆಗೆ ಸೇರಿದರು. ಜ್ಯೋತಿಷ್ಯ ಶಾಸ್ತ್ರದಲ್ಲಿ ಆಸಕ್ತಿ ಮೂಡದ ಕಾರಣ ಶಿರಹಟ್ಟಿ ಬಿಟ್ಟು ಹಾವೇರಿಗೆ ಹೋದರು. ಅಲ್ಲಿನ ಹುಕ್ಕೇರಿ ಮಠದ ಸಂಸ್ಕೃತ ಪಾಠಶಾಲೆಗೆ ಸೇರಿದರು. ಅಲ್ಲಿ ಮೂರು ವರ್ಷ ಸಂಸ್ಕೃತ ಕಾವ್ಯಗಳನ್ನು ಅಭ್ಯಾಸ ಮಾಡಿದರು. ನಂತರ ಗದುಗಿನ ತೋಂಟದಾರ್ಯ ಮಠದಲ್ಲಿ ಸಂಸ್ಕೃತ ಅಭ್ಯಾಸ ಮುಂದುವರೆಸಿದರು.
ವ್ಯಾಕರಣ ತೀರ್ಥರಾದದ್ದು: ಕಲಿಯಬೇಕೆಂಬ ಛಲ ಚಂದ್ರಶೇಖರ ಶಾಸ್ತ್ರಿಯವರನ್ನು ವಾರಣಾಸಿಗೆ ಕರೆದೊಯ್ದಿತ್ತು. ತಮ್ಮ ೨೫ನೇ ವಯಸ್ಸಿನಲ್ಲಿ ವಾರಣಾಸಿಯ ಜಗದ್ಗುರು ಜಂಗಮವಾಡಿ ಮಠದ ಸಂಸ್ಕೃತ ಪಾಠಶಾಲೆಗೆ ಸೇರಿದ ಶಾಸ್ತ್ರಿಗಳು ಆರು ವರ್ಷಗಳ ಕಾಲ ಸಂಸ್ಕೃತ ಅಧ್ಯಯನ ಮಾಡಿದ ಫಲವಾಗಿ ವ್ಯಾಕರಣ ತೀರ್ಥ ಪರೀಕ್ಷೆಯನ್ನು ಪಾಸಾದರು. ವಾರಣಾಸಿಗೆ ಹೋಗುವಾಗ ಕೇವಲ ಚಂದ್ರಶೇಖರ ಶಾಸ್ತ್ರಿಯಾಗಿದ್ದವರು ಕರ್ನಾಟಕಕ್ಕೆ ಹಿಂದಿರುಗಿ ಬಂದಾಗ ‘ವ್ಯಾಕರಣ ತೀರ್ಥ’, ‘ಸಾಹಿತ್ಯಾಚಾರ್ಯ’ ಮೊದಲಾದ ಪದವಿಗಳನ್ನು ಮುಡಿಗೇರಿಸಿಕೊಂಡು ಬಂದರು.
ವೃತ್ತಿ ಜೀವನ: ೧೯೨೪ ರಲ್ಲಿ ಕಾಶಿಯಿಂದ ತಾಯ್ನಾಡಿಗೆ ಮರಳಿಬಂದ ಶಾಸ್ತ್ರಿಗಳು ಯಾದಗಿರಿಯಲ್ಲಿ ಸಜ್ಜನಶೆಟ್ಟಿ ಸಂಕರಣ್ಣನವರು ಉದಾರ ದೇಣಿಗೆಯಿಂದ ಚಿತ್ರದುರ್ಗದ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾಡಬೇಕಾಗಿದ್ದ ಸಂಸ್ಕೃತ ಪಾಠ ಶಾಲೆಯನ್ನು ಶ್ರೀಗಳ ಅಪ್ಪಣೆಯಂತೆ ಹೊತ್ತುಕೊಂಡರು. ಹಾಗಾಗಿ ಯಾದಗಿರಿಯಲ್ಲಿ ಶಂಕರ ಕಾಲೇಜು ಆರಂಭಗೊಂಡಿತು. ಚಂದ್ರಶೇಖರಾಚಾರ್ಯ ಶಾಸ್ತ್ರಿಗಳು ಅದರ ಸ್ಥಾಪಕ ಪ್ರಾಚಾರ್ಯರಾದರು. ಆನಂತರ ನೂರಾರು ವಿದ್ಯಾರ್ಥಿಗಳು ಕಾಲೇಜಿಗೆ ಸೇರಿಕೊಂಡರು. ಕಾಲೇಜಿನ ವಿದ್ಯಾರ್ಥಿಗಳಿಗೊಂದು ಒಂದು ಪ್ರಸಾದ ನಿಲಯವನ್ನು ಪ್ರಾರಂಭಿಸಿದರು. ಅನಂತರದಲ್ಲಿ ಇಡೀ ಕರ್ನಾಟಕದಲ್ಲೇ ಅತ್ಯುತ್ತಮವಾದ ಕಾಲೇಜು ಎಂದು ಯಾದಗಿರಿಯ ಶಂಕರ್ ಕಾಲೇಜು ಹೆಸರು ಗಳಿಸಿತು. ಅಖಿಲ ಭಾರತ ಮಟ್ಟದ ಸಂಸ್ಕ್ರತ ಪರೀಕ್ಷೆಗಳು ನಡೆಯುವಂಥ ಕೇಂದ್ರವಾಗಿ ಕಾಲೇಜು ಪರಿಗಣಿಸಿತು. ಮುಂದೆ ನಮ್ಮ ಚಂದ್ರಶೇಖರ ಶಾಸ್ತ್ರಿಗಳು ಮೂರು ಸಾವಿರ ಮಠದ ಗಂಗಾದರ ಸಂಸ್ಕ್ರತ ಕಾಲೇಜಿನ ಪ್ರಥಮ ಪ್ರಾಚಾರ್ಯರಾಗಿ ಹುಬ್ಬಳ್ಳಿಗೆ ಬಂದರು. ಹುಬ್ಬಳ್ಳಿಯ ಕಾಲೇಜು ಚಂದ್ರಶೇಖರ ಶಾಸ್ತ್ರಿಗಳಿಂದಾಗಿ ಹೆಚ್ಚು ಪ್ರಸಿದ್ದ ಪಡೆಯಲಾಂಭಿಸಿತು. ಯಾದಗಿರಿ ಕಾಲೇಜು ಸೊರಗಿತು. ಇದನ್ನರಿತ ಯಾದಗಿರಿಯ ಕೆಲವರು ಹುಬ್ಬಳ್ಳಿಗೆ ಬಂದು ಶಾಸ್ತ್ರಿಗಳು ಯಾದಗಿರಿಯನ್ನು ಬಿಡುವಂತೆ ಮಾಡಿದ ತಮ್ಮ ತಪ್ಪನ್ನು ಮನ್ನಿಸಲು ವಿನಂತಿಸಿ ಶಾಸ್ತ್ರಿಗಳನ್ನು ಮನವೊಲಿಸಿ ಮತ್ತೆ ಯಾದಗಿರಿಗೆ (೧೯೩೮) ಕರೆತಂದರು. ನಂತರ ಶಾಸ್ತ್ರಿಗಳು ತಮ್ಮ ನಿವೃತ್ತಿಯವರೆಗೆ (೧೯೪೮) ಸುಮಾರು ಹತ್ತು ವರ್ಷ ಅಲ್ಲಿದ್ದು ಕಾಲೇಜಿನ ಸಮರ್ಥವಾಗಿ ಮುನ್ನಡೆಸಿದರು.
ಕನ್ನಡ ಸೇವೆ : ಚಂದ್ರಶೇಖರ ಶಾಸ್ತ್ರಿಗಳು ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯವನ್ನು ಗಳಿಸಿ ಆಗಿನ ಕಾಲದಲ್ಲಿ ಶ್ರೇಷ್ಟವೆನಿಸಿದ ವ್ಯಾಕರಣತೀರ್ಥ ಪದವಿಯನ್ನು ಪಡೆದು, ಸಂಸ್ಕೃತ ಕಾಲೇಜುಗಳನ್ನು ಸ್ಥಾಪಿಸಿ ಅವುಗಳನ್ನು ಅಭಿವೃಧ್ಧಿಯಲ್ಲಿ ಸತತ ಎರಡೂವರೆ ದಶಕಗಳವರೆಗೆ ಶ್ರಮಿಸಿದರು. ತಮ್ಮ ವಿಧ್ಯಾಭ್ಯಾಸ ಎಲ್ಲವೂ ಸಂಸ್ಕೃತವಾಗಿತ್ತು. ಹೀಗಿದ್ದರೂ ಅವರು ಕನ್ನಡ ನಾಡು-ನುಡಿಗಳಿಗಾಗಿ ಸಲ್ಲಿಸಿರುವ ಸೇವೆ ಅನುಪಮವಾದುದು. ಹಳಗನ್ನಡ ಕಾವ್ಯಗಳನ್ನು ಮತ್ತು ವ್ಯಾಕರಣವನ್ನು ಆಳವಾಗಿ ಅಧ್ಯಯನವನ್ನು ಮಾಡಿದರು. ವೇದಾಗಮಗಳನ್ನು ಮೂಲ ಸಂಸ್ಕ್ರತದಲ್ಲಿಯೇ ವ್ಯಾಸಂಗಗೈದು ಕನ್ನಡದ ವಚನಸಾಹಿತ್ಯಕ್ಕೆ ಅವು ಹೇಗೆ ಪ್ರೇರಕ-ಪೋಷಕವಾಗಿವೆ ಎಂಬುದನ್ನು ತುಲನಾತ್ಮಕವಾಗಿ ವಿವೇಚಿಸಿ ಅಮೂಲ್ಯವಾದ ಸಂಶೋದನೆಯನ್ನು ಕನ್ನಡದಲ್ಲಿ ರಚಿಸಿದರು. ಪಂ.ಚಂದ್ರಶೇಖರ ಶಾಸ್ತ್ರಿಗಳು ಕನ್ನಡದಲ್ಲಿ ಸುಮಾರು ೧೫ ಕೃತಿಗಳನ್ನು ರಚಿಸಿರುವುದಾಗಿ ತಿಳಿದು ಬಂದಿದೆ. ಅವಲ್ಲದೆ ನೂರಾರೂ ಲೇಖನಗಳನ್ನು ನಾಡಿನ ಶ್ರೇಷ್ಠ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.
ಚಂದ್ರಶೇಖರ ಶಾಸ್ತ್ರಿಗಳು ಸಂಸ್ಕ್ರತ ವಿದ್ವಾಂಸರಾಗಿದ್ದರು ಹಾಗೂ ಪಾಂಡಿತ್ಯಪೂರ್ಣ ಕೃತಿ ರಚನಾಕಾರರಾಗಿದ್ದರು. ಶ್ರೇಷ್ಠ ಆಡಳಿತಗಾರರಾಗಿ, ಉತ್ತಮ ಸಂಶೋಧಕರಾಗಿ, ಪತ್ರಿಕೋದ್ಯಮಿಯಾಗಿ ಸಂಘಟಕರಾಗಿ, ರಾಜಕೀಯ ವಿಮರ್ಶಕರಾಗಿ, ಕೃಷಿಕರಾಗಿ, ಚಲನಚಿತ್ರ ನಿರ್ಮಾಪಕರಾಗಿ ಹೀಗೆಯೇ ಹತ್ತು ಹಲವು ಕ್ಷೇತ್ರವಾಗಿ ತಮ್ಮ ವ್ಯಕ್ತಿತ್ವವನ್ನು ಪ್ರಕಾಶಿಸಿದವರು. ೧೯೧೯ ರಿಂದ ನಿರಂತರವಾಗಿ ಸುಮಾರು ಅರ್ಧ ಶತಮಾನದ ಕಾಲ ನಾಡಿನ ವಿವಿಧ ಪತ್ರಿಕೆಗಳಿಗೆ ಧರ್ಮ, ಸಾಹಿತ್ಯ, ಶಿಕ್ಷಣ, ರಾಷ್ಟ್ರದ, ರಾಜ್ಯದ ರಾಜಕೀಯ, ಕರ್ನಾಟಕ ಏಕೀಕರಣ, ಸ್ವಾತಂತ್ರ್ಯ ಚಳವಳಿ, ಭಾರತೀಯ-ಕರ್ನಾಟಕ ಸಂಸ್ಕೃತಿ ಇತ್ಯಾಧಿ ವಿಷಯಗಳನ್ನು ಕುರಿತು ಸಹಸ್ರಾರು ವಿಚಾರಪೂರ್ತಿ ಲೇಖನಗಳನ್ನು ಬರೆದಿದ್ದಾರೆ. ೧೯೨೬ ರಲ್ಲಿ ಅವರ ಭಗವಾನ್ ಬಸವೇಶ್ವರ ಜಯಂತಿ ಎಂಬ ಲೇಖನವನ್ನು ಅನೇಕ ಬಾರಿ ಮರು ಮುದ್ರಣ ಮಾಡಿ ಹಂಚಲಾಗಿತ್ತು.
ಹೀಗೆ ಅವರ ಸಂಶೋಧನ ಬರವಣಿಗೆ ಅದ್ಭುತ ಕಥಾನಕವೆಂಬಂತೆ ಸಾಗುತ್ತದೆ. ಈ ರೀತಿಯ ಇಪ್ಪತ್ತನೆಯ ಶತಮಾನದ ಆರಂಭಕಾಲದಿಂದ ಎಂಬತ್ತರ ದಶಕದವರೆಗೆ ನಿರಂತರವಾಗಿ ಆರುದಶಕಗಳಿಗೂ ಹೆಚ್ಚುಕಾಲ ಕನ್ನಡಕ್ಕಾಗಿ ತಮ್ಮನ್ನು ತೊಡಗಿಸಿಕೊಂಡರು.
ಚಂದ್ರಶೇಖರ ಶಾಸ್ತ್ರಿಯವರ ಉಪಲಬ್ದ ಕೃತಿಗಳು
೧. ಬಸವತತ್ವ ರತ್ನಾಕರ,
೨. ಕಾಡಸಿದ್ದೇಶ್ವರ ವಚನ,
೩. ಧಾರವಾಡದ ಮೃತ್ಯುಂಜಯ ಶಿವಯೋಗಿಗಳ ಚರಿತ್ರೆ
ಚಂದ್ರಶೇಖರ ಶಾಸ್ತ್ರಿಯವರ ಅನುಪಲಬ್ಧ ಕೃತಿಗಳು
೧. ಧರ್ಮವೀರ ಶಂಕ್ರಣ್ಣನವರ ಚರಿತ್ರೆ,
೨. ಮದನಮೋಹನ ಮಾಲವೀಯರ ಚರಿತ್ರೆ ,
೩. ಸ್ವತಂತ್ರ ಸಿದ್ದಲಿಂಗೇಶ್ವರ ವಚನ
೪. ಸಿದ್ದೇಶ್ವರ ವಚನ,
೫. ರಾಗಗಿರಿ,
೬. ಶಬರಶಂಕರ ಪಾರ್ಥಪುರುಷ,
೭. ಲಿಂಗಧಾರಣವೂ ವೇಧಮಂತ್ರಗಳೂ
೮. ಚಾಣಕ್ಯನೀತಿ ದರ್ಮಣ,
೯. ಭಗವಾನ್ ಬಸವೇಶ್ವರ ಜಯಂತಿ,
೧೦. ರೇಣುಕ ವಿಜಯ,
೧೧. ಕೊಲ್ಲಿ ಪಾಕಿ
೧೨. ಆತ್ಮಚರಿತ್ರೆ.
ಕನ್ನಡ ನಾಡಿನ ಏಕೀಕರಣ ಶಾಸ್ತ್ರಿ : ೧೯೩೩ರಲ್ಲಿ ಹುಬ್ಬಳ್ಳಿಯಲ್ಲಿ ಸಮಾವೇಶಗೊಂಡಿದ್ದ ೧೯ನೇ ಸಾಹಿತ್ಯ ಸಮ್ಮೇಳನದ ಕಾರ್ಯದರ್ಶಿಗಳಾಗಿ ಕೆಲಸ ಮಾಡಿದರು. ಅನೇಕ ಗ್ರಂಥಗಳನ್ನು ಪರಿಶೋಧಿಸಿ, ಪರಿಷ್ಕರಿಸಿ ಪ್ರಕಟಿಸಿದರು. ಹಂಪೆಯಲ್ಲಿ ನಡೆದ ವಿಜಯನಗರ ಸಾಮ್ರಾಜ್ಯದ ೬ನೇ ಶತಮಾನೋತ್ಸವ ಕಾರ್ಯಕ್ರಮದ ಸಮಿತಿಯ ಕಾರ್ಯದರ್ಶಿಯಾಗಿ ಶ್ರಮಿಸಿದ್ದಾರೆ. ೨೫ಕ್ಕೂ ಹೆಚ್ಚಿನ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ದಾಖಲೆ ನಿರ್ಮಿಸಿದ್ದಾರೆ.
ಬಿರುದು ಮತ್ತು ಗೌರವ ಪುರಸ್ಕಾರಗಳು :
ಕಾಶಿಯಲ್ಲಿ ವ್ಯಾಸಂಗದ ಕಾಲದಲ್ಲಿ ಸಾಹಿತ್ಯಾಚಾರ್ಯರಾಗಿ ವಿದ್ಯಾಲಂಕಾರ, ವಿದ್ಯಾವಾಗೀಶ ಬಿರುದನ್ನು ಗಳಿಸಿದ್ದಾರೆ.
ಸಾಹಿತ್ಯಾಚಾರ್ಯ, ವ್ಯಾಕರಣತೀರ್ಥ ಬಿರುದು
ಕರ್ನಾಟಕ ವಿದ್ಯಾವರ್ಧಕ ಸಂಘದ ಸುವರ್ಣ ಮಹೋತ್ಸವದ ಜತೆಯಲ್ಲೇ ೧೯೪೦ರಲ್ಲಿ ನಡೆದ ೨೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
೧೯೪೬ ರಲ್ಲಿ ಹೈದರಾಬಾದ್ ಸ್ಟೇಟ್ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
೧೯೬೬ರಲ್ಲಿ ಸಂಶೋಧಕರಿಗಾಗಿ ಇರುವ ಚಿದಾನಂದ ಪ್ರಶಸ್ತಿ
೧೯೬೬ ರಲ್ಲಿ ಮೈಸೂರು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
೧೯೬೮ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಸವತತ್ತ್ವ ರತ್ನಾಕರ ಗ್ರಂಥಕ್ಕೆ ದೊರೆತಿದೆ.
೧೯೮೩ ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.
೧೯೯೩ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಪ್ರಶಸ್ತಿ ದೊರೆತಿದೆ.
೧೯೯೮ ರಲ್ಲಿ ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’ ಪ್ರಶಸ್ತಿ (ಮರಣೋತ್ತರ).
ಶಾಸ್ತ್ರಿಗಳು ಶತಾಯುಷಿಗಳಾದಾಗ ಹಡಗಲಿ ಸಂಘರ್ಷ ಸಮಿತಿ ಚಂದ್ರಚೇತನ ಗ್ರಂಥವನ್ನೂ,
ಕನ್ನಡ ಸಾಹಿತ್ಯ ಪರಿಷತ್ತು ವ್ಯಾಕರಣ ತೀರ್ಥ ಸಂಭಾವನಾ ಗ್ರಂಥವನ್ನೂ ಸಮರ್ಪಿಸಿದೆ.
ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಾಹಿತ್ಯ ಸಮ್ಮೇಳನಗಳಲ್ಲಿ ವಿಶೇಷ ಸನ್ಮಾನಗಳು.
ಮಾಗಳ, ಹೊಳಲು ಸೇರಿದಂತೆ ಹೂವಿನ ಹಡಗಲಿ ತಾಲೂಕಿನ ವಿವಿಧ ಗ್ರಾಮಗಳ ಸಂಘ-ಸಂಸ್ಥೆಗಳಿಂದ ಸನ್ಮಾನಗಳು.
ಇಪ್ಪತ್ತನೆಯ ಶತಮಾನದ ಆರಂಭಕಾಲದಿಂದ ಎಂಬತ್ತರ ದಶಕದವರೆಗೆ ನಿರಂತರವಾಗಿ ಆರು ದಶಕಗಳಿಗೂ ಹೆಚ್ಚುಕಾಲ ಕನ್ನಡಕ್ಕಾಗಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು, ತಮ್ಮ ಬದುಕಿನ ಕೊನೆಯ ಕ್ಷಣದವರೆಗೂ ಕನ್ನಡ ನಾಡು ನುಡಿಯ ಸೇವೆಗೆ ಹಂಬಲಿಸಿದ ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿಗಳು ವೃದ್ಧಾಪ್ಯವನ್ನು ಮಾಗಳ ಗ್ರಾಮದಲ್ಲಿ ಕಳೆಯುತ್ತ ಅಲ್ಲಿಯೇ ದಿನಾಂಕ ೧೯೯೭ರ ಅಕ್ಟೋಬರ್ ೨೪ ರಂದು ಈ ಲೋಕವನ್ನಗಲಿದರು. ಕನ್ನಡ ಸಾಹಿತ್ಯ ಚರಿತ್ರೆಯ ಪುಟಗಳಲ್ಲಿ ತಮ್ಮದೆ ಆದ ಸ್ಥಾನವನ್ನುಳಿಸಿ ಅಸ್ತಂಗತರಾದರು.

- ಡಾ. ಪ್ರಸನ್ನ ದೇವರಮಠ ಅನಿಲಕುಮಾರ್, ಮಾಗಳ
ಪದವೀಧರ ಪ್ರಾಥಮಿಕ ಶಿಕ್ಷಕರು
ಸ.ಹಿ.ಪ್ರಾ.ಶಾಲೆ ಮುದೇನೂರು
ತಾ. ಹೂವಿನ ಹಡಗಲಿ ಜಿ.ವಿಜಯನಗರ.




















