ಹರಪನಹಳ್ಳಿ: ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದ ಧಾರ್ಮಿಕ ಪ್ರಸಿದ್ಧ ಉಚ್ಚಂಗೆಮ್ಮ ದೇವಿಯ ದರ್ಶನಕ್ಕೆ ಬನದ ಹುಣ್ಣಿಮೆ ಅಂಗವಾಗಿ ಶನಿವಾರ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಹುಣ್ಣಿಮೆ ಅಂಗವಾಗಿ ಭಕ್ತರು ಕೊರೆಯುವ ಚಳಿಯನ್ನು ಲೆಕ್ಕಿಸದೆ ದಾವಣಗೆರೆ, ಬಳ್ಳಾರಿ, ಶಿವಮೊಗ್ಗ, ಹಾವೇರಿ, ಕೊಪ್ಪಳ, ಚಿತ್ರದುರ್ಗ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ದೇವಿಗೆ ನೈವೇದ್ಯಕ್ಕೆ ರೊಟ್ಟಿ, ಬದನೆಕಾಯಿ ಪಲ್ಯೆ, ಮೊಸರು ಬುತ್ತಿ, ಹಣ್ಣು, ಹೂ, ಕಾಯಿ, ಕರ್ಪೂರಗಳಿಂದ ಪೂಜೆಯನ್ನು ನೆರೆವೇರಿಸಿ ಭಕ್ತಿ ಸಮರ್ಪಿಸಿದರು.
ಉಚ್ಚಂಗೆಮ್ಮ ದೇವಿಯ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ಬೆಟ್ಟದ ಆನೆ ಹೊಂಡಕ್ಕೆ ಕರೆತರಲಾಯಿತು. ಉತ್ಸವದಲ್ಲಿ ಭಕ್ತರು ಚೌಟಿಗೆ, ಗೀಗೀ ಪದಗಳ ಮೂಲಕ ಮೆರಗು ಹೆಚ್ಚಿಸಿದರು.
ಉಚ್ಚಂಗೆಮ್ಮ ದೇವಿಗೆ ಕುಂಕುಮಾರ್ಚನೆ, ಎಲೆ ಪೂಜೆ, ಹೊಳೆ ಪೂಜೆ, ಕ್ಷೀರಾಭಿಷೇಕ ಹಾಗೂ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ವರದಿ : ಜಿಲಾನಸಾಬ್ ಬಡಿಗೇರ್




















