ಬಳ್ಳಾರಿ / ಕಂಪ್ಲಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಸುಮಾರು 1043 ಕೆರೆ ಹೂಳು ತೆಗೆದು ಹಸ್ತಾಂತರ ಮಾಡಲಾಗಿದೆ. ಗ್ರಾಮದ ಜನರಿಗೆ ಕುಡಿಯಲು ನೀರು ಉಪಯೋಗವಾಗಿದೆ ಮತ್ತು ಪ್ರಾಣಿ, ಪಕ್ಷಿಗಳಿಗೆ ಅನುಕೂಲವಾಗಿದೆ ಮತ್ತು ಭಾವಿ, ಬೋರ್ವೆಲ್ ರಿಚಾರ್ಜ್ ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಿ ರೈತರಿಗೆ ಸಹಕಾರಿಯಾಗಿದೆ. ಅದರಂತೆ ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಮದಲ್ಲಿ ಊಟಿ ಕೊಳ್ಳದ ಕೆರೆ ಅಭಿವೃದ್ಧಿಪಡಿಸಲು ಊರಿನ ಗಣ್ಯರು ಮತ್ತು ಗ್ರಾಮ ಪಂಚಾಯತ್ ಅವರು ಕ್ಷೇತ್ರ ಧರ್ಮಸ್ಥಳ ಕ್ಕೆ ಮನವಿ ಪತ್ರ ನೀಡಿದ್ದು, ಈ ಮನವಿ ಪತ್ರವನ್ನು ಪರಮ ಪೂಜ್ಯ ಡಾ. ಡಿ ವೀರೇಂದ್ರ ಹೆಗಡೆಯವರು ಪರಿಶೀಲಿಸಿ ಕೆರೆ ಅಭಿವೃದ್ಧಿಪಡಿಸಲು ಸುಮಾರು ರೂ 10 ಲಕ್ಷ ಮಂಜೂರಾತಿ ನೀಡಿದರು. ಈ ಕೆರೆ ಕಾಮಗಾರಿ ಮತ್ತು ಭೂಮಿ ಪೂಜಾ ಕಾರ್ಯಕ್ರಮ ನಡೆಸಿ ಕೆರೆ ಹೂಳು ತೆಗೆಯುವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಬಳ್ಳಾರಿ ಜಿಲ್ಲೆಯ ನಿರ್ದೇಶಕರಾದ ರೋಹಿತಾಕ್ಷ ಮಾತನಾಡಿ ಯೋಜನೆಯಿಂದ ರಾಜ್ಯದಲ್ಲಿ ಅನುಷ್ಠಾನ ಮಾಡುತ್ತಿರುವ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮಗಳ ಬಗ್ಗೆ ಗ್ರಾಮಸ್ಥರಿಗೆ ಈ ಕೆರೆ ಪ್ರಯೋಜನ ಪಡೆದುಕೊಳ್ಳುವ ಬಗ್ಗೆ ತಿಳಿಸಿದರು. ಮೇಟ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಾಗಮ್ಮ ಊಟಿಕೊಳ್ಳದ ಕೆರೆ ಸಮಿತಿ ಅಧ್ಯಕ್ಷ ಗಿರೀಶ್, ಉಪಾಧ್ಯಕ್ಷರಾದ ಜಡೆಗೌಡ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಬೀರಲಿಂಗಪ್ಪ ಬಳ್ಳಾರಿ ಜಿಲ್ಲಾ ಜನ ಜಾಗೃತಿ ವೇದಿಕೆ ಕೋಶಾಧಿಕಾರಿಗಳಾದ ಡಾ. ವೆಂಕಟೇಶ್ ಬರಮಕ್ಕನವರ್, ತಾಲೂಕಿನ ಯೋಜನಾಧಿಕಾರಿಗಳಾದ ರಾಘವೇಂದ್ರ, ಕೃಷಿ ಅಧಿಕಾರಿಗಳಾದ ಸಂಜುಕುಮಾರ್, ವಲಯದ ಮೇಲ್ವಿಚಾರಕರಾದ ಅವಿನಾಶ್ ಹಾಗೂ ಸೇವಾಪ್ರತಿನಿಧಿಗಳು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















