ಬಳ್ಳಾರಿ / ಕಂಪ್ಲಿ : ಇತ್ತೀಚೆಗೆ ಕಂಪ್ಲಿ-ಕೋಟೆಯಲ್ಲಿರುವ ಸ್ವಾಗತ ಕಮಾನಿನ ನವೀಕರಣದ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಮೃತಪಟ್ಟ ಕುಟುಂಬಕ್ಕೆ ರಾಜ್ಯ ಸರ್ಕಾರ ಕೂಡಲೇ 50 ಲಕ್ಷ ಪರಿಹಾರ, ಗಾಯಕ್ಕೊಳಗಾದವರಿಗೆ ತಲಾ 25 ಲಕ್ಷ ಪರಿಹಾರ ನೀಡಬೇಕೆಂದು ಕಂಪ್ಲಿ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಬಿಎಲ್ಎ1 ಜಿ.ಶ್ರೀನಿವಾಸ ಆಗ್ರಹಿಸಿದರು.
ಅವರು ಭಾನುವಾರ ಪಟ್ಟಣದ ಕೊಟ್ಟಾಲ್ ರಸ್ತೆಯ ಮಾಜಿ ಶಾಸಕ ಟಿ.ಎಚ್.ಸುರೇಶ ಬಾಬು ನಿವಾಸದ ತುಂಗಭದ್ರ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಂಪ್ಲಿ ವ್ಯಾಪ್ತಿಯಲ್ಲಿ ಮೂರು ಸ್ವಾಗತ ಕಮಾನುಗಳಿವೆ. ಸುಮಾರು 3.36 ಲಕ್ಷ ವೆಚ್ಚದಲ್ಲಿ ಕಮಾನುಗಳ ನವೀಕರಣಕ್ಕಾಗಿ ಅಂದಾಜು ಪಟ್ಟಿ ತಯಾರಿಸಿ ಪ್ರಭಾರ ಮುಖ್ಯಾಧಿಕಾರಿ ಮತ್ತು ಅಭಿಯಂತರರು ವಾರ್ತಾ ಮತ್ತು ಪ್ರಚಾರ ಇಲಾಖೆ ಮುಖಾಂತರ 2025ರ ನವೆಂಬರ್ 18ರಂದು ಟೆಂಡರ್ ಪ್ರಕಟಣೆ ನೀಡಿ, ಡಿಸೆಂಬರ್-3ರಂದು ಬೆಳಿಗ್ಗೆ 11ಗಂಟೆಗೆ ಟೆಂಡರ್ ಅರ್ಜಿ ಸಲ್ಲಿಸಲು ಕೊನೆ ದಿನ, ಸಂಜೆ ಅರ್ಜಿ ಸ್ವೀಕರಿಸುವ ಹಾಗೂ ಡಿ.4ರಂದು ಟೆಂಡರ್ ತೆರೆಯಲಾಗಿರುತ್ತದೆ. ಆದರೆ, ದಾಖಲೆಗಳ ಪರಿಶೀಲಿಸಿ ಗುತ್ತಿಗೆದಾರನಿಗೆ ಆದೇಶ ನೀಡುವ ಒಳಗಾಗಿ ಅಂದರೆ ಡಿ.4 ರಂದೇ ಕಂಪ್ಲಿ-ಕೊಟ್ಟಾಲ್ ಸ್ವಾಗತ ಬೋರ್ಡ್ ನವೀಕರಣ ಕಾಮಗಾರಿ ಪೂರ್ಣಗೊಂಡಿರುತ್ತದೆ. ಮತ್ತು ಕಂಪ್ಲಿ ಉತ್ಸವ ನೆಪದ ತರಾತುರಿಯಲ್ಲಿ ಸಕ್ಕರೆ ಕಾರ್ಖಾನೆ (ಫ್ಯಾಕ್ಟರಿ) ಬಳಿಯ ವೆಲ್ಕಮ್ ಬೋರ್ಡ್ ನವೀಕರಣ ನಡೆದಿದೆ. ಇದು ಪೂರ್ವ ನಿಯೋಜಿತ ಕುತಂತ್ರವಾಗಿದೆ. ಫೆ.19ರಂದು ಕಂಪ್ಲಿ-ಕೋಟೆಯ ಸ್ವಾಗತ ಕಮಾನು ನವೀಕರಣ ವೇಳೆ ಕ್ರೇನ್ ಬೆಲ್ಟ್ ಕಟ್ಟಾಗಿ, ಓರ್ವ ವ್ಯಕ್ತಿ ಮೇಲೆ ಬಿದ್ದು ಮೃತಪಟ್ಟಿದ್ದಾನೆ. ಮತ್ತು ಇಬ್ಬರಿಗೆ ಗಾಯಗಳಾಗಿವೆ. ಈ ದುರ್ಘಟನೆಗೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಪ್ರಮುಖ ಅಧಿಕಾರಿಗಳನ್ನು ಬಿಟ್ಟು, ಬೇರೆಯವರ ಹೆಸರನ್ನು ಸೇರಿ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದಾರೆ. ಇಲ್ಲಿನ ಪುರಸಭೆ ಅಧಿಕಾರಿಗಳು ಕಾಂಗ್ರೆಸ್ ಕೈಗೊಂಬೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಪ್ರಭಾರ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಕಿರಿಯ ಅಭಿಯಂತರಾದ ತೇಜಶ್ವಿನಿ, ರಾಮಚಂದ್ರ ಇವರನ್ನು ವಜಾಗೊಳಿಸಬೇಕು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದರೂ, ಇದುವರೆಗೂ ಯಾರನ್ನು ಬಂಧಿಸಿಲ್ಲ ಎಂದು ಆರೋಪಿಸಿದರು.
ನಂತರ ಕಂಪ್ಲಿ ಮಂಡಲ ಯುವ ಮೋರ್ಚಾ ಉಪಾಧ್ಯಕ್ಷ ಎನ್.ಮನೋಜ್ಗೌಡ ಮಾತನಾಡಿ ಕಾನೂನಾತ್ಮಕವಾಗಿ ಟೆಂಡರ್ ಮಾಡದೇ, ಅಧಿಕಾರಿಗಳ ಬೇಜವಾಬ್ದಾರಿಗೆ ಓರ್ವ ವ್ಯಕ್ತಿ ಜೀವ ಕಳೆದುಕೊಳ್ಳಬೇಕಾಯಿತು. ಸ್ವಾಗತ ಕಮಾನಿನ ಮೇಲೆ ಬ್ಯಾನರ್ ಹಾಕಿ ಕೈತೊಳೆದುಕೊಂಡಿದ್ದಾರೆ. ಅಧಿಕಾರಿಗಳು ಜನಪರ ಕೆಲಸ ಮಾಡಬೇಕು ಹೊರತು ಏಜೆಂಟರಾಗಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಮೇಲಾಧಿಕಾರಿಗಳು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರವಹಿಸಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟಕ್ಕೆ ಸಿದ್ದ ಎಂದರು.
ಈ ಸಂದರ್ಭದಲ್ಲಿ ಕಂಪ್ಲಿ ಮಂಡಲ ಕಾರ್ಯದರ್ಶಿ ಕೆ.ಪ್ರಶಾಂತಕುಮಾರ, ನಗರ ಘಟಕ ಉಪಾಧ್ಯಕ್ಷ ಎಂ.ಭಾಸ್ಕರ್, ಪ್ರಧಾನ ಕಾರ್ಯದರ್ಶಿಗಳಾದ ಬಸವ ಪ್ರಭು, ಕಟ್ಟೆ ವಿಶ್ವನಾಥ, ಯುವ ಮುಖಂಡರಾದ ಚನ್ನಪ್ಪ, ಜಿ.ಚೇತನ್, ಎಸ್.ಆರ್.ಕಾರ್ತಿಕ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















