ಹತ್ತಿಕುಣಿ : ಹತ್ತಿಕುಣಿ ಗ್ರಾಮ ಪಂಚಾಯತ್‌ನಲ್ಲಿ ಎಪಿಡಿ ಸಂಸ್ಥೆಯ ವತಿಯಿಂದ ಎರಡು ದಿನಗಳ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮವು ಸಂಸ್ಥೆಯ ಮುಖ್ಯಸ್ಥ ಮಧುಕೇಶವ್ ಅವರ ಅಧ್ಯಕ್ಷತೆಯಲ್ಲಿ ಆರಂಭವಾಯಿತು.
ಕಾರ್ಯಕ್ರಮಕ್ಕೆ ಪಿಡಿಒ ರಾಜು ಮೇಟಿ, ವೈದ್ಯಾಧಿಕಾರಿ ಬಸ್ಸರೆಡ್ಡಿ ಪಾಟೀಲ್, ಆಯುಷ್ ಇಲಾಖೆಯ ಡಾ. ರಮೇಶ್, ವಾಟರ್ ಏಡ್ ಸಂಸ್ಥೆಯ ಶ್ರೀದೇವಿ ಹಾಗೂ ಪಶು ಆಸ್ಪತ್ರೆಯ ಡಾ. ಗೀತಾ ಚಾಲನೆ ನೀಡಿ ಶುಭಹಾರೈಸಿದರು.
ನಂತರ ಮಾತನಾಡಿದ ಪಿಡಿಒ ರಾಜು ಮೇಟಿ, “ಈ ಎರಡು ದಿನಗಳ ತರಬೇತಿ ಅತ್ಯಂತ ಅಗತ್ಯವಾಗಿದೆ. ಭಾಗವಹಿಸುವ ಎಲ್ಲರೂ ಇದರ ಸದುಪಯೋಗವನ್ನು ಪಡೆದು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು,” ಎಂದು ಹೇಳಿದರು.
ವೈದ್ಯಾಧಿಕಾರಿಗಳು ಮಾತನಾಡಿ “ಎಪಿಡಿ ಸಂಸ್ಥೆ ಹಲವು ವರ್ಷಗಳಿಂದ ವಿಕಲಚೇತನರ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದು, ವಿವಿಧ ಕೌಶಲ್ಯಾಧಾರಿತ ತರಬೇತಿಗಳನ್ನು ನೀಡುತ್ತಿದೆ.
ಈ ತರಬೇತಿಯ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು,” ಎಂದು ತಿಳಿಸಿ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ವಾಟರ್ ಏಡ್ ಸಂಸ್ಥೆಯ ಶ್ರೀದೇವಿ ಅವರು, “ಈ ತರಬೇತಿ ನಿಮ್ಮ ಭವಿಷ್ಯ ನಿರ್ಮಾಣಕ್ಕೆ ಸಹಕಾರಿ. ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ಪ್ರಯೋಜನ ಪಡೆಯಬೇಕು,” ಎಂದು ಹೇಳಿದರು. ನಂತರ ಸಂಪನ್ಮೂಲ ವ್ಯಕ್ತಿಯಾಗಿ ಪಶು ಇಲಾಖೆಯ ದೀಪಾ ತರಬೇತಿ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಸಂಪ್ರಿತಾ ದೇವಪುತ್ರ, ಶಿವಯೋಗಪ್ಪ, ರಮೇಶ್ ಕಟ್ಟಿಮನಿ, ಶಿಲ್ಪಾ, ಮೋಹನ್, ಬಸವರಾಜ್ ಮನ್ನು ಹಾಗೂ ಸಾಬಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ – ಜಗದೀಶ್ ಕುಮಾರ್ ಭೂಮಾ



















