ಬಾಗಲಕೋಟೆ/ ಹುನಗುಂದ: ನಿವೃತ್ತರು ತಮ್ಮ ಯಾವುದೇ ಕಾರ್ಯ ಅಡೆತಡೆ ಅಥವಾ ವಿಳಂಬ ಆದಲ್ಲಿ ಸಂಘದ ಪದಾಧಿಕಾರಿಗಳ ಮೂಲಕ ಭೇಟಿಯಾದಲ್ಲಿ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಹೇಳಿದರು.
ಅವರು ಇಲ್ಲಿನ ಗುರುಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಸರ್ಕಾರಿ ನಿವೃತ್ತ ನೌಕರರ ಹಿತವರ್ಧಕ ಸಂಘದ ೨೭ ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ೭೦ ವರ್ಷ ಪೂರೈಸಿದ ಹಿರಿಯ ಚೇತನರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ನೌಕರರ ಸಂಘದ ಅಧ್ಯಕ್ಷ ಸಂಗಮೇಶ ಪಾಟೀಲ ಮಾತನಾಡಿ, ನಿವೃತ್ತರು ಸದಾ ಲವಲವಿಕೆ ಹಾಗೂ ಕ್ರಿಯಾಶೀಲರಾಗಿರಬೇಕು. ಅದರಂತೆ ಮನೆ ಮಕ್ಕಳು ಹಾಗೂ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು ಎಂದರು.
ಸಂಘದ ಅಧ್ಯಕ್ಷ ಎ.ಕೆ.ಉಪನಾಳ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಿ.ಎನ್.ನಾಗನಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಿ.ಎಸ್.ಅಂಗಡಿ ವಾರ್ಷಿಕ ವರದಿ ಓದಿದರು. ಖಜಾಂಚಿ ವೈ.ವಿ. ಹೊಸಗೌಡರ, ನಿರ್ದೇಶಕರಾದ ಎ.ಎಸ್.ಮಠ, ಎನ್.ಎಂ. ನಾಡಗೌಡ, ಎಸ್.ಎಸ್.ಅಂಗಡಿ, ಎಲ್.ಜಿ.ದಿವಟಗಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ೭೦ ವರ್ಷ ಪೂರೈಸಿದ ನಿವೃತ್ತರನ್ನು ಸನ್ಮಾನ ಮಾಡಿದರು.
ಪ್ರಧಾನ ಕಾರ್ಯದರ್ಶಿ ಬಿ.ವೈ.ಕೊಡಗಾನೂರ ಸ್ವಾಗತಿಸಿದರು. ನಾಗಪ್ಪ ಕರಂಡಿ ವಂದಿಸಿದರು. ಎಸ್.ಕೆ.ಕೊನೆಸಾಗರ ನಿರೂಪಿಸಿದರು.
- ಕರುನಾಡ ಕಂದ ಪತ್ರಿಕೆ



















