(ಕಲ್ಯಾಣ ನಡಿಗೆ ಪಾದಯಾತ್ರೆ ಹಾಗೂ ಹರಳಯ್ಯ ಜ್ಯೋತಿಯಾತ್ರೆ ಯಶಸ್ವಿಯಾಗಿ ಸಂಪನ್ನಗೊಂಡ
ಪ್ರಯುಕ್ತ ಹಮ್ಮಿಕೊಂಡ ಕೃತಜ್ಞತಾ ಸಮಾರಂಭ)
ಬೀದರ್: 12ನೇ ಶತಮಾನದ ಶರಣರ ಚಿಂತನೆ ಅರ್ಥಪೂರ್ಣ. ವಚನಕಾರರು ನುಡಿದಂತೆ ಬದುಕಿದವರು. ಅವರ ಸಂದೇಶ ಸಮಾಜದ ಪ್ರಗತಿಗೆ ಎಂದಿಗೂ ಪ್ರಸ್ತುತ.ಕಾಯಕ ದಾಸೋಹಕ್ಕೆ ಪ್ರಾಮುಖ್ಯತೆ ನೀಡಿದ ವಚನ ಚಳುವಳಿ ವೈಚಾರಿಕತೆಯ ತಳಹದಿಯ ಮೇಲೆ ನಿಂತಿದೆ.
ಶರಣರ ತತ್ವ, ಸಿದ್ದಾಂತ ಹಾಗೂ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ.
ನಿಸ್ವಾರ್ಥ ಸೇವೆಯಿಂದ ಮಾತ್ರ ಜೀವನವನ್ನು ಸಾರ್ಥಕ ಮಾಡಿಕೊಳ್ಳಬಹುದಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷರು, ಕಲ್ಯಾಣ ನಡಿಗೆ ಪಾದಯಾತ್ರೆ
ಹಾಗೂ ಹರಳಯ್ಯಾ ಜ್ಯೋತಿಯಾತ್ರೆಯ ರೂವಾರಿಗಳಾದ ಶರಣ ಬಸವಕುಮಾರ ಪಾಟೀಲ ಅಣ್ಣನವರು ನುಡಿದರು.
ನಗರದ ಸುಪ್ರೀಯಾ ಹೋಟೆಲ್ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಕಲ್ಯಾಣ ನಡಿಗೆ ಪಾದಯಾತ್ರೆ ಹಾಗೂ ಹರಳಯ್ಯಾ ಜ್ಯೋತಿಯಾತ್ರೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡ
ಪ್ರಯುಕ್ತ ಹಮ್ಮಿಕೊಂಡ ಕೃತಜ್ಞತಾ ಸಮಾರಂಭದ ಘನ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು
ಶಿವಶರಣರು ಜಾತ್ಯತೀತ ವ್ಯವಸ್ಥೆಗೆ ಅಡಿಪಾಯ ಹಾಕಿ ಎಲ್ಲ ತಾರತಮ್ಯಗಳಿಗೆ ತಿಲಾಂಜಲಿ ಇಟ್ಟರು. ನವಸಮಾನ ಸಮಾಜ ಸ್ಥಾಪನೆಗೆ ಕಾರಣರಾದರು. ದುಡಿಯದೇ ಉಣ್ಣುವುದು ದಾರಿದ್ರ್ಯ, ಶ್ರಮಿಸದೇ ಗಳಿಸುವುದು ಸಮಾಜದ ವಂಚನೆ ಎಂಬ ಚಿಂತನೆ ಅನುಸರಿಸಿ ಕಾಯಕ ಬದುಕಿಗೆ ಪ್ರೇರೇಪಿಸಿದರು. ಅಂದಿನ ಅನುಭವ ಮಂಟಪದಲ್ಲಿ ಕಾಯಕ, ದಾಸೋಹ, ಜ್ಞಾನ, ಲಿಂಗದೀಕ್ಷೆ, ಸಮಾನತೆ ಬಗ್ಗೆ ಚರ್ಚೆ ನಡೆಯುತ್ತಿತ್ತು. ಜತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡುವುದು ಹಾಗೂ ಅನಿಷ್ಟ ಪದ್ಧತಿ ನಿವಾರಣೆಗೆ ಶ್ರಮಿಸಿದರು. ಅಂತೆಯೇ ಶರಣರು ಪ್ರತಿಪಾದಿಸಿದ ತತ್ವ ಸಿದ್ಧಾಂತಗಳನ್ನು ಹಾಗೂ ಸಮಾಜಕ್ಕೆ ನೀಡಿದ ವೈಚಾರಿಕ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶರಣರ ಸರಳ ಸಂಸ್ಕೃತಿ, ಆಚಾರ, ವಿಚಾರಗಳನ್ನು ಇಂದಿನ ಸಮಾಜಕ್ಕೆ ತಿಳಿಸಬೇಕಾಗಿರುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ.ಕಲ್ಯಾಣ ನಡಿಗೆ ಪಾದಯಾತ್ರೆ ಹಾಗೂ ಹರಳಯ್ಯಾ ಜ್ಯೋತಿಯಾತ್ರೆ ಯಶಸ್ವಿಯಾಗಿ ಸಂಪನ್ನಗೊಳ್ಳಲು ಕಾರಣರಾದ ಪ್ರತಿಯೊಬ್ಬರಿಗೂ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕಾರ ಮತ್ತು ಬೆಂಬಲ ನೀಡಿರುವ ಸರ್ವರಿಗೂ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ. ನಿಮ್ಮ ಸಹಕಾರ ಹೀಗೆ ಸದಾ ಕಾಲ ನಮ್ಮ ಜೊತೆಗೆ ಇರಲೆಂದರು.
ಶರಣ ನಾಗಯ್ಯ ಸ್ವಾಮಿ ಮಾತನಾಡಿ ಜನಮೆಚ್ಚುಗೆ ಕಾರ್ಯಕ್ರಮ ಮಾಡದ, ಮನ – ಮನಸ್ಸುಗಳಿಗೆ
ಮುಟ್ಟುವ ಐತಿಹಾಸಿಕ ಕಲ್ಯಾಣ ನಡಿಗೆ ಪಾದಯಾತ್ರೆಯು ಶರಣ ಬಸವಕುಮಾರ ಪಾಟೀಲ ಅಣ್ಣನವರು ಯಶಸ್ವಿಯಾಗಿ ಮಾಡಿದ್ದು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ದಾಖಲಾಗಿದೆ ಎಂದರು.
ಶರಣ ಪಂಡಿತ ಬಾಳೊರೆ ಮಾತನಾಡಿ ಅಪ್ಪಾ, ಅವ್ವಾ,ಅಕ್ಕಾ, ಅಣ್ಣಾ ಎನ್ನುವ ಬಸವಾದಿ ಶರಣರು ಹಾಕಿಕೊಟ್ಟ ಮಾನವೀಯತೆಯ ಸಂಸ್ಕೃತಿ ನಮ್ಮದಾಗಬೇಕು ಎಂದರು.
ಶರಣ ರಾಜೇಂದ್ರಕುಮಾರ್ ಜೊನ್ನೆಕೇರಿ ಮಾತನಾಡಿ
ಲೆಕ್ಕ ಪತ್ರಗಳನ್ನು ಮಂಡನೆ ಮಾಡಿದರು. ನಂತರ ಜಮಾ, ಖರ್ಚು – ವೆಚ್ಚಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಶರಣ ಭೀಮರಾವ ಬಿರಾದಾರ್ ಮಾತನಾಡಿ ಬಸವಕುಮಾರ ಪಾಟೀಲರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ ಎಂದರು.
ಶರಣ ಚಂದ್ರಕಾಂತ ಬಿರಾದಾರ ಮಾತನಾಡಿ ಕಲ್ಯಾಣ ನಡಿಗೆ ಪಾದಯಾತ್ರೆಯು ಅರ್ಥಪೂರ್ಣವಾಗಿ ಯಶಸ್ವಿಗೊಂಡಿದೆ ಎಂದರು.
ಶರಣ ಸಿದ್ದಯ್ಯ ಕವಡಿಮಠ ಮಾತನಾಡಿ ಬಿಜನ್ನಳ್ಳಿ ಕ್ಷೇತ್ರ ಹಾಗೂ ಬಸವಕಲ್ಯಾಣ ಕ್ಷೇತ್ರ ಸಂಪೂರ್ಣವಾಗಿ ಅಭಿವೃದ್ಧಿ ಆಗಬೇಕು. ಇದಕ್ಕೆ ಸರ್ಕಾರ ಪ್ರಾಧಾನ್ಯತೆ ನೀಡಿ, ಅನುದಾನ ಬಿಡುಗಡೆ ಮಾಡಬೇಕು.
ವಿಶೇಷವಾಗಿ ತ್ರಿಪುರಾಂತ ಕರೆಯ ಮಧ್ಯೆ ವಚನ ಮಂಟಪ ಸ್ಥಾಪನೆ ಆಗಬೇಕು. ಬಸವಕಲ್ಯಾಣ ಜಿಲ್ಲಾ ಕೇಂದ್ರವಾಗಿ, ರಾಜ್ಯದ ಸಾಂಸ್ಕೃತಿಕ ರಾಜಧಾನಿ ಆಗಬೇಕು.ಬಸವಕಲ್ಯಾಣ ಹಾಗೂ ಕೂಡಲಸಂಗಮ ಸ್ಥಳಗಳಿಗೆ ರೈಲ್ವೆ ನಿಲ್ದಾಣ ಮಂಜೂರು ಮಾಡಬೇಕು. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು. ವಿಶೇಷವಾಗಿ ಬಸವಣ್ಣನವರ ಜಯಂತಿಯನ್ನು ಭಾರತ ಸರ್ಕಾರದ ವತಿಯಿಂದ ಆಚರಿಸಬೇಕು. ಶರಣರ ವಿಚಾರಧಾರೆಗಳನ್ನು ಸಮಾಜಕ್ಕೆ ತಿಳಿಸಿ, ಶರಣ ಪರಂಪರೆಯ ಬಗ್ಗೆ ಯುವ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ರೂಪಿಸುವುದು ಇಂದಿನ ದಿನಗಳಲ್ಲಿ ಅಗತ್ಯವಾಗಿದೆ ಎಂದು ತಿಳಿಸಿದರು.
ಶರಣ ಸೋಮನಾಥಪ್ಪಾ ಅಷ್ಟೂರೆ ಮಾತನಾಡಿ
ಬಸವಾದಿ ಶರಣರು ಸ್ವಅನುಭವದಿಂದ ರಚಿಸಿರುವ ವಚನಗಳು ಬದುಕಿಗೆ ಅದರ್ಶವಾಗಿವೆ. ಪ್ರತಿದಿನ ವಚನಗಳನ್ನು ಓದಿ ಅರ್ಥೈಸಿಕೊಂಡರೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು.
ಇಂದಿನ ಸಮಾಜ ನೈತಿಕವಾಗಿ ದಾರಿ ತಪ್ಪುತ್ತಿದ್ದು, ಯುವ ಜನರು ಶರಣರ ಆದರ್ಶಗಳನ್ನು ರೂಡಿಸಿಕೊಳ್ಳುವ ಮೂಲಕ ಆರೋಗ್ಯಕರ ಸಮಾಜ ನಿರ್ಮಿಸುವ ಅಗತ್ಯವಿದೆ. ಗುರು ಹಿರಿಯರು ಪೋಷಕರನ್ನು ಗೌರವಿಸಿ, ಶರಣರ ಪರಂಪರೆ ಪಾಲಿಸಬೇಕೆಂದು ತಿಳಿಸಿದರು.
ಶರಣೆ ಡಾ. ದೇವಕಿ ನಾಗೂರೆ ಮಾತನಾಡಿ ಬಸವಾದಿ ಶರಣರು ನಡೆದು ಬಂದ ಹಾದಿಯಲ್ಲಿ ಎಲ್ಲರೂ ಸಾಗಬೇಕಿದೆ. ಶರಣರ ವಚನಗಳು ಬದುಕಿನ ಪಾಠವಾಗಿದ್ದು, ಪ್ರತಿಯೊಬ್ಬರೂ ವಚನಗಳ ಸಾರ ಅರಿತು ಜೀವನ ಸಾಗಿಸಬೇಕು. ವಿದ್ಯೆಯ ಜೊತೆಗೆ ಶರಣರ ಸಂಸ್ಕೃತಿ ಮೈಗೂಡಿಸಿಕೊಳ್ಳಬೇಕೆಂದರು.
ಶರಣೆ ಲಿಂಗಾರತಿ ನಾವದಗೇರಿ ಮಾತನಾಡಿ ಬಸವಕುಮಾರ ಪಾಟೀಲ ಅಣ್ಣನವರ ನಿಸ್ವಾರ್ಥ ಸೇವೆ ನಮ್ಮೆಲ್ಲರಿಗೂ ಅನುಕರುಣೀಯವಾಗಿದೆ ಎಂದರು.
ಸಮಾರಂಭದಲ್ಲಿ ಓಂಪ್ರಕಾಶ್ ರೊಟ್ಟೆ, ರಾಮಶೆಟ್ಟಿ ಪನ್ನಾಳೆ, ಕಂಟೆಪ್ಪಾ ಗಂದಿಗುಡ್ಡೆ, ಪ್ರಭಾಕರ,
ರಮೇಶ ಸಲಗರ್, ಸಂಗಮೇಶ ಎನ್ ಜವಾದಿ, ಮಹೇಶ ತೋಳಜಾಪೂರ್ , ಹೇಮಲತಾ ಪಾಟೀಲ, ದೇವಕಿ ಪಾಟೀಲ ನಾಗೂರೆ, ಮಾಧವಿ ಬುಕ್ಕಾ, ಶೈಲಜಾ ಧುಮ್ಮನಸೂರೆ, ಶಿವಶರಣಪ್ಪಾ ಪಾಟೀಲ, ಹೌಸಶೆಟ್ಟಿ ಪಾಟೀಲ,ಗುಂಡಪ್ಪ ಹುಡಗೆ, ಅಲ್ಲಮಪ್ರಭು ನಾವದಗೇರಿ, ಮಲ್ಲಿಕಾರ್ಜುನ ಬಿರಾದಾರ್, ಹಾವಯ್ಯ ಸ್ವಾಮಿ, ಧನರಾಜ್ ಭೊಂಯಾರ್, ಶಿವಕುಮಾರ, ಮಹೇಶ ಬಿರಾದಾರ್, ರಮೇಶ ಬಿರಾದಾರ್, ರಾಜಕುಮಾರ ಧುಮ್ಮನಸೂರೆ,
ಮಂಜುನಾಥ ರೆಡ್ಡಿ, ಪ್ರದೀಪ ಬಿರಾದಾರ್, ವಿಕಾಸ ಭೀಮಶೆಟ್ಟಿ, ಗಣಪತಿ ಬಿರಾದಾರ್ ಸೇರಿದಂತೆ ಅನೇಕ ಶರಣರು ಹಾಜರಿದ್ದರು.
ಈ ಸಮಯದಲ್ಲಿ ಔರಾದ, ಭಾಲ್ಕಿ, ಬಸವಕಲ್ಯಾಣ, ಹುಮನಾಬಾದ್,ಚಿಟಗುಪ್ಪ,ಬೀದರ್, ಕಲಬುರ್ಗಿ, ಜಹೀರಾಬಾದ್, ಹೈದರಾಬಾದಿಂದ ಆಗಮಿಸಿದ ನೂರಾರು ಬಸವ ಭಕ್ತರು ಉಪಸ್ಥಿತರಿದ್ದರು.
ಶರಣೆ ಉಮಾದೇವಿ ಚಿಲ್ಲರಗಿ ಸ್ವಾಗತಿಸಿದರು.
ಶರಣ ರಮೇಶ ಚಿಲ್ಲರಗಿ ನಿರೂಪಿಸಿದರು.
ಶರಣ ಮನೋಜ ಬುಕ್ಕಾ ಶರಣು ಸಮರ್ಪಣೆ ನೆರವೇರಿಸಿದರು.
- ಕರುನಾಡ ಕಂದ ಪತ್ರಿಕೆ



















