ಗಮಕ ಸಂಸ್ಕೃತಿಯಲ್ಲಿ ಮಿಂಚಿದ ಮುಗಳಖೋಡದ ಶರಣಬಸವ ಶಾಸ್ತ್ರಿಗಳು.
ಬಾಗಲಕೋಟೆ ಜಿಲ್ಲೆಯ ರನ್ನನ ತವರು ಮುಧೋಳದ ರನ್ನ ಭವನದಲ್ಲಿ ದಿ.15 ರವಿವಾರ ಸಂಜೆ 5:30 ರಿಂದ ರಾತ್ರಿ 9 ರ ವರೆಗೆ ಬಾಗಲಕೋಟೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಜರುಗಿದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವು ಪಾಲ್ಗೊಂಡಿದ್ದ ಜನಸ್ತೋಮಕ್ಕೆ ಸಂಭ್ರಮವನ್ನು ನೀಡಿತು.
ಜಿಲ್ಲಾ ಉಸ್ತುವಾರಿ ಸಚಿವ ಆರ್. ಬಿ. ತಿಮ್ಮಾಪುರವರ ಅನುಪಸ್ಥಿತಿಯಲ್ಲಿ ಮುಖಂಡರಾದ ಸದಾಶಿವ ತಿಮ್ಮಾಪುರವರ ಅಧ್ಯಕ್ಷತೆಯಲ್ಲಿ ಹಿರಿಯ ಸಾಹಿತಿ ಶಿವಪ್ರಕಾಶ್ ಸರಗಣಾಚಾರಿ ಅವರ ಸುಮ್ಮುಖದಲ್ಲಿ ಜಿಲ್ಲೆಯ ಹಿರಿಯ ಕಲಾವಿದ ಸಂಗಪ್ಪ ಹೂಗಾರ್ ಅವರ ಉಪಸ್ಥಿತಿಯಲ್ಲಿ ಸಾಂಸ್ಕೃತಿಕ ಸೌರಭ ಕಾಯ೯ಕ್ರಮ ಅಚ್ಚುಕಟ್ಟಾಗಿ ಜರುಗಿತು.
ನಮ್ಮ ನೆಲ ಮೂಲ ಸಂಸ್ಕೃತಿಯನ್ನು ಪರಿಚಯಿಸುವ ಈ ಸುಂದರ ಕಾರ್ಯಕ್ರಮದಲ್ಲಿ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಪೂಜ್ಯರಾದ ಶರಣಬಸವ ಶಾಸ್ತ್ರಿಗಳ ಗಮಕ ಕಥಾ ಕೀರ್ತನ ಆಕರ್ಷಣೀಯವಾಗಿತ್ತು. ಗಮಕ ಕಲಾವಿದ ಶರಣಬಸವ ಶಾಸ್ತ್ರಿಗಳು ಬಿಟ್ಟು ಹೋಗುವ ಈ ಪ್ರಪಂಚಕ್ಕೆ ಒಂದಿಷ್ಟು ಕೊಟ್ಟು ಹೋಗಿ ಹೆಣ್ಣು ಹೊನ್ನು ಮಣ್ಣು ಇದಾವುದು ನಮ್ಮದಲ್ಲ, ಬಂಧುಗಳಾದವರು ಬಂದುಂಡು ಹೋಗುವರು
ಬಂಧನವ ಕಳೆಯಲರಿಯರು
ಈ ಭವಬಂಧನದಿಂದ ಪಾರು ಮಾಡುವ ಸಮರ್ಥ ಶಕ್ತಿ ಕೇವಲ ಸದ್ಗುರುನಾಥನಿಗೆ ಮಾತ್ರ ಇದೆ ಎಂದು ಶ್ರೀ ಸಿದ್ಧಾರೂಢರ ಕಥಾನಕವನ್ನು ತಮ್ಮ ಗಾಯನದೊಂದಿಗೆ ಜನರಿಗೆ ಮುಟ್ಟಿಸಿದರು.
ಖ್ಯಾತ ಹಿಂದುಸ್ತಾನಿ ಗಾಯಕ ಜಮಖಂಡಿಯ ರಾಘವೇಂದ್ರ ಕಟ್ಟಿಯವರ ಶಾಸ್ತ್ರೀಯ ಸಂಗೀತ ಮುದ ನೀಡಿತು.
ಜನಪದ ಕಲಾವಿದ ಚಂದು ಹೊಸಮನಿ, ಗುಳೇದಗುಡ್ಡದ ಸುಗಮ ಸಂಗೀತ ಕಲಾವಿದ ಬಸವರಾಜ್ ಸಿಂದಗಿಮಠ, ತುಳಸಿಗಿರಿಯ ಬನಪ್ಪ ತಪರೇಶಿ ಅವರ ಪಾರಿಜಾತ ಪ್ರದರ್ಶನವು ಜನರನ್ನು ಸೆರೆಹಿಡಿಯಿತು.
ಕೆರೂರಿನ ಸಂಗಪ್ಪ ಹೂಗಾರ್ ಅವರ ಕರಡಿ ತಂಡ, ಜಾನಮಟ್ಟಿಯ ಬಸಪ್ಪ ತಳವಾರ ಡೊಳ್ಳಿನ ತಂಡ, ಲೀಲಾವತಿ ರಾಯರ ಅವರ ಸಮೂಹ ನೃತ್ಯ, ಕಂಕನವಾಡಿಯ ಮುರಿಯಪ್ಪ ಬೆಳಗಲಿ ಅವರ ಗೊಂಬೆ ಕುಣಿತ ಸೇರಿದಂತೆ ವಿವಿಧ ತಂಡಗಳು ಯಶಸ್ವಿ ಪ್ರದರ್ಶನ ನೀಡಿದರು.
ಸಹಾಯಕ ನಿರ್ದೇಶಕ ಸಂತೋಷ್ ಭೋವಿ ಸ್ವಾಗತಿಸಿದರು.
ಇಲಾಖೆಯ ರಾಜೇಶ, ಹುಲಗೇಶ, ಗಣೇಶ ಮುಂತಾದವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
- ಕರುನಾಡ ಕಂದ ಪತ್ರಿಕೆ




















