ಹಿರಿಯ ಸಾಹಿತಿ, ಪರಿಸರ ಚಿಂತಕ ಭೇರ್ಯ ರಾಮಕುಮಾರ್ ಅವರು ಮೈಸೂರಿನ ಸುವರ್ಣ ಬೆಳಕು ಫೌಂಡೇಶನ್ ಸಂಸ್ಥೆಯ 2016 ರ ಸುವರ್ಣ ಪರಿಸರ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
ಸ್ವತಃ ಸಾಹಿತಿಗಳು, ಹಿರಿಯ ಪತ್ರಕರ್ತರು ಆಗಿರುವ ಇವರು ಕಳೆದ 1985 ರಿಂದ ಇಲ್ಲಿಯವರೆಗೆ ಮೈಸೂರು,ಮಂಡ್ಯ,ಕೊಡಗು, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳ ಸುಮಾರು
ಒಂದು ಸಾವಿರಕ್ಕೂ ಹೆಚ್ಚು ಶಾಲಾ ಕಾಲೇಜುಗಳಲ್ಲಿ ಪರಿಸರ ಉಪನ್ಯಾಸಗಳನ್ನು ನಿರಂತರವಾಗಿ ನೀಡಿದ್ದಾರೆ.
ಗ್ರಾಮಾಂತರ ಬುದ್ಧಿ ಜೀವಿಗಳ ಬಳಗ ಅಧ್ಯಕ್ಷರಾಗಿ ತಾವು ನಡೆಸಿರುವ 365 ಸಾಹಿತ್ಯ ಕಾರ್ಯಕ್ರಮಗಳಲ್ಲಿ ಪ್ರತಿ ಕಾರ್ಯಕ್ರಮದಲ್ಲೂ 100 ಸಸಿಗಳನ್ನು ಉಚಿತವಾಗಿ ವಿತರಿಸುತ್ತಾ ಬಂದಿದ್ದಾರೆ.
ಜೊತೆಗೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ, ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಕವಿ ಕಲಾವಿದರಿಂದ ಪರಿಸರ ಪ್ರತಿಜ್ಞೆ ಮಾಡಿಸುತ್ತಿದ್ದಾರೆ.
ಪ್ರತಿಯೊಬ್ಬರೂ ತಮ್ಮ ಜನ್ಮದಿನದಂದು, ತಮ್ಮ ತಂದೆ ತಾಯಿಯ ಜನ್ಮ ದಿನದಂದು , ತಮ್ಮ ಕುಟುಂಬದ ಹಿರಿಯರ ನೆನಪಿನಲ್ಲಿ ಪ್ರತಿ ವರ್ಷವೂ ಒಂದೊಂದು ಸಸಿ ನೆಟ್ಟು ಪೋಷಿಸುವುದಾಗಿ ಇವರು ಎಲ್ಲೆಡೆ ಪ್ರಮಾಣ ಮಾಡಿಸುತ್ತಾ ಬಂದಿದ್ದಾರೆ. ಪರಿಸರ ಸಂರಕ್ಷಣೆಗಾಗಿ ಭೇರ್ಯ ರಾಮಕುಮಾರ್ ಅವರು ಮಾಡುತ್ತಿರುವ ಅಪರೂಪದ ಸೇವೆಯನ್ನು ಪರಿಗಣಿಸಿ ಅವರಿಗೆ ಸುವರ್ಣ ಪರಿಸರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸುವರ್ಣ ಬೆಳಕು ಫೌಂಡೇಶನ್ ಸಂಸ್ಥೆಯ ಜೂನ್ 20 ರಂದು ಮೈಸೂರಿನ ಅರಸು ಬೋರ್ಡಿಂಗ್ ಶಾಲೆಯ ಎದುರು ಪ್ರಕೃತಿ ಫುಡ್ ಸಭಾಂಗಣದಲ್ಲಿ ನಡೆಯಲಿರುವ ಸಾವಯುವ ಕೃಷಿ ಮೇಳದಲ್ಲಿ ಭೇರ್ಯ ರಾಮ್ ಕುಮಾರ್ ಅವರಿಗೆ ಸುವರ್ಣ ಪರಿಸರ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
- ಕರುನಾಡ ಕಂದ ಸುದ್ದಿ




















