ಹರಪನಹಳ್ಳಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ದುಡಿಯುವ ಗ್ರಾಮೀಣ ಪ್ರದೇಶದ ಜನರಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಅರಿವು ಮೂಡಿಸುವ ಉದ್ದೇಶದಿಂದ, ಇಂದು ಮತ್ತಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಎನ್ ಶಿರನಹಳ್ಳಿ ಗ್ರಾಮದಲ್ಲಿ ನರೇಗಾ ಕೆಲಸದ ಸ್ಥಳದಲ್ಲಿ ‘ಅಂತರರಾಷ್ಟ್ರೀಯ ಯೋಗ ದಿನಾಚರಣೆ’ ಯನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು.
ದೈನಂದಿನ ಕೆಲಸ ಆರಂಭಿಸುವ ಮುನ್ನ, ಕೂಲಿ ಕಾರ್ಮಿಕರು ಸಾಮೂಹಿಕವಾಗಿ ಯೋಗಾಸನ ಮತ್ತು ಪ್ರಾಣಾಯಾಮ, ಕಪಾಲಭಾತಿ, ಅನುಲೋಮ-ವಿಲೋಮ ಮಾಡಿದರು. ಸ್ಥಳೀಯ ಯೋಗ ತರಬೇತುದಾರ ಹಾಗೂ ಮೆಟ್ ದಕ್ಷಿಣಮೂರ್ತಿ ಕಿತ್ತೂರು ಕಾರ್ಮಿಕರಿಗೆ ಸರಳವಾದ ಯೋಗಭ್ಯಾಸಗಳನ್ನು ಮಾಡಿಸಿ, ನಿತ್ಯ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.
ಆರೋಗ್ಯಕ್ಕೆ ಆದ್ಯತೆ: ನಿರಂತರ ದೈಹಿಕ ದುಡಿಮೆಯಲ್ಲಿ ತೊಡಗುವ ಕಾರ್ಮಿಕರು, ಯೋಗ ಮಾಡುವುದರಿಂದ ಬೆನ್ನುನೋವು, ಕೀಲುನೋವು ಸೇರಿದಂತೆ ದೈಹಿಕ ಒತ್ತಡದಿಂದ ಮುಕ್ತಿ ಪಡೆಯಬಹುದು ಎಂದು ತಜ್ಞರು ತಿಳಿಸಿದರು.
ಜನರ ಭಾಗಿತ್ವ: ಈ ವಿಶೇಷ ಕಾರ್ಯಕ್ರಮದಲ್ಲಿ ನರೇಗಾ ಮೇಲ್ವಿಚಾರಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದು, ಕಾರ್ಮಿಕರ ಜೊತೆ ಯೋಗಾಸನದಲ್ಲಿ ಪಾಲ್ಗೊಂಡರು.
- ಕರುನಾಡ ಕಂದ ಸುದ್ದಿ




















