ಜನನಾಯಕನ ಉದಯ
ಸಾರ್ವಜನಿಕ ಜೀವನದಲ್ಲಿ ನಾಯಕತ್ವ ಎಂಬುದು ಕೇವಲ ಅಧಿಕಾರ ಅಥವಾ ಸ್ಥಾನಮಾನಗಳಿಂದ ನಿರ್ಣಯವಾಗುವುದಿಲ್ಲ; ಬದಲಿಗೆ ಅದು ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವಿಗೆ ಮಿಡಿಯುವ ಅಂತಃಕರಣ ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಧೀರತನದಿಂದ ರೂಪುಗೊಳ್ಳುತ್ತದೆ. ಇಂತಹ ಅಪರೂಪದ ಜನಪರ, ಪ್ರಬುದ್ಧ ಹಾಗೂ ಸಮಾಜಮುಖಿ ನಾಯಕತ್ವಕ್ಕೆ ಸಾಕ್ಷಿಯಾಗಿ ನಿಂತವರು ಶ್ರೀ ನಿಂಗಪ್ಪ ಬಿ. ಪ್ರಬುದ್ಧಕರ್ ಅವರು.
ಕಡು ಬಡತನದ ಬೇಗೆಯಲ್ಲಿ ಬೆಂದು, ಬಾಲ್ಯದ ಸಂಕಷ್ಟಗಳನ್ನು ಮೆಟ್ಟಿ ನಿಂತು, ಇಂದು ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ ರಾಜಕಾರಣ ಮತ್ತು ಸಾಮಾಜಿಕ ಪರಿವರ್ತನೆಯ ಹಾದಿಯಲ್ಲಿ ದಿಕ್ಸೂಚಿಯಾಗಿ ಹೊರಹೊಮ್ಮಿದ್ದಾರೆ.
ಜನನ ಮತ್ತು ಬಾಲ್ಯದ ಸವಾಲುಗಳು

ಶ್ರೀ ನಿಂಗಪ್ಪ ಬಿ. ಪ್ರಬುದ್ಧಕರ್ ಅವರು 1 ಜೂನ್ 1984 ರಂದು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಬಾಚನಾಳ ಗ್ರಾಮದ ಅತ್ಯಂತ ಬಡ ಕುಟುಂಬವೊಂದರಲ್ಲಿ ಜನಿಸಿದರು. ತಂದೆ ಬಸವರಾಜ ಹಾಗೂ ತಾಯಿ ಅಂಬಮ್ಮ ಇವರ ಪ್ರೀತಿಯ ಪುತ್ರನಾಗಿ ಜನಿಸಿದ ನಿಂಗಪ್ಪನವರ ಬಾಲ್ಯ ಸುಲಭದ್ದಾಗಿರಲಿಲ್ಲ. ಬಾಲ್ಯದ ಅತ್ಯಂತ ಕೋಮಲ ಹಂತದಲ್ಲಿಯೇ ತಂದೆಯ ಆಶ್ರಯವನ್ನು ಕಳೆದುಕೊಂಡ ಅವರಿಗೆ ತಾಯಿಯೇ ಸರ್ವಸ್ವವಾದರು. ತಾಯಿ ಅಂಬಮ್ಮ ಅವರು ಧೃತಿಗೆಡದೆ 4 ಜನ ಗಂಡು ಮಕ್ಕಳು 2 ಜನ ಹೆಣ್ಣು ಮಕ್ಕಳನ್ನು ಸಾಕಿ ಸಲುಹಿದರು. ನಿಂಗಪ್ಪ ರವರು ತಂದೆ ತಾಯಿಯ ಕೊನೆಯ ಗಂಡು ಮಗನಾಗಿದ್ದಾರೆ. ತಾಯಿಯ ಪ್ರೀತಿಯ ನೆರಳಿನಲ್ಲಿ, ದಾರಿದ್ರ್ಯದ ನಡುವೆಯೂ ಸ್ವಾಭಿಮಾನದ ಪಾಠಗಳನ್ನು ಕಲಿಯುತ್ತಾ ನಿಂಗಪ್ಪ ಅವರು ಬೆಳೆದರು.
ಅವರ ಪ್ರಾಥಮಿಕ ಶಿಕ್ಷಣವು ಸ್ವಗ್ರಾಮವಾದ ಬಾಚನಾಳದಲ್ಲಿಯೇ ಮುಗಿಯಿತು. ಮುಂದೆ ಪ್ರೌಢ ಶಿಕ್ಷಣವನ್ನು ರಾಜನಾಳ ಮತ್ತು ಕಮಲಾಪುರದಲ್ಲಿ ಪೂರ್ಣಗೊಳಿಸಿದ ಅವರು, ಪಿಯುಸಿ ಶಿಕ್ಷಣಕ್ಕಾಗಿ ಕಲಬುರಗಿ ನಗರದ ಮಿಲಿಂದ ಕಾಲೇಜುನಲ್ಲಿ ಹೆಜ್ಜೆ ಇಟ್ಟರು. ಪ್ರತಿ ಹಂತದ ಶಿಕ್ಷಣದಲ್ಲೂ ಬಡತನ ಅವರ ಹಾದಿಗೆ ಅಡ್ಡಬಂದರೂ, ಓದಬೇಕೆಂಬ ಜ್ಞಾನದ ಹಸಿವು ಮತ್ತು ಸಾಧಿಸುವ ಹಠ ಅವರಲ್ಲಿ ಜಾಗೃತವಾಗಿತ್ತು.

” ಸಮಾಜ ಸೇವೆಯೇ ನನ್ನ ಧರ್ಮ, ಸಂವಿಧಾನ ಸಂರಕ್ಷಣೆ ನನ್ನ ಕರ್ತವ್ಯ. “
ಹೋರಾಟದ ಹಾದಿಯಲ್ಲಿ ಮೊದಲ ಹೆಜ್ಜೆ
ವಿದ್ಯಾರ್ಥಿ ದೆಸೆಯಲ್ಲಿಯೇ ನಿಂಗಪ್ಪನವರಲ್ಲಿ ಸಾಮಾಜಿಕ ಪ್ರಜ್ಞೆ ಮೊಳಕೆಯೊಡೆದಿತ್ತು. ಸಮಾಜದಲ್ಲಿ ನಡೆಯುತ್ತಿದ್ದ ಅಸಮಾನತೆ ಹಾಗೂ ಶೋಷಣೆಗಳು ಇವರ ಎಳೆಯ ಮನಸ್ಸನ್ನು ತೀವ್ರವಾಗಿ ಕಾಡುತ್ತಿದ್ದವು. ಇವರು ಕೇವಲ 9ನೇ ತರಗತಿಯಲ್ಲಿದ್ದಾಗ, ಬೆಳಗಾವಿಯಲ್ಲಿ ದಲಿತ ಮಹಿಳೆಯರ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ನಡೆದ ಬೃಹತ್ ರಸ್ತೆ ತಡೆ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಾರ್ವಜನಿಕ ಹೋರಾಟದ ರಣರಂಗಕ್ಕೆ ಧುಮುಕಿದರು. ಇದು ಇವರ ಬದುಕಿನ ಮಹತ್ವದ ತಿರುವಾಗಿತ್ತು.
ಇದೇ ಅವಧಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (KSDSS) ಪೃಥ್ವಿರಾಜ ಗೌರೆ, ಬಸವರಾಜ ಮುತ್ತಂಗಿ, ವಿಜಯಕುಮಾರ ಟೈಗರ್, ಧೂಳಪ್ಪ ಪಟ್ಟನಾಯಕ ಮುಂತಾದ DSS ಹೋರಾಟಗಾರರ ಚಳುವಳಿಗಳ ತತ್ವ ಸಿದ್ಧಾಂತಗಳು ಇವರನ್ನು ಆಕರ್ಷಿಸಿದವು. ಜಗಜ್ಯೋತಿ ಬಸವಣ್ಣನವರ ಕಾಯಕ, ಸಾಮಾಜಿಕ ಸಮಾನತೆ ಮತ್ತು ದಾಸೋಹ ತತ್ವ, ಭಗವಾನ್ ಬುದ್ಧನ ಕರುಣೆ ಮತ್ತು ಪ್ರಜ್ಞೆ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಾನತೆಯ ಸಿದ್ಧಾಂತಗಳನ್ನು ತಮ್ಮ ಉಸಿರಾಗಿಸಿಕೊಂಡರು. ಈ ಮಹಾಪುರುಷರ ವಿಚಾರಧಾರೆಗಳು ಅವರ ವ್ಯಕ್ತಿತ್ವವನ್ನು ಒಬ್ಬ ಪ್ರಬುದ್ಧ ಹೋರಾಟಗಾರನನ್ನಾಗಿ ಪರಿವರ್ತಿಸಿದವು.

ಸರ್ಕಾರಿ ಹುದ್ದೆಯ ತ್ಯಾಗ ಮತ್ತು ಕ್ರಾಂತಿಕಾರಿ ನಿರ್ಧಾರ
2005ರಲ್ಲಿ ಪಿಯುಸಿ ಪರೀಕ್ಷೆಯನ್ನು ಅತ್ಯುತ್ತಮ ಅಂಕಗಳೊಂದಿಗೆ ಪ್ರಥಮ ದರ್ಜೆಯಲ್ಲಿ ಮಿಳಿಂದ ಕಾಲೇಜು ಕಲಬುರಗಿಯಲ್ಲಿ ಉತ್ತೀರ್ಣರಾದ ನಿಂಗಪ್ಪ ಅವರಿಗೆ ಅದೇ ವರ್ಷ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (NEKRTC – ಪ್ರಸ್ತುತ KKRTC) ನಿರ್ವಾಹಕ (Conductor) ಹುದ್ದೆ ಮತ್ತು KSRTC ಕೋಲಾರದಲ್ಲಿ ಏಕಕಾಲಕ್ಕೆ ಲಭಿಸಿತು. ಆದರೆ ನಿಂಗಪ್ಪ ಪ್ರಬುದ್ಧಕರ ಇವರು ಕಲಬುರಗಿ ವಿಭಾಗ ಆಯ್ಕೆ ಮಾಡಿಕೊಂಡು ಅಲ್ಲೆ ಸೇವೆ ಆರಂಭಿಸಿದರು. ಬಡ ಕುಟುಂಬವೊಂದಕ್ಕೆ ಸರ್ಕಾರಿ ನೌಕರಿ ಎಂದರೆ ಅದೊಂದು ದೊಡ್ಡ ಆಸರೆ. ಆದರೆ, ನಿಂಗಪ್ಪನವರ ಒಳಗಿದ್ದ ಕ್ರಾಂತಿಕಾರಿ ಚೇತನಕ್ಕೆ ಕೇವಲ ಒಂದು ನೌಕರಿಯ ಚೌಕಟ್ಟಿನಲ್ಲಿ ಬಂಧಿಯಾಗಲು ಸಾಧ್ಯವಾಗಲಿಲ್ಲ.
ಬುದ್ಧ, ಬಸವ, ಅಂಬೇಡ್ಕರ್, ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಛತ್ರಪತಿ ಸಾಹು ಮಹಾರಾಜರ ಆದರ್ಶಗಳು ಅವರನ್ನು ಸಮಾಜದ ವಿಶಾಲ ಸೇವೆಯತ್ತ ಕೈಬೀಸಿ ಕರೆಯುತ್ತಿದ್ದವು. ತಳ ಸಮುದಾಯಗಳ ರಾಜಕೀಯ ಸಬಲೀಕರಣಕ್ಕಾಗಿ ಶ್ರಮಿಸಿದ ಮಾನ್ಯವರ್ ಕಾಂಶಿರಾಮ್ ಮತ್ತು ಅಕ್ಕ ಮಾಯಾವತಿಯವರ ಬಹುಜನ ಚಳುವಳಿಯಿಂದ ಪ್ರೇರಿತರಾದ ಅವರು, 2011ರಲ್ಲಿ ತಮ್ಮ ಸುಭದ್ರವಾಗಿದ್ದ ಸರ್ಕಾರಿ ಉದ್ಯೋಗಕ್ಕೆ ಧೈರ್ಯವಾಗಿ ರಾಜೀನಾಮೆ ನೀಡಿದರು. ಸಮಾಜದ ಶೋಷಿತರ, ದೀನದಲಿತರ ಧ್ವನಿಯಾಗಲು ತಮ್ಮ ಇಡೀ ಜೀವನವನ್ನೇ ಮುಡುಪಾಗಿಡಲು ತೀರ್ಮಾನಿಸಿದ ಈ ನಿರ್ಧಾರ ಅವರ ನಿಸ್ವಾರ್ಥ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ.

ಬಹುಜನ ಸಮಾಜ ಪಕ್ಷ (BSP) ಮತ್ತು ಗ್ರಾಮೀಣ ರಾಜಕಾರಣದ ಸುವರ್ಣ ಯುಗ
ಸರ್ಕಾರಿ ನೌಕರಿ ತೊರೆದ ನಂತರ ಪೂರ್ಣಾವಧಿ ರಾಜಕೀಯ ಕಾರ್ಯಕರ್ತರಾಗಿ ಹೊರಹೊಮ್ಮಿದ ಇವರನ್ನು 2012ರಲ್ಲಿ ಬಿಎಸ್ಪಿ (BSP) ಕಲಬುರಗಿ ಗ್ರಾಮೀಣ ಕ್ಷೇತ್ರದ ಅಧ್ಯಕ್ಷರನ್ನಾಗಿ ಅಂಬರಾಯ ಬೆಳಮಗಿ ಇವರ ಬೆಂಬಲದಿಂದ bsp ಕರ್ನಾಟಕ ಉಸ್ತುವಾರಿ ಡಾ. ಅಶೋಕ ಸಿದ್ಧಾರ್ಥ ಇವರ ಸಮ್ಮುಖದಲ್ಲಿ ಕಮಲಾಪುರದಲ್ಲಿ ದೊಡ್ಡ ಸಭೆ ಮಾಡಿ ನೇಮಿಸಲಾಯಿತು. 2013ರ ವಿಧಾನಸಭಾ ಚುನಾವಣೆ ಅಭ್ಯರ್ಥಿ ಅಂಬರಾಯ ಬೆಳಮಗಿ ಮತ್ತು 2014ರ ಲೋಕಸಭಾ ಅಭ್ಯರ್ಥಿ ಮಹಾದೇವ ಧನ್ನಿ ಇವರ ಚುನಾವಣೆಗಳಲ್ಲಿ ಹಗಲಿರುಳು ಶ್ರಮಿಸಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದರು.
2015ರಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ 35 ವರ್ಷಗಳಿಂದ ಅಧಿಕಾರದಿಂದ ವಂಚಿತವಾದ ಸಮುದಾಯಕ್ಕೆ ಬಹುಜನ ತತ್ವ ಸಿದ್ಧಾಂತ ಅಡಿಯಲ್ಲಿ sc, st, obc ಗಳನ್ನು ಒಂದುಗೂಡಿಸಿ ಅಧಿಕಾರದ ಗದ್ದುಗೆ ತಂದು ಕೊಟ್ಟರು. ನೇರವಾಗಿ ಗ್ರಾಮೀಣ ಜನತೆಯ ಆಡಳಿತ ಚುಕ್ಕಾಣಿ ಹಿಡಿದರು. 2016ರಲ್ಲಿ ಡೊಂಗರಗಾಂವ ಕ್ಷೇತ್ರದಿಂದ ತಾಲೂಕು ಪಂಚಾಯತ್ ಚುನಾವಣೆಗೆ ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕೇವಲ 103 ಮತಗಳ ಅಲ್ಪ ಅಂತರದಿಂದ ಪರಾಭವಗೊಂಡರೂ ಧೃತಿಗೆಡದೆ ಜನಸೇವೆಯನ್ನು ಮುಂದುವರೆಸಿದರು.
2018ರಲ್ಲಿ ಕಿಣ್ಣಿ ಸಡಕ್ ಗ್ರಾಮ ಪಂಚಾಯತ್ನ ಅಧ್ಯಕ್ಷರ ಅವಿಶ್ವಾಸವಾದಾಗ ಸಾಮಾನ್ಯ ಅಭ್ಯರ್ಥಿ ಎದುರು ಚುನಾವಣೆ ನಿಂತು ವಿಜಯ ಪತಾಕೆ ಹಾರಿಸಿ, ಕಿಣ್ಣಿ ಸಡಕ್ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಇವರ ಆಡಳಿತಾವಧಿ ಸ್ವರ್ಣಾಕ್ಷರಗಳಲ್ಲಿ ಬರೆದಿಡುವಂತದ್ದು. ಅಂಗವಿಕಲರ ಹಣ ಸದುಪಯೋಗ ಮಾಡಿ ಅಂಗವಿಕಲರಿಗೆ ಆಶ್ರಯವಾದರು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (MGNREGA) ಅತ್ಯಂತ ಪಾರದರ್ಶಕವಾಗಿ ಮತ್ತು ಸಮರ್ಪಕವಾಗಿ ಜಾರಿಗೆ ತಂದಿದ್ದಕ್ಕಾಗಿ ಇವರ ನಾಯಕತ್ವದ ಗ್ರಾಮ ಪಂಚಾಯತ್ಗೆ ಸತತ ಎರಡು ಬಾರಿ ” ಜಿಲ್ಲಾ ಮಟ್ಟದ ಅತ್ಯುತ್ತಮ ಪ್ರಶಸ್ತಿ ” ಲಭಿಸಿತು. ಆಡಳಿತ ಅನುದಾನದಲ್ಲಿ ಗ್ರಾಮ ಪಂಚಾಯತ್ ನವೀಕರಣ ಮತ್ತು ಪೀಠೋಪಕರಣಗಳ ಖರೀದಿ ಮಾಡಿ ಕಿಣ್ಣಿ ಸಡಕ್ ಗ್ರಾಮ ಪಂಚಾಯತಿಯನ್ನು ಸುಂದರ ಗ್ರಾಮ ಪಂಚಾಯತಿಯನ್ನಾಗಿ ಮಾಡಿದರು. ಅದೇ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ಹಿರಿಯ ಮುಖಂಡ ಶ್ರೀ ರೇವುನಾಯಕ ಬೆಳಮಗಿ ಅವರ ಪರವಾಗಿ ಮುಂಚೂಣಿಯಲ್ಲಿ ನಿಂತು ಪ್ರಚಾರ ಮಾಡಿದರು. ಆದರೆ, ತದ ನಂತರ ಪಕ್ಷದೊಳಗಿನ ಕೆಲವು ದ್ವಂದ್ವ ನೀತಿ ಹಾಗೂ ಸಿದ್ಧಾಂತಗಳ ವ್ಯತ್ಯಾಸದಿಂದಾಗಿ ಸ್ವಾಭಿಮಾನಿ ನಾಯಕ ನಿಂಗಪ್ಪನವರು ಬಿಎಸ್ಪಿ ಪಕ್ಷವನ್ನು ತೊರೆದರು.
ಬೌದ್ಧ ಧಮ್ಮದ ಪ್ರಚಾರ ಮತ್ತು ಧಾರ್ಮಿಕ ಜಾಗೃತಿ
ರಾಜಕೀಯ ಏರಿಳಿತಗಳ ನಡುವೆಯೂ ನಿಂಗಪ್ಪನವರ ಆತ್ಮಾಭಿಮಾನದ ಸಿದ್ಧಾಂತ ಬದಲಾಗಲಿಲ್ಲ. ಬಿಎಸ್ಪಿಯಿಂದ ಹೊರಬಂದ ನಂತರ ಅವರು ತಮ್ಮನ್ನು ಸಂಪೂರ್ಣವಾಗಿ ಭಾರತೀಯ ಬೌದ್ಧ ಮಹಾಸಭೆ (BSI) ಸಂಘಟನೆಯಲ್ಲಿ ತೊಡಗಿಸಿಕೊಂಡರು. ಶೀಘ್ರದಲ್ಲೇ ಇವರ ಕಾರ್ಯಕ್ಷಮತೆಯನ್ನು ಗುರುತಿಸಿ ಕಲಬುರಗಿ ಜಿಲ್ಲಾ ಉಪಾಧ್ಯಕ್ಷರ ಜವಾಬ್ದಾರಿಯನ್ನು ನೀಡಲಾಯಿತು.
ಜಿಲ್ಲಾ ಅಧ್ಯಕ್ಷರಾದ ಅಂಬಾರಾಯ ಬೆಳಮಗಿ ಅವರ ಹೆಗಲಿಗೆ ಹೆಗಲು ಕೊಟ್ಟು ನಡೆದ ನಿಂಗಪ್ಪ ಅವರು, ಭಾರತೀಯ ಬೌದ್ಧ ಮಹಾಸಭೆಯ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಶ್ರದ್ಧೇಯ ಭೀಮರಾವ ಯಶವಂತರಾವ ಅಂಬೇಡ್ಕರ್ (ಡಾ. ಬಿ.ಆರ್. ಅಂಬೇಡ್ಕರ್ ಇವರ ಮೊಮ್ಮಗ) ಅವರನ್ನು ಎರಡು ಬಾರಿ ಕಲಬುರಗಿ ಜಿಲ್ಲೆಗೆ ಯಶಸ್ವಿಯಾಗಿ ಆಹ್ವಾನಿಸಿ, ಐತಿಹಾಸಿಕ ಧಮ್ಮ ಸಭೆಗಳನ್ನು ಆಯೋಜಿಸಿದರು. ತನ್ನ ಹುಟ್ಟೂರಾದ ಬಾಚನಾಳ ಗ್ರಾಮದಲ್ಲಿ 2020 ರಲ್ಲಿ ಬುದ್ಧರ ಮೂರ್ತಿ ಪ್ರತಿಷ್ಠಾಪನೆ ಮಾಡಲು ಹಗಲಿರುಳು ಮುಂಚೂಣಿ ಉಪಾಸಕನಾಗಿ ದುಡಿದು ಬುದ್ಧ ವಿಹಾರದಲ್ಲಿ ಬುದ್ಧರ ಮೂರ್ತಿ ಪ್ರತಿಷ್ಠಾಪನೆ ಮಾಡಿದರು. ಸೊಂತ, ಪಂಗರಗಿ, ಡೊಂಗರಗಾಂವ ಮಹಾಗಾಂವ ಗ್ರಾಮದಲ್ಲಿ ಬುದ್ಧರ ಮೂರ್ತಿ ಪ್ರತಿಷ್ಟಾಪನೆ ಮಾಡಲು ದುಡಿದರು, ಮರಗುತ್ತಿ ಮತ್ತು ಕಾಳಮಂದರ್ಗಿ ಗ್ರಾಮದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ರವರ ಮೂರ್ತಿ ಪ್ರತಿಷ್ಠಾಪನೆ ಮಾಡಲು ಹಗಲು ರಾತ್ರಿ ದುಡಿದರು. ಅಲ್ಲದೆ, ಪ್ರಸಿದ್ಧ ಚಲನಚಿತ್ರ ನಟ ಹಾಗೂ ಅಂತರರಾಷ್ಟ್ರೀಯ ಬೌದ್ಧ ಉಪಾಸಕ ಗಗನ್ ಮಲಿಕ್ ನೇತೃತ್ವದ ಪಂಚಶೀಲ ಧ್ವಜ ಯಾತ್ರೆಯನ್ನು ಕಮಲಾಪುರದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿ, ಧಾರ್ಮಿಕ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಸೂತ್ರಧಾರಿಯಾಗಿದ್ದಾರೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಲ್ಲಿ ಜನಸೇವೆಯ ಮುಂದುವರಿಕೆ…
2019ರಲ್ಲಿ ಸಮಾಜದ ಹಿರಿಯರ, ಚಿಂತಕರ ಹಾಗೂ ಅಪಾರ ಬೆಂಬಲಿಗರ ಒಕ್ಕೊರಲ ಒತ್ತಾಯದ ಮೇರೆಗೆ ಶ್ರೀ ನಿಂಗಪ್ಪ ಬಿ. ಪ್ರಬುದ್ಧಕರ್ ಅವರು ದೇಶದ ಐತಿಹಾಸಿಕ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಿದ್ಧಾಂತವನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಯಾದರು. ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ವಿಜಯಕ್ಕಾಗಿ ಹಳ್ಳಿಹಳ್ಳಿಗಳಲ್ಲಿ ತಮ್ಮ ಸ್ವಂತ ಹಣದಲ್ಲಿ ತೀವ್ರ ಪ್ರಚಾರ ಕೈಗೊಂಡರು. ಕಾಂಗ್ರೆಸ್ ಪಕ್ಷ ಹಮ್ಮಿಕೊಂಡ ಡಿಜಿಟಲ್ ಸದಸ್ಯತ್ವ ಅಭಿಯಾನದ ಸಮಯದಲ್ಲಿ ಕಮಲಾಪುರ ಭಾಗದಲ್ಲಿ ಕ್ರಾಂತಿ ಸೃಷ್ಟಿಸಿದ ಇವರು, ಸ್ವತಃ ಮುಂಚೂಣಿಯಲ್ಲಿ ನಿಂತು ಸುಮಾರು 4,200 ಕ್ಕೂ ಹೆಚ್ಚು ಜನರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದರು. ಇವರ ಈ ಅದ್ಭುತ ಸಂಘಟನಾ ಚಾತುರ್ಯವನ್ನು ಕಂಡು ಕರ್ನಾಟಕದ ಅಂದಿನ ಕೆಪಿಸಿಸಿ ಅಧ್ಯಕ್ಷರೂ, ಪ್ರಸ್ತುತ ಕರ್ನಾಟಕದ ಮುಖ್ಯಮಂತ್ರಿ ಆಗಿರುವ ಶ್ರೀ ಡಿ. ಕೆ. ಶಿವಕುಮಾರ್ ಅವರು ವಿಶೇಷವಾಗಿ ಕಲಬುರಗಿಯಲ್ಲಿ ಪ್ರಶಂಸಿಸಿ ಗೌರವಿಸಿದರು. ಕಮಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೈಜನಾಥ ತಡಕಲ್ ಇವರ ಆದೇಶದ ಮೇರೆಗೆ ಕಮಲಾಪುರ ತಾಲೂಕದಲ್ಲಿ 1803 ಜನ ಬೂತ್ ಪದಾಧಿಕಾರಿಗಳನ್ನು ಮಾಡಿಕೊಟ್ಟರು ಮತ್ತು ಹಿರಿಯ ಮುಖಂಡರಾದ ವಿಜಯಕುಮಾರ ಜಿ. ರಾಮಕೃಷ್ಣ, ಗುರುರಾಜ ಮಾಟೂರ್ ಅವರ ಮಾರ್ಗದರ್ಶನದಲ್ಲಿ ಪ್ರಸ್ತುತ ಪಕ್ಷದ ಅತ್ಯಂತ ನಂಬಿಕಸ್ಥ ಹಾಗೂ ನಿಷ್ಠಾವಂತ ನಾಯಕರಾಗಿ ಮುನ್ನಡೆಯುತ್ತಿದ್ದಾರೆ.
ಕೋವಿಡ್ ಬಿಕ್ಕಟ್ಟು ಮತ್ತು ನಿಸ್ವಾರ್ಥ ಸಮಾಜ ಸೇವೆ
ಮಾನವೀಯತೆಯ ನಿಜವಾದ ಪರೀಕ್ಷೆ ಸಂಕಷ್ಟದ ಸಮಯದಲ್ಲಿ ಆಗುತ್ತದೆ. 2020ರ ಕೋವಿಡ್-19 ಮಹಾಮಾರಿಯ ಭೀಕರ ದಿನಗಳಲ್ಲಿ ದೇಶವೇ ಲಾಕ್ಡೌನ್ ಆಗಿದ್ದಾಗ, ಶ್ರೀ ನಿಂಗಪ್ಪ ಬಿ. ಪ್ರಬುದ್ಧಕರ್ ಅವರು ಜನಸಾಮಾನ್ಯರ ಕಾವಲುಗಾರನಾಗಿ ನಿಂತರು. ಹಸಿವಿನಿಂದ ಕಂಗಾಲಾಗಿದ್ದ ವಲಸೆ ಕಾರ್ಮಿಕರಿಗೆ, ಬಡ ಜನರಿಗೆ ಸ್ವಂತ ಅಧ್ಯಕ್ಷರ ಗೌರವ ಧನದಲ್ಲಿ ಖರ್ಚಿನಲ್ಲಿ , ಮಾಸ್ಕ್ ಹಾಗೂ ಸ್ಯಾನಿಟೈಸರ್ಗಳನ್ನು ವಿತರಿಸಿದರು. ಇದೆ ಸಂದರ್ಭದಲ್ಲಿ ಅವರ ಆತ್ಮೀಯ ಗೆಳೆಯ ಬಸವರಾಜ ಮುತ್ತಂಗಿ ಇವರು ಕರೋನಾದಿಂದ ಮರಣ ಹೊಂದಿದಾಗ ಕರೋನಾ ಸೊಂಕೀತರ ಸಲುವಾಗಿ ನಿಂಗಪ್ಪ ರವರು ಇನ್ನೂ ಹೆಚ್ಚಾಗಿ ಜೀವದ ಭಯವಿಲ್ಲದೆ ದುಡಿದರು. 2020ರ ಸ್ಥಳೀಯ ಚುನಾವಣೆಯಲ್ಲಿ ಕೆಲವು ಕುತಂತ್ರ ರಾಜಕೀಯ ಕಾರಣಗಳಿಂದ ಸೋಲನ್ನು ಅನುಭವಿಸಬೇಕಾಗಿ ಬಂದರೂ, ಅವರು ಸಾರ್ವಜನಿಕ ಸೇವೆಯಿಂದ ಮಾತ್ರ ಒಂದು ಹೆಜ್ಜೆಯೂ ಹಿಂದೆ ಸರಿಯಲಿಲ್ಲ. ಸದಾ ಜನರ ಮಧ್ಯ ನಿಂತು ಜನ ಸೇವೆ ಮಾಡುತ್ತಿದ್ದಾರೆ.
BOX
2026ರ ಐತಿಹಾಸಿಕ ಅಂಬೇಡ್ಕರ್ ಜಯಂತಿಯ ಯಶಸ್ವಿ ನೇತೃತ್ವ
ಇತ್ತೀಚೆಗೆ 2026ರಲ್ಲಿ ಕಮಲಾಪುರ ತಾಲ್ಲೂಕಿನಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ವರ್ಷದ ಜಯಂತ್ಯುತ್ಸವದ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಶ್ರೀ ನಿಂಗಪ್ಪ ಬಿ. ಪ್ರಬುದ್ಧಕರ್ ಅವರು ಸರ್ವಾನುಮತದಿಂದ ಆಯ್ಕೆಯಾದರು. ಹತ್ತು ಹಲವಾರು ಅಡಚಣೆ ಮತ್ತು ವಿರೋಧಿಗಳ ಷಡ್ಯಂತ್ರ ಮಧ್ಯೆ ಜಯಂತ್ಯೋತ್ಸವದ ಈ ಆಚರಣೆಯನ್ನು ಕೇವಲ ಒಂದು ಹಬ್ಬವನ್ನಾಗಿ ಮಾಡದೆ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ರಾಂತಿಯ ವೇದಿಕೆಯನ್ನಾಗಿ ಪರಿವರ್ತಿಸಿದರು. ಸರ್ವ ಸಮಾಜದ ಮುಖಂಡರನ್ನು, ಪ್ರಗತಿಪರ ಚಿಂತಕರನ್ನು ಹಾಗೂ ಪೂಜನೀಯ ಭಿಕ್ಷು ಸಂಘವನ್ನು ಒಂದೇ ವೇದಿಕೆಗೆ ತರುವಲ್ಲಿ ಯಶಸ್ವಿಯಾದರು.
ಶ್ರೀ ನಿಂಗಪ್ಪ ಬಿ ಪ್ರಬುದ್ಧಕರ ಒಬ್ಬ ಶಿಕ್ಷಣ ಪ್ರೇಮಿಯಾಗಿದ್ದು, ಇವರು 2001 ರಿಂದ ಇಲ್ಲಿಯವರೆಗೆ ಅಂದರೆ 25 ವರ್ಷಗಳಿಂದ ಅವರ ಹುಟ್ಟುರಾದ ಬಾಚನಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸ್ವಾತಂತ್ರ್ಯ ದಿನಾಚರಣೆಯಂದು ಮತ್ತು ಜನವರಿ 26 ಸಂವಿಧಾನ ದಿನಾಚರಣೆಯ ದಿನದಂದು ಪ್ರತಿ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ವೈಯಕ್ತಿಕ ಬಹುಮಾನ ಕೊಡುತ್ತಾ ಬಂದಿದ್ದಾರೆ. ಅದರಂತೆ ಡಾ. ಬಿ. ಆರ್. ಅಂಬೇಡ್ಕರ್ ಕಮಲಾಪುರ ತಾಲೂಕ ಜಯಂತ್ಯೋತ್ಸವದ ದಿನದಂದು ಪ್ರತಿಭಾವಂತ ಯುವಕರಿಗೆ, ಕಲಾವಿದರಿಗೆ ಗುರುತಿಸಿ ಸನ್ಮಾನಿಸಿ ನಗದು ಬಹುಮಾನ ಕೊಡುವ ಕೆಲಸ ಮಾಡಿದ್ದರು.
ಈ ಐತಿಹಾಸಿಕ ಜಯಂತಿಯ ಅಂಗವಾಗಿ ಹಮ್ಮಿಕೊಂಡ ಸಮಾಜಮುಖಿ ಕಾರ್ಯಕ್ರಮಗಳು:
ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ತಾಲ್ಲೂಕು ಮಟ್ಟದ ವಿವಿಧ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸ್ಪರ್ಧೆಗಳ ಆಯೋಜನೆ.
ಸ್ಪರ್ಧೆಗಳಲ್ಲಿ ವಿಜೇತರಾದ ಯುವಕ-ಯುವತಿಯರಿಗೆ ವೈಯಕ್ತಿಕವಾಗಿ ನಗದು ಬಹುಮಾನ ನೀಡಿ ಪ್ರೋತ್ಸಾಹ.
ಮಾನವೀಯತೆಯ ಸಂಕೇತವಾಗಿ ಬೃಹತ್ ರಕ್ತದಾನ ಶಿಬಿರದ ಯಶಸ್ವಿ ನಿರ್ವಹಣೆ.
ಗ್ರಾಮೀಣ ಬಡ ಜನರಿಗಾಗಿ ಉಚಿತ ಬೃಹತ್ ಆರೋಗ್ಯ ತಪಾಸಣೆ ಹಾಗೂ ಕಣ್ಣಿನ ಚಿಕಿತ್ಸಾ ಶಿಬಿರದ ಆಯೋಜನೆ.
ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ SSLC ಮತ್ತು PUC ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ತಾಲ್ಲೂಕಿನ ನೂರಾರು ವಿದ್ಯಾರ್ಥಿಗಳಿಗೆ ಸಾರ್ವಜನಿಕ ಸನ್ಮಾನ ಮತ್ತು ಪುರಸ್ಕಾರ ನೀಡುವ ಕಾರ್ಯವನ್ನು ಡಾ. ಬಿ. ಆರ್. ಅಂಬೇಡ್ಕರ್ 135 ನೇಯ ಜಯಂತ್ಯೋತ್ಸವ ಎಲ್ಲಾ ಪದಾಧಿಕಾರಿಗಳ ಬೆಂಬಲದಿಂದ ಯಶಸ್ವಿಯಾಗಿ ಮಾಡಿದರು.
ಭವಿಷ್ಯದ ಆಶಾಕಿರಣ
ಶ್ರೀ ನಿಂಗಪ್ಪ ಬಿ. ಪ್ರಬುದ್ಧಕರ್ ಇವರ ಜೀವನವು ಶೋಷಿತರ ಧ್ವನಿಯಾಗುವ, ತತ್ವ ಸಿದ್ಧಾಂತಗಳ ಬದ್ಧತೆಯ ಮಹಾ ಪಯಣವಾಗಿದೆ. ಬಡತನದ ಹಿನ್ನೆಲೆಯಿಂದ ಬಂದು, ಹಸಿವು ಮತ್ತು ನೋವನ್ನು ಹತ್ತಿರದಿಂದ ಕಂಡ ಇವರು, ಪ್ರಸ್ತುತ ಕಮಲಾಪುರ ಹಾಗೂ ಕಲಬುರಗಿ ಗ್ರಾಮೀಣ ಕ್ಷೇತ್ರದ ಭವಿಷ್ಯದ ಭರವಸೆಯ ನಾಯಕರಾಗಿದ್ದಾರೆ. ಸದಾ ಸಮಾಜ ಪರಿವರ್ತನೆಯ ಕನಸು ಕಾಣುವ, ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಇವರು ಮುಂಬರುವ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಉನ್ನತ ಜವಾಬ್ದಾರಿಯನ್ನು ವಹಿಸಿಕೊಂಡು ಜನಸೇವೆ ಮಾಡಲು ಸಂಪೂರ್ಣವಾಗಿ ಸಜ್ಜಾಗಿದ್ದಾರೆ. ಇವರ ಸಾಮಾಜಿಕ ಮತ್ತು ರಾಜಕೀಯ ಪಯಣ ಯಶಸ್ವಿಯಾಗಲಿ ಎಂಬುದು ಕಲ್ಯಾಣ ಕರ್ನಾಟಕದ ಸಾರ್ವಜನಿಕರ ಆಶಯವಾಗಿದೆ. ಇವರ ನಾಯಕತ್ವದಲ್ಲಿ ಅನೇಕ ಯುವಕರು ಸಮಾಜ ಪರಿವರ್ತನೆ ಕೆಲಸ, ಸಮ ಸಮಾಜ ನಿರ್ಮಾಣದ ಕೆಲಸಕ್ಕಾಗಿ ಹಗಲು ರಾತ್ರಿ ದುಡಿಯುತ್ತಿದ್ದಾರೆ. ಸಾವಿರಾರು ಜನರು ಪ್ರಬುದ್ಧಕರ ರವರು ಅಧಿಕಾರದ ಗದ್ದುಗೆ ಮೇಲೆ ಕುಳಿತುಕೊಳ್ಳುವುದನ್ನು ನೋಡುವ ತವಕದಲ್ಲಿ ಇದ್ದಾರೆ. ಮುಂಬರುವ ದಿನಗಳಲ್ಲಿ ಅವರ ಜೀವನ ಚರಿತ್ರೆಯು ಸಂಪೂರ್ಣ ಒಂದು ಪುಸ್ತಕ ರೂಪದಲ್ಲಿ ಹೊರ ತರುವ ಪ್ರಯತ್ನ ನಡೆಯುತ್ತಿದ್ದು ಏನಾಗುತ್ತೆ ಕಾದು ನೋಡುತ್ತೇವೆ.
ಲೇಖಕರು : ನಾಗೇಶ (ಚಾಣುಕ್ಯ )ಭೂಪತಿ
ಸಂಯೋಜಕರು ಸಾಮಾಜಿಕ ಜಾಲತಾಣ ಕಾಂಗ್ರೆಸ್ ಪಕ್ಷ ಬ್ಲಾಕ್ ಸಮಿತಿ ಕಮಲಾಪುರ. ಕಲಬುರಗಿ ಜಿಲ್ಲೆ.
ಮತ್ತು
ಜಿ. ಎಲ್. ನಾಗೇಶ ಗಾಯಕವಾಡ
ಯುವ ಸಾಹಿತಿಗಳು ಬೀದರ್.




















