
ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯನ್ನು ಕೊರಟಗೆರೆ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಒಕ್ಕಲಿಗರ ಸಂಘದ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಸಾದರ ಸಮುದಾಯ ಭವನದಲ್ಲಿ ಶನಿವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಕಾಮರಾಜು, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ರಂಗರಸಯ್ಯ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪಿ.ಎನ್. ಕೃಷ್ಣಮೂರ್ತಿ ಸೇರಿದಂತೆ ಹಲವು ಗಣ್ಯರು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್ ಹಾಗೂ ತಾಲ್ಲೂಕು ದಂಡಾಧಿಕಾರಿ ಮಂಜುನಾಥ್ ಕೆ.ಎಂ., ಕೆಂಪೇಗೌಡರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ. ಎಲ್ಲಾ ಜಾತಿ-ಧರ್ಮದ ಜನರನ್ನು ಒಗ್ಗೂಡಿಸಿ ಕೆರೆ, ಕಟ್ಟೆ, ದೇವಾಲಯ ಹಾಗೂ ಮಾರುಕಟ್ಟೆಗಳನ್ನು ನಿರ್ಮಿಸುವ ಮೂಲಕ ಬೆಂಗಳೂರಿಗೆ ಭದ್ರ ಅಡಿಪಾಯ ಹಾಕಿದ ದೂರದೃಷ್ಟಿಯ ಆಡಳಿತಗಾರ ಎಂದು ಬಣ್ಣಿಸಿದರು. ಯುವಜನತೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ವೇಳೆ ಒಕ್ಕಲಿಗ ಸಮುದಾಯ ಭವನ ನಿರ್ಮಾಣಕ್ಕೆ ಉದ್ಯಮಿಗಳಿಂದ ಒಟ್ಟು 1 ಕೋಟಿ 1 ಲಕ್ಷ ರೂಪಾಯಿ ನೆರವಿನ ಘೋಷಣೆ ಗಮನ ಸೆಳೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಂಎನ್‌ಜೆ ಗ್ರೂಪ್‌ನ ಸಂಸ್ಥಾಪಕ ಎಂ.ಎನ್.ಜೆ. ಮಂಜುನಾಥ್, ಕೆಂಪೇಗೌಡರ ವ್ಯಾಪಾರ ಹಾಗೂ ಅಭಿವೃದ್ಧಿ ದೃಷ್ಟಿಕೋನವೇ ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೊರಟಗೆರೆಯಲ್ಲಿ ಒಕ್ಕಲಿಗ ಸಮುದಾಯ ಭವನ ನಿರ್ಮಾಣಕ್ಕೆ ತಮ್ಮ ವತಿಯಿಂದ 50 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದರು.
ಕೊರಟಗೆರೆ ತಾಲ್ಲೂಕಿನ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪಿ.ಎನ್.ಕೆ ಟೌನ್‌ಶಿಪ್ ಮಾಲೀಕರಾದ ಪಿ.ಎನ್. ಕೃಷ್ಣಮೂರ್ತಿಯವರು , ಸಮುದಾಯ ಭವನ ನಿರ್ಮಾಣಕ್ಕೆ 51 ಲಕ್ಷ ರೂಪಾಯಿ ಸಹಾಯಧನ ನೀಡುವುದಾಗಿ ಘೋಷಿಸಿ.ನಮ್ಮ ಸಮುದಾಯದ ಜೊತೆ ಇತರ ಸಮುದಾಯಗಳಿಗೂ ಸಮುದಾಯ ಭವನ ನಿರ್ಮಾಣ ಮಾಡಲು ನಾನು ಸಹಾಯ ಮಾಡುತ್ತೇನೆ. ನಾಡಪ್ರಭು ಕೆಂಪೇಗೌಡರ ಪರಿಸರ ಕಾಳಜಿ,ಸಾಂಸ್ಕೃತಿಕ ಬೆಳವಣಿಗೆ,ಗುಡಿ ಗೋಪುರಗಳು,ಭವ್ಯ ದೇವಾಲಯಗಳನ್ನು ನಿರ್ಮಿಸಿ ಕಲೆ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಕಥೆಗೆ ಅವರು ಸಮಾನ ಆದ್ಯತೆ ನೀಡಿದ್ದರು. ಅಂದಿನ ಕಾಲಕ್ಕೆ ಅವರ ಆಲೋಚನೆ ತುಂಬಾ ವಿಸ್ತಾರವಾಗಿತ್ತು. ಜನರಿಗೆ ನೀರಿನ ಕೊರತೆಯಾಗದಂತೆ ಮಳೆಯ ನೀರನ್ನು ಸಂಗ್ರಹಿಸಲು ಅವರು ರೂಪಿಸಿದ ಕೆರೆಗಳ ಸಾಲು ಅತ್ಯಾಧಿನಿಕತೆಯಿಂದ ಕೂಡಿತ್ತು. ಅದು ಕೆಂಪೇಗೌಡರ ರೈತಪರ ಕಾಳಜಿ ಪರಿಸರ ಸಂರಕ್ಷಣೆ , ಬೆಂಗಳೂರು ನಗರದ ಬೆಳವಣಿಗೆಗೆ ಮಾದರಿಯ ದಿಕ್ಸೂಚಿಯಾಗಿತ್ತು ಎಂದು ಹೇಳಿದರು. ನಮ್ಮ ಕ್ಷೇತ್ರದ, ಯುವಕರು, ವಿದ್ಯಾರ್ಥಿಗಳು, ಶಾಲಾ ಮಕ್ಕಳಿಗೆ, ದೇವಸ್ಥಾನಗಳಿಗೆ ನಮ್ಮ ತಾಲೂಕಿನ ಅಭಿವೃದ್ಧಿಗೆ ಯಾವಾಗಲೂ ಜನರ ಜೊತೆ ಇರುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರು ಮಾತನಾಡಿ, ಎಂ.ಎನ್.ಜೆ. ಮಂಜುನಾಥ್ ಹಾಗೂ ಪಿ.ಎನ್. ಕೃಷ್ಣಮೂರ್ತಿ ಅವರಂತಹ ಉದಾರ ಮನಸ್ಸಿನ ದಾನಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ.
ಸಮುದಾಯ ಭವನ ನಿರ್ಮಾಣ ಕಾರ್ಯಕ್ಕೆ ಇನ್ನಷ್ಟು ದಾನಿಗಳು ಮುಂದೆ ಬಂದು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆಯ ವೇದಿಕೆಯಲ್ಲೇ ಒಕ್ಕಲಿಗ ಸಮುದಾಯ ಭವನ ನಿರ್ಮಾಣಕ್ಕೆ ಒಟ್ಟು 1 ಕೋಟಿ 1 ಲಕ್ಷ ರೂಪಾಯಿ ನೆರವಿನ ಘೋಷಣೆ ನಡೆದಿರುವುದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಪರಿಣಮಿಸಿತು.
ಈ ಘೋಷಣೆಗೆ ಸಾರ್ವಜನಿಕರು ಹಾಗೂ ಸಮುದಾಯದ ಮುಖಂಡರು ಹರ್ಷ ವ್ಯಕ್ತಪಡಿಸಿದರು.
ವರದಿ. ಪ್ರಸನ್ನ ಕುಮಾರ್. ಎಸ್. ಕೊರಟಗೆರೆ




















