ಮಧುಗಿರಿ: ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ ‘ಜಲ ಜೀವನ್ ಮಿಷನ್’ (JJM) ಯೋಜನೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸಹಕಾರ ಸಚಿವರು ಹಾಗೂ ಮಧುಗಿರಿ ಕ್ಷೇತ್ರದ ಶಾಸಕರಾದ ಕೆ.ಎನ್. ರಾಜಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಜಾರಿಗೆ ತರಲಾದ ಈ ಯೋಜನೆಯು ಕ್ಷೇತ್ರದಲ್ಲಿ ಜನರಿಗೆ ತಲುಪುವಲ್ಲಿ ವಿಫಲವಾಗಿದ್ದು, ಕಾಮಗಾರಿಗಳಲ್ಲಿ ತೀವ್ರ ಲೋಪದೋಷಗಳು ಕಂಡುಬಂದಿವೆ ಎಂದು ಅವರು ಹೇಳಿದ್ದಾರೆ. ಜಿಲ್ಲೆಯಲ್ಲಿ 1325 ಹಳ್ಳಿಗಳಲ್ಲಿ ಕಾಮಗಾರಿಗಳನ್ನು ಕಾರ್ಯರೂಪಕ್ಕೆ ತಂದಿದ್ದರೂ, 412 ಹಳ್ಳಿಗಳಲ್ಲಿ ಇನ್ನು ಕಾಮಗಾರಿ ಪ್ರಗತಿಯಲ್ಲಿದೆ ಅಥವಾ ಇನ್ನು ಕಾಮಗಾರಿಯನ್ನು ಪ್ರಾರಂಭಿಸುವುದಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಜಲ ಜೀವನ್ ಮಿಷನ್ ಅಡಿಯಲ್ಲಿ ನಡೆಸಲಾದ ಪೈಪ್‌ಲೈನ್ ಮತ್ತು ಟ್ಯಾಂಕ್ ನಿರ್ಮಾಣ ಕಾಮಗಾರಿಗಳು ತೀವ್ರ ಕಳಪೆ ಮಟ್ಟದಿಂದ ಕೂಡಿವೆ.
ಯೋಜನೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದ್ದರೂ, ಕ್ಷೇತ್ರದ ಅನೇಕ ಗ್ರಾಮಗಳಲ್ಲಿ ಇಂದಿಗೂ ಮನೆಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಸಿಗುತ್ತಿಲ್ಲ.
ಅಧಿಕಾರಿಗಳ ನಿರ್ಲಕ್ಷ್ಯ: ಯೋಜನೆಯ ಅನುಷ್ಠಾನದಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯವೇ ಈ ವೈಫಲ್ಯಕ್ಕೆ ಮುಖ್ಯ ಕಾರಣ.
ತನಿಖೆಗೆ ಆಗ್ರಹ: ಯೋಜನೆಯಲ್ಲಿ ನಡೆದಿರುವ ಅಕ್ರಮ ಹಾಗೂ ಕಳಪೆ ಕಾಮಗಾರಿಯ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.
ಕ್ಷೇತ್ರದ ಜನರಿಗೆ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮತ್ತು ಯೋಜನೆ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಹಾಗೂತಾಲೂಕಿನಲ್ಲಿ ಕುಡಿಯುವ ನೀರು ಸರಬರಾಜು ಮತ್ತು ಫಿಲ್ಟರ್ ವಾಟರ್ ಪ್ಲಾಂಟ್‌ಗಳ ಕಳಪೆ ನಿರ್ವಹಣೆ ಹಾಗೂ ಸರ್ಕಾರದ ಹಣ ಪೋಲಾಗುತ್ತಿರುವ ಬಗ್ಗೆ ಶಾಸಕ ಹಾಗೂ ಸಚಿವ ಕೆ.ಎನ್. ರಾಜಣ್ಣ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಫಿಲ್ಟರ್ ವಾಟರ್ ಘಟಕಗಳ ನಿರ್ವಹಣೆಗಾಗಿ (Maintenance) ‘ಜಲ ಸಿರಿ’ ಸಂಸ್ಥೆಗೆ ತಿಂಗಳಿಗೆ ಸುಮಾರು 40 ಲಕ್ಷ ರೂಪಾಯಿ ಮೈಂಟೆನನ್ಸ್ ಚಾರ್ಜ್ ನೀಡಲಾಗುತ್ತಿದೆ. ಆದರೆ ಗ್ರಾಮಗಳಲ್ಲಿ ಸಮರ್ಪಕವಾಗಿ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ, ಕಾಮಗಾರಿಗಳು ಮತ್ತು ನಿರ್ವಹಣೆ ಸಂಪೂರ್ಣವಾಗಿ ಹಳಿ ತಪ್ಪಿದೆ ಎಂದು ಸಭೆಯಲ್ಲಿದ್ದ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕರು ಕಟುವಾಗಿ ತಿಳಿ ಹೇಳಿದರು.
ಸಚಿವರ ತೀವ್ರ ಗರಂ ಹಾಗೂ ಹರಿಹಾಯ್ದ ಪ್ರಸಂಗದ ಬೆನ್ನಲ್ಲೇ ತಕ್ಷಣವೇ ಸ್ಪಂದಿಸಿದ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ರವರು, “ಜಲ ಸಿರಿ ಸಂಸ್ಥೆಗೆ ಪಾವತಿಯಾಗುತ್ತಿರುವ ಹಣ ಮತ್ತು ಕೈಗೊಂಡಿರುವ ನಿರ್ವಹಣಾ ಕಾಮಗಾರಿಗಳ ಕುರಿತು ನಾಳೆಯೇ ಅಧಿಕೃತ ಆದೇಶ ಹೊರಡಿಸಿ ತಕ್ಷಣವೇ ಆಡಿಟ್ (Audit) ಮಾಡಿಸಲಾಗುವುದು” ಎಂದು ಸಭೆಗೆ ಭರವಸೆ ನೀಡಿದರು.
ಸಭೆಯಲ್ಲಿ ಉಪಮುಖ್ಯಮಂತ್ರಿಗಳಾದ ಡಾಕ್ಟರ್ ಜಿ ಪರಮೇಶ್ವರ್ ರವರು ಪಾವಗಡ ಕ್ಷೇತ್ರದ ಶಾಸಕರಾದ ಎಚ್ ವಿ ವೆಂಕಟೇಶ್ ಹಾಗೂ ಜಿಲ್ಲಾಮಟ್ಟದ ಮಧುಗಿರಿ ಉಪ ವಿಭಾಗದ ಎಲ್ಲಾ ಅಧಿಕಾರಿಗಳು ಹಾಗೂ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ವರದಿ:ರಂಗರಾಜು ಎಂ ಗರಣಿ



















