
“ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬ ಗಾದೆಮಾತಿಗೆ ಅನ್ವರ್ಥನಾಮದಂತಿರುವ 8 ವರ್ಷದ ಬಾಲಪ್ರತಿಭೆ ತಾನೀಶ್.ಎನ್, ಇಂದು ಇಡೀ ನಾಡೇ ಹೆಮ್ಮೆಪಡುವಂತಹ ಅಸಾಧಾರಣ ಬಹುಮುಖ ಸಾಧಕನಾಗಿ ಹೊರಹೊಮ್ಮಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಲಕ್ಕೂರು ಗ್ರಾಮದವರಾದ ತಾನೀಶ್.ಎನ್, ಆಲಂಬಾಡಿಯ ಕ್ರೈಸ್ಟ್ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ವ್ಯಾಸಂಗ ಮಾಡುತ್ತಿದ್ದು, ಸಣ್ಣ ವಯಸ್ಸಿನಲ್ಲೇ ಶಿಕ್ಷಣ, ಸಾಹಿತ್ಯ, ಕಲೆ, ಸಂಗೀತ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮಕ್ಕಳ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ, ಈ ಬಾಲ ಸಾಧಕನ ಅಪರೂಪದ ಪ್ರತಿಭೆ ಮತ್ತು ಸಾಧನೆಗಳ ಕುರಿತ ಒಂದು ಕಿರುನೋಟ ಇಲ್ಲಿದೆ.
ಅರಳಿದ ಬಾಲಕವಿ ಹಾಗೂ ಸಾಹಿತ್ಯದ ಒಲವು :
ಮಕ್ಕಳ ಆಟಪಾಠಗಳ ವಯಸ್ಸಿನಲ್ಲೇ ಲೇಖನಿ ಹಿಡಿದ ತಾನೀಶ್, ತಮ್ಮ ಮುಗ್ಧ ಮನಸ್ಸಿನ ಭಾವನೆಗಳಿಗೆ ಅಕ್ಷರ ರೂಪ ನೀಡಿ ‘ಮಿನುಗು ತಾರೆ’ ಎಂಬ ಕವನ ಸಂಕಲನವನ್ನು ಪ್ರಕಟಿಸುವ ಮೂಲಕ ‘ಬಾಲಕವಿ’ಯಾಗಿ ನಾಡಿನ ಗಮನ ಸೆಳೆದಿದ್ದಾರೆ. ಇದು ಕರ್ನಾಟಕ ರಾಜ್ಯದಲ್ಲಿಯೇ ಅತಿ ಕಿರಿಯ ವಯಸ್ಸಿನ ಬಾಲಕ ಪುಸ್ತಕ ಬರೆದಿರುವುದು ಇತಿಹಾಸವಾಗಿದೆ. ಇವರ ಕವಿತೆಗಳಿಗೆ ಖ್ಯಾತ ಹಾಸ್ಯ ಸಾಹಿತಿ ಶ್ರೀ ಎಂ.ಎಸ್. ನರಸಿಂಹಮೂರ್ತಿ, ಕುವೆಂಪುರವರ ಅಳಿಯ ಡಾ.ಚಿದಾನಂದ ಗೌಡ, ನಿವೃತ್ತ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್, ಕರವೇ ರಾಜ್ಯಾಧ್ಯಕ್ಷ ಹೆಚ್.ಶಿವರಾಮೇಗೌಡ, ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರಂತಹ ದಿಗ್ಗಜರ ಮೆಚ್ಚುಗೆ ಹಾಗೂ ಮಾರ್ಗದರ್ಶನವೂ ದೊರೆತಿದೆ. ಪ್ರಕೃತಿ, ದೇಶಭಕ್ತಿ ಮತ್ತು ಮಕ್ಕಳ ಜಗತ್ತಿನ ಕುರಿತ ಇವರ 100 ಚುಟುಕುಗಳು ಓದುಗರ ಮನಸೂರೆಗೊಳ್ಳುತ್ತವೆ.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಇತಿಹಾಸದಲ್ಲೇ ಅಪರೂಪದ ಮತ್ತು ಐತಿಹಾಸಿಕ ಕ್ಷಣವೊಂದು ದಾಖಲಾಗಿದೆ. ದಸರಾ ಪ್ರಯುಕ್ತ ಆಯೋಜಿಸಲಾಗಿದ್ದ ‘ಚಿಗುರು ಕವಿಗೋಷ್ಠಿ’ಯಲ್ಲಿ ಕೇವಲ ಎಂಟು ವರ್ಷದ ಬಾಲಪ್ರತಿಭೆ, ಬಾಲಕವಿ ತಾನೀಶ್.ಎನ್ ಅವರು ವಿಶೇಷ ಆಹ್ವಾನಿತ ಅತಿಥಿಯಾಗಿ ಭಾಗವಹಿಸಿ ಕವಿತೆ ವಾಚಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
20 ವಿಶ್ವದಾಖಲೆಗಳ ಸರದಾರ ಹಾಗೂ ಹೊಯ್ಸಳ ಪ್ರಶಸ್ತಿಯ ಗರಿ :
ತಾನೀಶ್ ಅವರ ಸಾಧನೆಯ ಹಾದಿಯಲ್ಲಿ ಬರೋಬ್ಬರಿ 20 ವಿಶ್ವದಾಖಲೆಗಳು ಸೇರಿಕೊಂಡಿವೆ. ತಮ್ಮ ಅಸಾಧಾರಣ ಜ್ಞಾಪಕ ಶಕ್ತಿ, ವೇಗದ ಬರವಣಿಗೆ ಮತ್ತು ವಿಶಿಷ್ಟ ಕೌಶಲ್ಯಗಳ ಮೂಲಕ ಹಲವು ಪ್ರತಿಷ್ಠಿತ ದಾಖಲೆಗಳ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಿದ್ದಾರೆ. ಏಷ್ಯನ್ ಬುಕ್ ಆಫ್ ವರ್ಡ್ಡ್ ರೆಕಾರ್ಡ್, ಇಂಡಿಯನ್ ಬುಕ್ ಆಫ್ ವರ್ಡ್ಡ್ ರೆಕಾರ್ಡ್, ವಿಲ್ ಮೆಡಲ್ ಬುಕ್ ಆಫ್ ರೆಕಾರ್ಡ್, ಕಿಡ್ಸ್ ವರ್ಡ್ ರೆಕಾರ್ಡ್, ಇಂಟರ್ ನ್ಯಾಷನಲ್ ಬುಕ್ ಆಫ್ ವರ್ಡ್ಡ್ ರೆಕಾರ್ಡ್, ರಬಾ ಬುಕ್ ಆಫ್ ವರ್ಡ್ಡ್ ರೆಕಾರ್ಡ್, ಇವರ ಈ ಅಪ್ರತಿಮ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು ಜಿಲ್ಲಾ ಮಟ್ಟದಲ್ಲಿ ಮಕ್ಕಳಿಗೆ ನೀಡುವ ಅತ್ಯುನ್ನತ ಗೌರವವಾದ ಪ್ರತಿಷ್ಠಿತ ‘ಹೊಯ್ಸಳ ಪ್ರಶಸ್ತಿ’ ನೀಡಿ ಸನ್ಮಾನಿಸಿದೆ.
ಕಲೆ, ಸಂಗೀತ ಮತ್ತು ಸಮರ ಕಲೆಗಳ ಸಂಗಮ :
ತಾನೀಶ್ ಕೇವಲ ಪಠ್ಯ ಮತ್ತು ಸಾಹಿತ್ಯಕ್ಕೆ ಸೀಮಿತವಾಗದೆ, ಕಲಾ ಲೋಕದಲ್ಲೂ ಅಪಾರ ಸಾಧನೆ ಮಾಡಿದ್ದಾರೆ.
ನೃತ್ಯ ಮತ್ತು ಸಂಗೀತ:
ಶಾಸ್ತ್ರೀಯ ಭರತನಾಟ್ಯದಲ್ಲಿ ತಾನೀಶ್.ಎನ್ ಇದುವರೆಗೂ 100 ಕ್ಕೂ ಅಧಿಕ ವೇದಿಕೆಗಳಲ್ಲಿ ನೃತ್ಯ ಮಾಡಿದ್ದಾನೆ, ತಂಜಾವೂರು, ಧರ್ಮಸ್ಥಳ, ಮಲೇಷ್ಯಾ, ಉಡುಪಿ, ತಿರುವಣ್ಣಾಮಲೈ, ಹಂಪಿ, ಇತರೆ ಹಾಗೂ ವೆಸ್ಟ್ರನ್ ಡ್ಯಾನ್ಸ್ ಎರಡರಲ್ಲೂ ಸೈ ಎನಿಸಿಕೊಂಡಿರುವ ಇವರು, ವಯಲೀನ್ ಮತ್ತು ಕೀಬೋರ್ಡ್ ನುಡಿಸುವುದರಲ್ಲೂ ಪರಿಣತಿ ಹೊಂದಿದ್ದಾರೆ.
ಕರಾಟೆ ಮತ್ತು ಅಬಾಕಸ್: ಆತ್ಮರಕ್ಷಣಾ ಕಲೆಯಾದ ಕರಾಟೆಯಲ್ಲೂ ವಿಶ್ವದಾಖಲೆ ನಿರ್ಮಿಸಿದ್ದು, ಅಬಾಕಸ್ ಮೂಲಕ ಗಣಿತದ ಕ್ಲಿಷ್ಟಕರ ಲೆಕ್ಕಗಳನ್ನು ಕ್ಷಣಾರ್ಧದಲ್ಲಿ ಬಿಡಿಸುವ ಚಾಕಚಕ್ಯತೆ ಹೊಂದಿದ್ದಾರೆ.
ಆಧ್ಯಾತ್ಮ ಮತ್ತು ಶಿಕ್ಷಣ: ಎಳೆಯ ವಯಸ್ಸಿನಲ್ಲೇ ಭಗವದ್ಗೀತೆಯ ಶ್ಲೋಕಗಳನ್ನು ಕಂಠಪಾಠ ಮಾಡಿ ಪಠಿಸುವ ಇವರು ಪರೀಕ್ಷೆಯಲ್ಲಿ 99 ಅಂಕ ಪಡೆದಿದ್ದಾರೆ. ಶಾಲೆಯ ಶೈಕ್ಷಣಿಕ ಚಟುವಟಿಕೆಗಳಲ್ಲೂ ಸದಾ ಮುಂಚೂಣಿಯಲ್ಲಿದ್ದಾರೆ. ಸುಮಾರು ವರ್ಷಗಳಿಂದ ತಾನು ಓದುತ್ತಿರುವ ಶಾಲೆಯಲ್ಲಿ ನಿರಂತರವಾಗಿ ಸ್ಮಾರ್ಟ್ ಸ್ಟೂಡೆಂಟ್ ಪ್ರಶಸ್ತಿ ಸಿಕ್ಕಿದೆ.
ಪ್ರಶಸ್ತಿಗಳು:
ಜನತಾ ಬಾಲ ಪ್ರತಿಭೆ, ಕ್ರೇಜಿ ಟ್ಯಾಲೆಂಟ್, ಹೊಯ್ಸಳ, ಕಲಾಶ್ರೀ, ಬಾಲಾಶ್ರೀ, ಸುದ್ದಿ ವರ್ಷದ ಕನ್ನಡಿಗ, ಗ್ರ್ಯಾಂಡ್ ಮಾಸ್ಟರ್, ಕಲಾ ಜ್ಯೋತಿ, ನಾಟ್ಯ ಜ್ಯೋತಿ, ನೃತ್ಯ ಜ್ಯೋತಿ, ಬಾಲಕೇಸರಿ ಸೇರಿದಂತೆ ಇತರೆ ಪ್ರಶಸ್ತಿಗಳು.
ಸಾಧನೆಯ ಹಿಂದಿನ ಶಕ್ತಿ:
ತಾನೀಶ್.ಎನ್ ಅವರ ಈ ಬಹುಮುಖ ಪ್ರತಿಭೆಯ ಹಿಂದೆ ಪೋಷಕರ ನಿರಂತರ ಪ್ರೋತ್ಸಾಹವಿದೆ. ಕನ್ನಡ ಉಪನ್ಯಾಸಕರು, ಪತ್ರಕರ್ತರು ಹಾಗೂ ಯುವಕವಿಗಳಾದ ತಂದೆ ಲಕ್ಕೂರು ಎಂ. ನಾಗರಾಜ್ ಅವರ ಸಾಹಿತ್ಯಿಕ ಪರಿಸರ ಮತ್ತು ಭರತನಾಟ್ಯ ಶಿಕ್ಷಕಿ ಹಾಗೂ ಶ್ವೇತಾಂಜಲಿ ಭರತನಾಟ್ಯ ಶಾಲೆಯ ಸಂಸ್ಥಾಪಕ ಅಧ್ಯಕ್ಷೆಯಾದ ತಾಯಿ ಶ್ರೀಮತಿ ಶ್ವೇತಾ ನಾಗರಾಜ್ ಅವರ ಕಲಾ ತರಬೇತಿ ತಾನೀಶ್ ಅವರಿಗೆ ಭದ್ರ ಬುನಾದಿಯಾಗಿದೆ. ಜೊತೆಗೆ ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕರ ಮಾರ್ಗದರ್ಶನ ಇವರ ಪ್ರತಿಭೆಗೆ ಮತ್ತಷ್ಟು ಮೆರುಗು ನೀಡಿದೆ.
ಮೊಬೈಲ್ ಮತ್ತು ಟಿವಿ ಲೋಕದಲ್ಲಿ ಮುಳುಗಿರುವ ಇಂದಿನ ಮಕ್ಕಳ ನಡುವೆ, ತಾನೀಶ್.ಎನ್ ತಮ್ಮ ಶಿಸ್ತು, ಏಕಾಗ್ರತೆ ಮತ್ತು ಸೃಜನಶೀಲ ಚಟುವಟಿಕೆಗಳ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಈ ಮಕ್ಕಳ ದಿನಾಚರಣೆಯಂದು ಬಾಲಸಾಧಕ ತಾನೀಶ್ ಅವರಿಗೆ ಶುಭಾಶಯಗಳನ್ನು ಕೋರುತ್ತಾ, ಇವರ ಸಾಧನೆಯ ಪಯಣ ಇನ್ನಷ್ಟು ಎತ್ತರಕ್ಕೆ ಸಾಗಲಿ ಎಂದು ಹಾರೈಸೋಣ.




















