ಕಂಪ್ಲಿ: ‘ಚಿತ್ರದುರ್ಗದ ಕೋಟೆಯ ರಕ್ಷಣೆಗಾಗಿ ಕೇವಲ ಒಂದು ಒನಕೆಯಿಂದ ಶತ್ರು ಸೈನ್ಯವನ್ನು ಹಿಮ್ಮೆಟ್ಟಿಸಿ, ನಾಡಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ವೀರವನಿತೆ ಒನಕೆ ಓಬವ್ವ ಅವರ ಶೌರ್ಯ, ಸಾಹಸ ಮತ್ತು ದೇಶಪ್ರೇಮ ಇಂದಿನ ಯುವಪೀಳಿಗೆಗೆ ಸದಾ ಸ್ಫೂರ್ತಿಯಾಗಿದೆ’ ಎಂದು ತಹಶೀಲ್ದಾರ್ ಕಚೇರಿ ಶಿರಸ್ತೇದಾರ ಜಿ. ಪಂಪಾಪತಿ ಹೇಳಿದರು.
ಪಟ್ಟಣದ ತಾಲ್ಲೂಕು ಆಡಳಿತ ಕಚೇರಿಯಲ್ಲಿ ಬುಧವಾರ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಪೂಜೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.
‘ಸಮಯಪ್ರಜ್ಞೆ ಮತ್ತು ಅಪ್ರತಿಮ ಧೈರ್ಯವಿದ್ದರೆ ಎಂತಹ ದೊಡ್ಡ ಕಂಟಕವನ್ನೂ ಎದುರಿಸಬಹುದು ಎಂಬುದನ್ನು ಓಬವ್ವ ತೋರಿಸಿಕೊಟ್ಟಿದ್ದಾರೆ. ಇಂತಹ ಮಹನೀಯರ ಜಯಂತಿ ಆಚರಣೆಗಳು ಕೇವಲ ಆಚರಣೆಗೆ ಸೀಮಿತವಾಗದೆ, ಅವರ ಆದರ್ಶ, ಸ್ವಾಭಿಮಾನ ಹಾಗೂ ರಾಷ್ಟ್ರಭಕ್ತಿಯ ಗುಣಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಹಿಳೆಯರ ಆತ್ಮಸ್ಥೈರ್ಯ ಮತ್ತು ಸ್ವಾವಲಂಬನೆಗೆ ಓಬವ್ವ ಅವರ ಬದುಕು ದೊಡ್ಡ ಮಾದರಿಯಾಗಿದೆ’ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಪಟ್ಟಣದ ಹಿರಿಯರಾದ ಎ.ಸಿ. ದಾನಪ್ಪ, ಲಕ್ಷ್ಮಣ, ಸಿ. ಚನ್ನಪ್ಪ, ಚನ್ನಬಸವರಾಜ ಪಾಲ್ಗೊಂಡಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳಾದ ಶಿರಸ್ತೇದಾರ ಎಸ್ ಡಿ. ರಮೇಶ್, ಕಂದಾಯ ನಿರೀಕ್ಷಕ ಸುರೇಶ್, ಶಿಕ್ಷಣ ಇಲಾಖೆಯ ಟಿ.ಎಂ. ಬಸವರಾಜ್, ನಿಲಯಪಾಲಕ ಕೆ. ವಿರುಪಾಕ್ಷಿ, ಗ್ರಾಮ ಆಡಳಿತ ಅಧಿಕಾರಿ ರೂಪಿಣಿ ಸೇರಿದಂತೆ ತಾಲ್ಲೂಕು ಕಚೇರಿ ಸಿಬ್ಬಂದಿ ಮೌನೇಶ್, ಮಾಲ್ತೇಶ್, ರಾಧಮ್ಮ, ಶಮೀಮ್ ಬೇಗಂ, ಶಿಲ್ಪಾ ಸೇರಿದಂತೆ ಇತರರು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















