ನಗರದ ರಾಘವ ಕಲಾಮಂದಿರದಲ್ಲಿ ನುಡಿ ಹಬ್ಬಕ್ಕೆ ಸಕಲ ಸಿದ್ಧತೆ
ಹಿರಿಯ ಪತ್ರಕರ್ತ ಸಿ.ಜಿ. ಹಂಪಣ್ಣ ಸಮ್ಮೇಳನಾಧ್ಯಕ್ಷರು.
ಬಳ್ಳಾರಿ: ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡಿನ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಜಿಲ್ಲಾ ಘಟಕ ಮತ್ತು ವಿಜಯನಗರ ವತಿಯಿಂದ ‘ಅಖಂಡ ಬಳ್ಳಾರಿ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನ’ವನ್ನು ನವೆಂಬರ್ 14 ಮತ್ತು 15 ರಂದು ನಗರದ ರಾಘವ ಕಲಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಅಖಂಡ ಬಳ್ಳಾರಿ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ತಿಳಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಎರಡು ದಿನಗಳ ಕಾಲ ನಡೆಯಲಿರುವ ಸಮ್ಮೇಳನದಲ್ಲಿ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ, ರಂಗಭೂಮಿ, ಚಿತ್ರಕಲೆ ಸೇರಿದಂತೆ ವಿವಿಧ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ವಿಚಾರಗಳ ಕುರಿತು ಗಂಭೀರ ಚಿಂತನೆ-ಮಂಥನ ನಡೆಯಲಿದೆ. ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ಸಿ.ಜಿ. ಹಂಪಣ್ಣ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ಅಭಿಮಾನಿಗಳು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನುಡಿ ಹಬ್ಬವನ್ನು ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದರು.
ನ. 14ರ ಕಾರ್ಯಕ್ರಮಗಳ ವಿವರ :
ನವೆಂಬರ್ 14ರಂದು ಬೆಳಗ್ಗೆ 7:30ಕ್ಕೆ ಧ್ವಜಾರೋಹಣ ನೆರವೇರಲಿದೆ. ರಾಷ್ಟ್ರಧ್ವಜಾರೋಹಣವನ್ನು ಬಳ್ಳಾರಿ ಮಹಾನಗರ ಪಾಲಿಕೆ ಮಹಾಪೌರರಾದ ಪಿ. ಗಾದೆಪ್ಪ, ನಾಡಧ್ವಜಾರೋಹಣವನ್ನು ಜಿಲ್ಲಾ ಗ್ಯಾರಂಟಿಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಹಾಗೂ ಪರಿಷತ್ ಧ್ವಜಾರೋಹಣವನ್ನು ಡಾ. ನಿಷ್ಠಿ ರುದ್ರಪ್ಪ ನೆರವೇರಿಸಲಿದ್ದಾರೆ. ಉಪ ಮಹಾಪೌರರಾದ ಮುಬೀನಾ ಬಿ., ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಶ್ರೀನಿವಾಸ್ ಮೋತ್ಕರ್ ಸೇರಿದಂತೆ ಪಾಲಿಕೆ ಸದಸ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬೆಳಗ್ಗೆ 10:30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭಕ್ಕೆ ಕೊಟ್ಟೂರು ಬಸಲಿಂಗ ಮಹಾಸ್ವಾಮಿಗಳು, ಕಲ್ಯಾಣ ಸ್ವಾಮಿಗಳು ಹಾಗೂ ಬಳ್ಳಾರಿಯ ಆರ್ಚ್ ಬಿಷಪ್ ಡಿಸೋಜಾ ಸಾನ್ನಿಧ್ಯ ವಹಿಸಲಿದ್ದಾರೆ. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅಧ್ಯಕ್ಷತೆ ವಹಿಸಲಿದ್ದು, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಿ.ವಿ. ಪರಮಶಿವಮೂರ್ತಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ವೆಂಕಟಾಪುರ ಸಮ್ಮೇಳನ ಅಧ್ಯಕ್ಷರಾದ ಡಾ. ಅರವಿಂದ್ ಪಾಟೀಲ್ ಉಪಸ್ಥಿತರಿರಲಿದ್ದು, ಸಮ್ಮೇಳನಾಧ್ಯಕ್ಷ ಸಿ.ಜಿ. ಹಂಪಣ್ಣ ಅವರಿಗೆ ಗೌರವ ಸಲ್ಲಿಸಲಾಗುವುದು.
ಬಳ್ಳಾರಿ ಸಂಸದ ಇ. ತುಕಾರಾಂ ಸ್ಮರಣ ಸಂಚಿಕೆ ಬಿಡಗಡೆ ಮಾಡಲಿದ್ದಾರೆ. ಡಾ. ನಿಷ್ಠಿ ರುದ್ರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್, ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್, ಶಾಸಕರುಗಳಾದ ಬಿ. ನಾಗೇಂದ್ರ, ಜೆ.ಎನ್. ಗಣೇಶ್, ಬಿ.ಎಂ. ನಾಗರಾಜ್, ಅನ್ನಪೂರ್ಣ ತುಕಾರಾಂ, ಎಚ್.ಆರ್. ಗವಿಯಪ್ಪ, ನೇಮರಾಜ್ ನಾಯಕ, ಎಂ.ಪಿ. ಲತಾ ಮಲ್ಲಿಕಾರ್ಜುನ್ ಹಾಗೂ ಎನ್.ಟಿ. ಶ್ರೀನಿವಾಸ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ವಿಶೇಷ ಗೋಷ್ಠಿ :
ಮಧ್ಯಾಹ್ನ 2 ರಿಂದ 3:35 ರವರೆಗೆ ‘ಅಖಂಡ ಬಳ್ಳಾರಿ ಜಿಲ್ಲೆಯ ಮರೆಯಲಾರದ ಮಹಾನುಭಾವರು’ ಎಂಬ ವಿಷಯದ ಕುರಿತು ವಿಶೇಷ ಗೋಷ್ಠಿ ನಡೆಯಲಿದೆ. ಚೋರನೂರು ಟಿ. ಕೊಟ್ರಪ್ಪ ಅಧ್ಯಕ್ಷತೆ ವಹಿಸಲಿದ್ದು, ಡಾ. ಬಿ.ಜಿ. ಕಲಾವತಿ ಆಶಯ ನುಡಿಗಳನ್ನಾಡಲಿದ್ದಾರೆ. ಡಾ. ಅಣ್ಣಾಜಿ ಕೃಷ್ಣಾರೆಡ್ಡಿ (ರಂಗಭೂಮಿ), ಡಾ. ನಾಯಕರ ಹುಲಿಗಪ್ಪ (ಸಾಹಿತ್ಯ) ಹಾಗೂ ಕಾಶಿನಾಥ್ ಕಾಳೆ (ಚಿತ್ರಕಲೆ) ವಿಷಯ ಮಂಡಿಸಲಿದ್ದಾರೆ. ಜೆ.ವೈ. ತಿಪ್ಪಾರೆಡ್ಡಿ, ಸಿದ್ದೇಶ್ ಉಳೂರು ಉಪಸ್ಥಿತರಿರಲಿದ್ದಾರೆ.
ಸಾಧಕರ ಹೆಸರಿನ ವೇದಿಕೆಗಳು:
ಸಮ್ಮೇಳನದ ಅಂಗವಾಗಿ ‘ನಾಟ್ಯ ಕಲಾ ಪ್ರಪೂರ್ಣ ಟಿ. ರಾಘವಾಚಾರ್ಯ ವೇದಿಕೆ’, ‘ಸರ್ವ ದರ್ಶನ ತೀರ್ಥ ವೈ. ನಾಗೇಶ್ ಶಾಸ್ತ್ರಿಗಳ ಶುಭ ಮಂಟಪ’, ‘ಗಮಕ ಕಲಾನಿಧಿ ಡಾ. ಜೋಳದರಾಶಿ ದೊಡ್ಡನಗೌಡ ಮಹಾದ್ವಾರ’ ಹಾಗೂ ‘ಹುತಾತ್ಮ ಪೈಲ್ವಾನ್ ರಂಜಾನ್ ಸಾಬ್ ಮಹಾದ್ವಾರ’ಗಳನ್ನು ನಿರ್ಮಿಸಲಾಗುತ್ತಿದೆ. ‘ವ್ಯಾಕರಣ ತೀರ್ಥ ಚಂದ್ರಶೇಖರ್ ಶಾಸ್ತ್ರಿ’ಗಳ ಹೆಸರಿನಲ್ಲಿ ಪುಸ್ತಕ ಮಳಿಗೆ ಹಾಗೂ ‘ದಿವಂಗತ ಮಂಜುನಾಥ್ ಗೋವಿಂದವಾಡ’ ಅವರ ಹೆಸರಿನಲ್ಲಿ ಚಿತ್ರಕಲೆ ಮಾಳಿಗೆ ಸ್ಥಾಪಿಸಲಾಗುವುದು ಎಂದು ಡಾ. ನಿಷ್ಠಿ ರುದ್ರಪ್ಪ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಅಂದಾಳು ಶಿವಲಿಂಗಪ್ಪ, ಕಪ್ಪಗಲ್ಲು ಚಂದ್ರಶೇಖರ್ ಆಚಾರ್ಯ, ಕೆ. ಷಣ್ಮುಖ, ಕಾಶಿನಾಥ್, ದೊಡ್ಡಬಸಪ್ಪ, ಎಲ್ಲನಗೌಡ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್

















