ಕಾರಟಗಿ: ಸಹಕಾರಿ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ, ಸಂಘಟನಾತ್ಮಕ ಚಟುವಟಿಕೆಗಳ ಮೂಲಕ ಸಹಕಾರಿ ನೌಕರರ ಧ್ವನಿಯಾಗಿ ಹೊರಹೊಮ್ಮಿರುವ ಶ್ರೀ ಅಮರಯ್ಯ ಸ್ವಾಮಿ ಸಾಲಿಮಠ ಅವರ ಸಹಕಾರಿ ಕ್ಷೇತ್ರದ ಸೇವೆಯನ್ನು ಗುರುತಿಸಿ, ರಾಜ್ಯ ಸರ್ಕಾರದ ಪ್ರತಿಷ್ಠಿತ ‘ಸಹಕಾರ ರತ್ನ’ ಪ್ರಶಸ್ತಿಗೆ ಅವರ ಹೆಸರನ್ನು ಪರಿಗಣಿಸಬೇಕೆಂಬ ಆಶಯ ಸಹಕಾರಿ ವಲಯದಲ್ಲಿ ವ್ಯಕ್ತವಾಗಿದೆ.
ಕಳೆದ ಹಲವು ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅಮರಯ್ಯ ಸ್ವಾಮಿ ಸಾಲಿಮಠ ಅವರು ಸಹಕಾರಿ ಸಂಘಗಳ ನೌಕರರ ಹಕ್ಕುಗಳು, ಸಮಸ್ಯೆಗಳು ಹಾಗೂ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಸೌಹಾರ್ದ ಮತ್ತು ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ.), ಕಾರಟಗಿ ಇದರ ಅಧ್ಯಕ್ಷರಾಗಿ ಸಹಕಾರಿ ನೌಕರರನ್ನು ಸಂಘಟಿಸುವುದು, ಅವರಲ್ಲಿ ಒಗ್ಗಟ್ಟು ಮೂಡಿಸುವುದು ಹಾಗೂ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಇವರ ಸಹಕಾರಿ ಸೇವೆಯನ್ನು ಗುರುತಿಸಿ ದಿನಾಂಕ 25-10-2025 ರಂದು ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ನ 25ನೇ ವರ್ಷದ ರಜತ ಮಹೋತ್ಸವ ಸಮಾರಂಭದಲ್ಲಿ ‘ಶ್ರೇಷ್ಠ ಸಹಕಾರಿ’ ಗೌರವ ನೀಡಿ ಅಭಿನಂದಿಸಿರುವುದು ಇವರ ಸೇವೆಗೆ ಸಂದ ಮಹತ್ವದ ಮನ್ನಣೆಯಾಗಿದೆ.
ಇದಲ್ಲದೆ, ಕೇಂದ್ರ ಸಹಕಾರ ಸಚಿವಾಲಯದ ಸ್ಥಾಪನಾ ದಿನಾಚರಣೆ ಹಾಗೂ ಸಹಕಾರ ಕ್ಷೇತ್ರದ ವಿವಿಧ ಕಾರ್ಯಕ್ರಮಗಳ ಅಂಗವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸಿ, ರಕ್ತ ಸಂಗ್ರಹಿಸುವಂತಹ ಸಮಾಜಮುಖಿ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಹಕಾರಿ ಕ್ಷೇತ್ರದ ಸಂಘಟನೆ ಮಾತ್ರವಲ್ಲದೆ ಸಾಮಾಜಿಕ ಸೇವೆಯಲ್ಲಿಯೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಸಹಕಾರಿ ಕ್ಷೇತ್ರದ ನೌಕರರು, ಆಡಳಿತ ಮಂಡಳಿ ಸದಸ್ಯರು, ಮುಖ್ಯ ಕಾರ್ಯನಿರ್ವಾಹಕರು ಹಾಗೂ ಸಹಕಾರಿಗಳ ನಡುವೆ ಉತ್ತಮ ಬಾಂಧವ್ಯ ಮತ್ತು ಸಂಘಟನಾತ್ಮಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಇವರ ಪ್ರಯತ್ನ ಶ್ಲಾಘನೀಯವಾಗಿದೆ.
ಸಹಕಾರಿ ಕ್ಷೇತ್ರದ ಅಭಿವೃದ್ಧಿ, ನೌಕರರ ಕಲ್ಯಾಣ, ಸಂಘಟನಾ ಸಾಮರ್ಥ್ಯ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ, ಶ್ರೀ ಅಮರಯ್ಯ ಸ್ವಾಮಿ ಸಾಲಿಮಠ ಅವರಿಗೆ ರಾಜ್ಯ ಸರ್ಕಾರದ ಪ್ರತಿಷ್ಠಿತ ‘ಸಹಕಾರ ರತ್ನ’ ಪ್ರಶಸ್ತಿಯನ್ನು ನೀಡಲು ಸಂಬಂಧಪಟ್ಟ ಇಲಾಖೆಯ ಸಚಿವರು, ಅಧಿಕಾರಿಗಳು ಹಾಗೂ ಪ್ರಶಸ್ತಿ ಆಯ್ಕೆ ಸಮಿತಿಯವರು ಇವರ ಹೆಸರನ್ನು ಪರಿಗಣಿಸಬೇಕೆಂದು ಸಹಕಾರಿ ವಲಯದ ಪರವಾಗಿ ಆಶಯ ವ್ಯಕ್ತಪಡಿಸಲಾಗಿದೆ.
ಸಹಕಾರಿ ಕ್ಷೇತ್ರದ ಸೇವೆಗೆ ದೊರೆಯುವ ಇಂತಹ ರಾಜ್ಯಮಟ್ಟದ ಗೌರವವು ಇನ್ನಷ್ಟು ಯುವಕರನ್ನು ಸಹಕಾರಿ ಕ್ಷೇತ್ರದತ್ತ ಆಕರ್ಷಿಸುವುದರ ಜೊತೆಗೆ ಸಮಾಜಮುಖಿ ಸೇವೆಗೆ ಪ್ರೇರಣೆಯಾಗಲಿದೆ.

















