ಕಂಪ್ಲಿ : ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿ, ಕೈಗಾರಿಕಾ ಭದ್ರತೆಯ ಬಲವರ್ಧನೆ ಹಾಗೂ ಪೊಲೀಸ್ ಇಲಾಖೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕಲಬುರಗಿ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಹೊಸ ಬೆಟಾಲಿಯನ್ ಸ್ಥಾಪಿಸುವ ಕುರಿತು ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾ ನಿರ್ದೇಶಕರಾದ ಬಿ.ದಯಾನಂದರವರು ರಾಜ್ಯದ ಡಿಜಿ ಮತ್ತು ಐಜಿಪಿ ರವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಇವರ ಮನವಿಯ ಅನುಸಾರ ಸದರಿ ವಿಷಯವನ್ನು ಪರಿಶೀಲಿಸಿ ಮುಂಬರುವ ದಿನಗಳಲ್ಲಿ ಕಲ್ಯಾಣ ಕರ್ನಾಟಕ ವಲಯದ ಸುತ್ತ-ಮುತ್ತಲಿನ ಜಿಲ್ಲೆಗಳಲ್ಲಿನ ವಿವಿಧ ಸೂಕ್ಷ್ಮ ಸ್ಥಾವರಗಳಿಗೆ ಭದ್ರತೆ ಒದಗಿಸಲು ಕಲಬುರಗಿ ಭಾಗದಲ್ಲಿ ಕೆ.ಎಸ್.ಐ.ಎಸ್.ಎಫ್ ಬೆಟಾಲಿಯನ್ ಸೃಜಿಸಲು ಅವಶ್ಯವಿರುತ್ತದೆ ಎಂದು ಐಎಸ್ ಡಿ ಡಿಜಿಪಿ ದಯಾನಂದ್ ರವರು ಪ್ರಸ್ತಾವನೆಯಲ್ಲಿ ತಿಳಿಸಿರುತ್ತಾರೆ.
ರಾಜ್ಯದಲ್ಲಿ ಪ್ರಮುಖ ಸ್ಥಾವರಗಳ ಭದ್ರತೆ, ಸುರಕ್ಷತೆಗಾಗಿ 2011 ರಲ್ಲಿ 1. 2. 3ನೇ ಪಡೆಗಳು 2025 ರಲ್ಲಿ 4ನೇ ಪಡೆ ಕೆ ಎಸ್ ಐ ಎಸ್ ಎಫ್ ಪಡೆಗಳು ಸರ್ಕಾರದ ಆದೇಶದಂತೆ ಸೃಜನೆಗೊಂಡು, ಬೆಂಗಳೂರು,ಶಿವಮೊಗ್ಗ,ಧಾರವಾಡ,ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಪ್ರಸ್ತುತ ಕಲ್ಯಾಣ ಕರ್ನಾಟಕ ಭಾಗವು ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತೆ ಪಡೆಯ 2ನೇ ಬೆಟಾಲಿಯನ್ ಶಿವಮೊಗ್ಗ, 3ನೇ ಬೆಟಾಲಿಯನ್ ಧಾರವಾಡ ವ್ಯಾಪ್ತಿಗೆ ಬರುತ್ತಿರುತ್ತದೆ,
ಸ್ಥಾವರಗಳ ಭದ್ರತೆಯ ಉಸ್ತುವಾರಿಯನ್ನು ಸುಮಾರು 245 ಕಿ.ಮೀ ಅಂತರದಿಂದ 2ನೇ ಪಡೆ, ಕೆಎಸ್‌ಐಎಸ್‌ಎಫ್, ಶಿವಮೊಗ್ಗ ಬೆಟಾಲಿಯನ್ ಮತ್ತು ಸುಮಾರು 350 ಕಿ.ಮೀ. ಅಂತರದಿಂದ 3ನೇ ಪಡೆ, ಕೆಎಸ್‌ಐಎಸ್‌ಎಫ್, ಧಾರವಾಡ ಬೆಟಾಲಿಯನ್ ನಿಂದ ನಿರ್ವಹಿಸಲಾಗುತ್ತಿದ್ದು ಆಡಳಿತಾತ್ಮಕ ನಿಲುವುಗಳು ಮತ್ತು ಅಧಿಕಾರಿ ಸಿಬ್ಬಂದಿಗಳ ಕಾರ್ಯಕ್ಷಮತೆಯ ಕರ್ತವ್ಯಗಳನ್ನು ಹಿರಿಯ ಅಧಿಕಾರಿಗಳು ಪರಿಣಾಮಕಾರಿಯಾಗಿ ಉಸ್ತುವಾರಿ ಮಾಡಲು ತೊಂದರೆ ಉಂಟಾಗುತ್ತಿರುತ್ತದೆ.
ವಿವಿಧ ಹಂತದ ಅಧಿಕಾರಿಗಳು, ಕಮಾಂಡೆಂಟ್, ಸಹಾಯಕ ಕಮಾಂಡೆಂಟ್, ಇನ್ಸ್‌ಪೆಕ್ಟರ್‌ಗಳು, ಪೊಲೀಸ್ ಉಪನಿರೀಕ್ಷಕರು ಹಾಗೂ ಇತರೆ ಪೊಲೀಸ್ ಸಿಬ್ಬಂದಿ ಹುದ್ದೆಗಳು ಸೇರಿ ಇಲಾಖಾ ಪ್ರಸ್ತಾವನೆಯ ಪ್ರಕಾರ, ಹೊಸ ಬೆಟಾಲಿಯನ್‌ಗೆ ಒಟ್ಟು 1,170 ಹುದ್ದೆಗಳ ಸಿಬ್ಬಂದಿ ಬಲವನ್ನು ಪ್ರಸ್ತಾಪಿಸಲಾಗಿದ್ದು ಆರ್ಥಿಕ ಇಲಾಖೆಯ ಪ್ರಸ್ತಾವನೆಯಲ್ಲಿ ಹೊಸ ಬೆಟಾಲಿಯನ್ ಸ್ಥಾಪನೆಗೆ ಅಂದಾಜು ವಾರ್ಷಿಕ ಆವರ್ತಕ ವೆಚ್ಚ ರೂ.81,61,49,772, ಅನಾವರ್ತಕ ವೆಚ್ಚ ರೂ. 19,01,40,000 ಎಂದು ಅಂದಾಜಿಸಲಾಗಿದೆ.
ಕಲ್ಯಾಣ ಕರ್ನಾಟಕಕ್ಕೆ ಆಗುವ ಪ್ರಯೋಜನಗಳು
ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೊಸ KSISF ಬೆಟಾಲಿಯನ್ ಸ್ಥಾಪನೆಯಾದಲ್ಲಿ ಕೈಗಾರಿಕಾ ಭದ್ರತಾ ವ್ಯವಸ್ಥೆಗೆ ಹೆಚ್ಚಿನ ಬಲ ದೊರೆಯುವುದರ ಜೊತೆಗೆ, ಈ ಭಾಗದ ಯುವಜನತೆಗೆ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ವಿಶೇಷವಾಗಿ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಕೈಗಾರಿಕಾ ಹಾಗೂ ಪ್ರಮುಖ ಸಾರ್ವಜನಿಕ ಸಂಸ್ಥೆಗಳ ಭದ್ರತಾ ಅಗತ್ಯಗಳಿಗೆ ಇದು ಪೂರಕವಾಗಬಹುದು.
ಪ್ರಸ್ತುತ ಇಲಾಖೆಯಿಂದ ಸಲ್ಲಿಸಿರುವ ಪ್ರಸ್ತಾವನೆಯಾಗಿದ್ದು, ಸರ್ಕಾರದ ಅನುಮೋದನೆ ಮತ್ತು ಅಂತಿಮ ಅನುಷ್ಠಾನದ ನಂತರವೇ ಬೆಟಾಲಿಯನ್ ಸ್ಥಾಪನೆ ಹಾಗೂ ನೇಮಕಾತಿ ಪ್ರಕ್ರಿಯೆ ಜಾರಿಯಾಗಲಿದೆ.
ವರದಿ : ಜಿಲಾನಸಾಬ್ ಬಡಿಗೇರ್




















