ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಿರುವ ಸಚಿವರಾದ ಡಾ ವಿಜಯಾನಂದ ಕಾಶಪ್ಪನವರ ಹಾಗೂ ನಾಡಿನ ಮಠಾಧೀಶರು.
ಕಂದಗಲ್ಲ : ಇಳಕಲ್ ತಾಲೂಕಿನ ನಂದವಾಡಗಿಯ ಮಹಾಂತೇಶ್ವರ ಸಂಸ್ಥಾನ ಮಠದ ಪುರಾಣ ಮಹಾಮಂಗಲ ಕಾರ್ಯಕ್ರಮ, ಸರ್ವ ಧರ್ಮದ ನೂತನ ರಥೋತ್ಸವ ಲೋಕಾರ್ಪಣೆ, ಶ್ರೀಮಠದ ಮಹಾಂತಲಿಂಗ ಶ್ರೀಗಳ ಪಟ್ಟಾಧಿಕಾರದ ಸುವರ್ಣ ಮಹೋತ್ಸವ ಹಾಗೂ ಬೆಳ್ಳಿ ತುಲಾಭಾರ ಕಾರ್ಯಕ್ರಮದ ಭವ್ಯ ಸಮಾರಂಭ ನಾಡಿನ ಹರ ಗುರು ಚರ ಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
ಶ್ರೀ ಮಹಾಂತಲಿಂಗ ಶಿವಾಚಾರ್ಯರ ಸುವರ್ಣ ಮಹೋತ್ಸವ ಸಮಾರಂಭವನ್ನು
ಸಚಿವರಾದ ಡಾ. ವಿಜಯಾನಂದ ಕಾಶಪ್ಪನವರ ಹಾಗೂ ನಾಡಿನ ಪೂಜ್ಯ ಮಠಾಧೀಶರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಸಮಾರಂಭದಲ್ಲಿ ಮಹಾಂತಲಿಂಗ ಶ್ರೀಗಳ ಕುರಿತ ತಪೋನಿಧಿ ಪುಸ್ತಕವನ್ನು ಪೂಜ್ಯರುಗಳು ಹಾಗೂ ಸಚಿವರು ಬಿಡುಗಡೆಗೊಳಿಸಿದರು. ಹಾಗೂ ಶ್ರೀಮಠದ ಯಾತ್ರಾ ನಿವಾಸವನ್ನು ಸಚಿವರು ವೇದಿಕೆಯ ಮೇಲೆ ಸಾoಕೇತಿಕವಾಗಿ ಉದ್ಘಾಟಿಸಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಚಿವರಾದ ಡಾ. ವಿಜಯಾನಂದ ಕಾಶಪ್ಪನವರ ಪೂಜ್ಯರಾದ ಮಹಾಂತಲಿಂಗ ಶಿವಾಚಾರ್ಯರ ಪಟ್ಟಾಧಿಕಾರದ ಸುವರ್ಣ ಮಹೋತ್ಸವದ ಸಮಾರಂಭದಲ್ಲಿ ಭಾಗಿಯಾಗುತ್ತಿರುವುದು ನನ್ನ ಸೌಭಾಗ್ಯ, ನಾನು ಬಾಲ್ಯದಿಂದಲೂ ಶ್ರೀಮಠದ ಭಕ್ತನಾಗಿ ಬೆಳೆದವನು, ಇಂದು ಮುಂದು ಎಂದೆಂದೂ ನಾನು ಶ್ರೀಮಠದ ಸದ್ಭಕ್ತನೆ, ಶ್ರೀಗಳ ಆಶೀರ್ವಾದವನ್ನು ಪಡೆದು ನಾನು ಇಂದು ಸಚಿವನಾಗಿದ್ದೇನೆ. ಪೂಜ್ಯರು ಮಹಾನ್ ತಪಸ್ವಿಗಳು, ಭಕ್ತರ ಉದ್ದಾರಕ್ಕಾಗಿ ಹಗಲಿರಳು ಶ್ರಮಿಸಿದ ನಮ್ಮ ಭಾಗದ ನಡೆದಾಡುವ ದೇವರು ನಂದವಾಡಗಿ ಮಹಾಂತಲಿಂಗ ಶ್ರೀಗಳು ಎಂದರು.
ಶ್ರೀ ಮಠದ ಷ.ಬ್ರ.ಡಾ ಚನ್ನಬಸವ ಶಿವಾಚಾರ್ಯ ಸ್ವಾಮಿಗಳು ಸಹ ಭಕ್ತರ ಪಾಲಿನ ಆರಾಧ್ಯ ದೇವರಾಗಿದ್ದು ಅವರ ಆಧ್ಯಾತ್ಮಿಕ ಚಿಂತನಾ ಲಹರಿ, ಸಾಮಾಜಿಕ ಕಳಕಳಿ ಅಪಾರ ಈ ಶ್ರೀಗಳನ್ನು ಪಡೆದ ನಾವೇ ಧನ್ಯರು ಎಂದು ಸಚಿವರಾದ ಕಾಶಪ್ಪನವರ ಹೇಳಿದರು.
ಡಾ. ಚನ್ನಬಸವ ಶಿವಾಚಾರ್ಯ ಸ್ವಾಮಿಗಳು ಸಂಪೂರ್ಣ ಕಾರ್ಯಕ್ರಮ ನೇತೃತ್ವ ವಹಿಸಿ ಯಶಸ್ವಿ ಗೊಳಿಸಿ ಆಶೀರ್ವಚನ ನೀಡಿದರು.
ವೇದಿಕೆಯ ಮೇಲಿದ್ದ ನಾಡಿನ ಮಠಾಧೀಶರು ಸೇರಿದಂತೆ ಲಿಂಗಸಗೂರು ಶಾಸಕರಾದ ಮಾನಪ್ಪ ವಜ್ಜಲ, ಮಾಜಿ ಸಚಿವರಾದ ಅಮರೇಗೌಡ ಪಾಟೀಲ್ ಬಯ್ಯಾಪುರ ಹಾಗೂ ಪ್ರಮುಖರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮ ಹಾಗೂ ರಥೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ನಂದವಾಡಗಿ ಸೇರಿದಂತೆ ಸುತ್ತಮುತ್ತಲಿನ ಭಕ್ತರು ಭಾಗವಹಿಸಿದ್ದರು.
ಮನೋಹರ್ ಹಿರೇಮಠ್ ಪ್ರಾರ್ಥನೆ ಸಲ್ಲಿಸಿದರು. ಯೋಗಿರಾಜ್ ಶಾಸ್ತ್ರೀಗಳು ಖಾನಾಪುರ ಪ್ರಾಸ್ತವಿಕ ನುಡಿಗಳನ್ನಾಡಿದರು.
ಸಂಗಣ್ಣ ಗದ್ದಿ ನಿರೂಪಿಸಿದರು.




















