ನಾಡು ಕಂಡ ಹಲವು ದಾಸರಲ್ಲಿ ಕನಕದಾಸರು ಅಚ್ಚಳಿಯದೆ ಉಳಿಯುವ ಧೀಮಂತ ವ್ಯಕ್ತಿತ್ವದ ನಾಯಕರು.
ಕನಕದಾಸರು ಹುಟ್ಟಿದ ಆ ಕಾಲದಲ್ಲಿ ಕೆಳ ಜಾತಿಯವರಿಗೆ ದೇವಸ್ಥಾನಕ್ಕೆ ಹೋಗಲು, ಓದಲು ಅವಕಾಶ ಇರಲಿಲ್ಲ. ಅದನ್ನೆಲ್ಲಾ ಎದುರಿಸಿ, ದೇವರ ಮುಂದೆ ಎಲ್ಲರೂ ಸಮಾನರು “ಕುಲ ಕುಲವೆಂದು ಹೊಡೆದಾಡದಿರಿ” ಎಂದು ಸಾರಿದರು. ಮನುಷ್ಯರೆಲ್ಲಾ ಒಂದೇ ಎಂದು ಹೇಳಿದ ಮೊದಲ ಸಮಾಜ ಸುಧಾರಕರಲ್ಲಿ ಅವರು ಒಬ್ಬರು. ಜಾತಿಭೇದವನ್ನು ವಿರೋಧಿಸಿ ನಾವೆಲ್ಲರೂ ಮನುಷ್ಯರು ಒಂದೇ ಕುಟುಂಬದ ಸದಸ್ಯರಂತೆ ಬದುಕಬೇಕು ಎಂಬ ನೀತಿಯನ್ನು 500 ವರ್ಷಗಳ ಹಿಂದೆಯೇ ತಿಳಿಸಿದರು.
ಕನಕದಾಸರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ, ಈಗ ಆ ಊರನ್ನು ಕನಕದಾಸರ ಹುಟ್ಟೂರು ಎಂದು ಕರೆಯುತ್ತಾರೆ. ಬಾಡ ಗ್ರಾಮವೆಂದರೆ ಕನಕದಾಸರು ಕಣ್ಣ ಮುಂದೆ ಬರುತ್ತಾರೆ. ಮೊದಲು ಅವರು ತಿಮ್ಮಪ್ಪನಾಯಕ ಎಂಬ ಪಾಳೆಗಾರ, ಸೈನಿಕರು.
ಭಕ್ತಿ ಎಂದರೆ ದೇವಸ್ಥಾನದ ಬಾಗಿಲಲ್ಲ, ಮನಸ್ಸಿನ ಭಾವದಲ್ಲಿ ಇರುವುದು ಎಂದು ತೋರಿಸಿದವರೇ ಕನಕದಾಸರು. ಯುದ್ಧದಲ್ಲಿ ಗೆದ್ದು ಸಿಕ್ಕ ಚಿನ್ನವನ್ನು ಬಡವರಿಗೆ ಹಂಚಿದರು. “ಕನಕ” ಅಂದರೆ ಚಿನ್ನ, ಚಿನ್ನದ ಆಸೆ ಬಿಟ್ಟಿದ್ದಕ್ಕೆ ಅವರಿಗೆ ಕನಕದಾಸ ಎಂಬ ಹೆಸರು ಬಂತು. ಹಣಕ್ಕಿಂತ ಭಕ್ತಿ, ಮಾನವೀಯತೆ ದೊಡ್ಡದು ಎಂದು ತೋರಿಸಿದರು.ದೊಡ್ಡ ಪಾಳೆಗಾರನಾಗಿದ್ದರೂ ಎಲ್ಲವನ್ನೂ ಬಿಟ್ಟು ಎಲ್ಲರಲಿ ತಾನು ಒಬ್ಬನಂತೆ ಬದುಕಿ ತೋರಿಸಿದವರು ಕನಕದಾಸರು. ಚಿನ್ನವನ್ನು ಬಿಟ್ಟು ಕೃಷ್ಣನನ್ನು ಹಿಡಿದವರು, ಕತ್ತಿಯನ್ನು ಬಿಟ್ಟು ತಂಬೂರಿಯನ್ನು ಹಿಡಿದವರು ಕನಕದಾಸರು.
ಕನ್ನಡ ಸಾಹಿತ್ಯಕ್ಕೆ ಐದು ಹೊಸ ಪ್ರಕಾರಗಳನ್ನು ಅಂದರೆ
ಕೀರ್ತನೆ, ಸುಳಾದಿ, ಉಗಾಭೋಗ, ಮುಂಡಿಗೆ ಪರಿಚಯಿಸಿದವರು ಕನಕದಾಸರೇ. ಅವರ “ಮೋಹನತರಂಗಿಣಿ”, “ರಾಮಧಾನ್ಯ ಚರಿತೆ”, “ಹರಿಭಕ್ತಿಸಾರ” ಇಂದಿಗೂ ಪ್ರಸಿದ್ಧವಾದದ್ದು. ಕಾಗಿನೆಲೆಯ ಆದಿಕೇಶವ ಎಂಬ ಅಂಕಿತನಾಮದಿಂದ ಬರೆದಿರುವ ಇವರ ಕೀರ್ತನೆಗಳನ್ನು ಓದಿದರೆ ಕನ್ನಡ ಭಾಷೆಯ ಮೇಲಿನ ಪ್ರೀತಿ ಹೆಚ್ಚಾಗುತ್ತದೆ ಅವರ ಪದಗಳು ಹಾಡುವ ಹಾಗೆ ಇರುತ್ತವೆ. ಕನಕದಾಸರು ಇಲ್ಲದಿದ್ದರೆ ಕನ್ನಡ ಸಾಹಿತ್ಯ ಅಪೂರ್ಣ, ಕನ್ನಡ ಭಾಷೆಗೆ ಕನಕದಾಸರು ಕಿರೀಟ. ಕನ್ನಡ ಸಾಹಿತ್ಯಕ್ಕೆ ಅತಿ ದೊಡ್ಡ ಕೊಡುಗೆ ನೀಡಿದ ಕನಕದಾಸರು ಎಂದೆಂದಿಗೂ ಸ್ಮರಣೀಯ.
ಮನುಷ್ಯನಿಗೆ ಕಷ್ಟ ಬಂದರೇ ಎಂದೆಂದಿಗೂ ಎದೆಗುಂದಬಾರದು ಎಂಬ ನೀತಿಯನ್ನು ತಿಳಿಸಿದವರು ಕನಕದಾಸರು.ಕನಕದಾಸರು ಯಾವತ್ತೂ ದೇವರನ್ನು ಕಾಣಲಿಲ್ಲ, ಮನುಷ್ಯರಲ್ಲಿ ದೇವರನ್ನು ಕಂಡವರು. ಕಾಗಿನೆಲೆಯ ಆದಿಕೇಶವನ ಭಕ್ತರಾಗಿ ಉಡುಪಿಯ ಕೃಷ್ಣನು ತನ್ನ ಭಕ್ತನಿಗಾಗಿ ಹಿಂತಿರುಗಿ ನೋಡಿದನು ಎಂಬ ಕಥೆ ಎಲ್ಲರಿಗೂ ಗೊತ್ತು. ಈ ಕಥೆಯು ಭಕ್ತಿ ಎಂದರೆ ಜಾತಿ ನೋಡುವುದಿಲ್ಲ, ಮನಸ್ಸು ನೋಡುತ್ತದೆ ಎಂದು ತೋರಿಸುತ್ತದೆ. ಕೃಷ್ಣನನ್ನೇ ತನ್ನ ಕಡೆ ತಿರುಗಿ ನೋಡುವಂತೆ ಮಾಡಿದ ಏಕೈಕ ವ್ಯಕ್ತಿ ಕನಕದಾಸರು. ಕರ್ನಾಟಕದ ಹೆಮ್ಮೆ ಎಂದರೆ ಕನಕದಾಸರು ಅವರನ್ನು ಓದದಿದ್ದರೆ ನಮ್ಮ ನಾಡಿನ ಇತಿಹಾಸವೇ ಅಪೂರ್ಣ.
ಎಲ್ಲಾ ಧರ್ಮಗಳು, ಎಲ್ಲಾ ಜನರು ಸಮಾನರು ಎಂದು ಹೇಳಿದರು. ಕೋಪ, ದುರಹಂಕಾರ, ದುರಾಸೆ ಬಿಡಬೇಕು ಎಂದು ಸರಳ ಭಾಷೆಯಲ್ಲಿ ಜನರಿಗೆ ತಿಳಿಸಿದರು.ಧರ್ಮ ಸಹಿಷ್ಣುತೆ ಸಾರಿದರು ಒಂದಾಗಿ ಬಾಳಿರಿ ವಿವಿಧತೆಯಲ್ಲಿ ಏಕತೆಯನ್ನು ಕಾಣಿರಿ ಎಂದು ತಿಳಿಸಿದರು. ತಮಗಾಗಿ ಬದುಕದೇ ಜನರಿಗಾಗಿಯೇ ಬದುಕಿದ ಪರಮ ಶ್ರೇಷ್ಠ ದಾಸರು ಕನಕದಾಸರು.
ಅದಕ್ಕೆ ಕನಕದಾಸರು ಕೇವಲ ಸಂತ ಅಲ್ಲ, ದಾರ್ಶನಿಕ, ಕವಿ, ಸಮಾಜ ಸುಧಾರಕ, ದೇಶ ಕಂಡ ಮಹಾನ್ ವ್ಯಕ್ತಿ.ಕನಕದಾಸರು ಅಂದರೆ ಪ್ರೀತಿ, ತ್ಯಾಗ, ಸಮಾನತೆಯ ಮೂರ್ತಿ.ಕನಕದಾಸರು ಹುಟ್ಟಿ ಬರಲಿ ಮತ್ತೆ ಮನೆ ಮನೆಯಲ್ಲಿಯೂ, ಅವರ ಆದರ್ಶ ಬೆಳಗಲಿ ನಮ್ಮ ಬದುಕಿನಲ್ಲಿಯೂ.

- ಶ್ರೀ ಮುತ್ತು ಯ. ವಡ್ಡರ
ಶಿಕ್ಷಕರು, HPS ಹಿರೇಮಳಗಾವಿ
ಹುನಗುಂದ -9845568484




















