ಕಂಪ್ಲಿ: ಕಳಪೆ ಹಾಗೂ ನಕಲಿ ‘ಹೈಟೆಕ್ 3201’ ತಳಿಯ ಜೋಳದ ಬೀಜ ಬಿತ್ತನೆಯಿಂದ ಬೆಳೆ ವಿಫಲವಾದ ಹಿನ್ನೆಲೆಯಲ್ಲಿ, ಕೃಷಿ ಸಂಶೋಧಕರು ಹಾಗೂ ಅಧಿಕಾರಿಗಳ ತಂಡವು ಶನಿವಾರ ತಾಲ್ಲೂಕಿನ ಎಮ್ಮಿಗನೂರು ಸೇರಿದಂತೆ ವಿವಿಧೆಡೆ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ ನಡೆಸಿತು.
ಕಂಪ್ಲಿ, ಎಮ್ಮಿಗನೂರು, ಕುರುಗೋಡು, ಮುದೇನೂರು, ಸುಗೂರು ಹಾಗೂ ಸೋಮಸಮುದ್ರ ಭಾಗಗಳಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಜೋಳದ ಬೆಳೆಯು ಬೀಜದ ದೋಷದಿಂದ ಕೈಕೊಟ್ಟಿದ್ದು, ಪ್ರತಿ ಎಕರೆಗೆ ₹40 ರಿಂದ ₹50 ಸಾವಿರ ಖರ್ಚು ಮಾಡಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಳೆ ಹಾನಿಯ ವಾಸ್ತವಾಂಶ ತಿಳಿಯಲು ಜಮೀನುಗಳಿಗೆ ಭೇಟಿ ನೀಡಿದ್ದ ತಂಡದಲ್ಲಿ ಬೇಸಾಯ ಶಾಸ್ತ್ರ ವಿಜ್ಞಾನಿ ಡಾ. ಕೃಷ್ಣಮೂರ್ತಿ ಡಿ., ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಡಾ. ಲೋಕೇಶ್ ಕೆ., ತಳಿ ಅಭಿವೃದ್ಧಿ ವಿಜ್ಞಾನಿ ಡಾ. ವೀರೇಶ್, ಸಹಾಯಕ ಕೃಷಿ ನಿರ್ದೇಶಕ (ಎಡಿಎ) ಮಂಜುನಾಥ್ ರೆಡ್ಡಿ ಹಾಗೂ ಕೃಷಿ ಅಧಿಕಾರಿ (ಎಒ) ಜ್ಯೋತಿ ಇದ್ದರು.
ರೈತರ ಆಗ್ರಹ: ನಕಲಿ ಹಾಗೂ ಕಳಪೆ ಬೀಜ ಪೂರೈಸಿರುವ ಕಂಪನಿ ಮತ್ತು ಮಾರಾಟಗಾರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅಧಿಕಾರಿಗಳು ಸಮರ್ಪಕ ವರದಿ ನೀಡಿ, ನಷ್ಟಕ್ಕೊಳಗಾದ ರೈತರಿಗೆ ಸರ್ಕಾರದಿಂದ ಕೂಡಲೇ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಎಂದು ಎಚ್ಚರಿಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ, ತಾಲ್ಲೂಕು ಅಧ್ಯಕ್ಷ ವೀರೇಶ್, ಎಮ್ಮಿಗನೂರಿನ ರೈತ ಮುಖಂಡ ದೇವಯ್ಯ ಹಾಗೂ ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















