ಭದ್ರಾವತಿ: ಜಾನುವಾರು ಮೇಯಿಸುತ್ತಿದ್ದ ಮಹಿಳೆಯೋರ್ವರ ಮಾಂಗಲ್ಯ ಸರವನ್ನು ಅಪಹರಿಸಿ ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಹೊಳೆಹೊನ್ನೂರು ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭದ್ರಾವತಿಯ ಹೊಸಮನೆ ಬಡಾವಣೆ ನಿವಾಸಿ ಹೇಮಂತ್ ಯಾನೆ ಸತೀಶ್ (32) ಹಾಗೂ ಬಿ ಹೆಚ್ ರಸ್ತೆಯ ಹಾಲಪ್ಪ ಸರ್ಕಲ್ ಸಮೀಪದ ನಿವಾಸಿ ಜೀವನ್ ಯಾನೆ ದಮ್ಮು (23) ಬಂಧಿತ ಆರೋಪಿಗಳು.
ಜು.5 ರಂದು ಭದ್ರಾವತಿ ತಾಲ್ಲೂಕು ಅರದೋಟ್ಲು ಗ್ರಾಮದ ಬಸ್ ನಿಲ್ದಾಣದ ಬಳಿ, ಜಾನುವಾರು ಮೇಯಿಸುತ್ತಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಅಪಹರಿಸಿ ಸದರಿ ಆರೋಪಿಗಳಿಬ್ಬರು ಪರಾರಿಯಾಗಿದ್ದರು. ಘಟನೆ ಕುರಿತಂತೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು.
ಜು. 21 ರಂದು ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿ, ವಿಚಾರಣೆಗೋಳಪಡಿಸಿದಾಗ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಬೈಕ್ ಕಳವು ಕೃತ್ಯದಲ್ಲಿಯೂ ಭಾಗಿಯಾಗಿದ್ದನ್ನು ಸಹ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಬಂಧಿತರಿಂದ ಎರಡು ಕಳವು ಪ್ರಕರಣಗಳಿಗೆ ಸಂಬಂಧಿಸಿದದಂತೆ 75 ಸಾವಿರ ರೂ. ಮೌಲ್ಯದ 23 ಗ್ರಾಂ ಬಂಗಾರದ ಮಾಂಗಲ್ಯ ಸರ ಹಾಗೂ ದ್ವಿಚಕ್ರ ವಾಹನವನ್ನೂ ಸಹ ವಶಕ್ಕೆ ಪಡೆಯಲಾಗಿದೆ. ಇವುಗಳ ಮೌಲ್ಯ 1 ಲಕ್ಷ ರೂ.ಗಳಾಗಿದೆ ಎಂದು ಪೊಲೀಸ್ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಭದ್ರಾವತಿ ಉಪವಿಭಾಗದ ಎ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಮಾರ್ಗದರ್ಶನದಲ್ಲಿ ಹೊಳೆಹೊನ್ನೂರು ಠಾಣೆ ವೃತ್ತ ನಿರೀಕ್ಷಕ ಲಕ್ಷ್ಮೀಪತಿ, ಪಿ ಎಸ್ ಐ ಗಳಾದ ಸುರೇಶ್, ರಮೇಶ್, ಹೆಡ್ ಕಾನ್ಸ್ಟೇಬಲ್ ಗಳಾದ ಲಿಂಗೇಗೌಡ, ಮಂಜುನಾಥ್, ಪೊಲೀಸ್ ಕಾನ್ಸ್ಟೇಬಲ್ ಗಳಾದ ವಿಶ್ವನಾಥ್, ಚಂದ್ರಶೇಖರ್, ಪೇಪರ್ ಟೌನ್ ಠಾಣೆ ಹೆಡ್ ಕಾನ್ಸ್ಟೇಬಲ್ ನಾಗರಾಜ್, ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಯ ಎ.ಎನ್.ಸಿ. ವಿಭಾಗದ ಸಿಬ್ಬಂದಿಗಳಾದ ಇಂದ್ರೇಶ್, ಗುರುರಾಜ್, ವಿಜಯ್ ಕುಮಾರ್ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡಕ್ಕೆ ಜಿಲ್ಲಾ ರಕ್ಷಣಾಧಿಕಾರಿಗಳು ಹಾಗೂ ಹೆಚ್ಚುವರಿ ರಕ್ಷಣಾಧಿಕಾರಿಗಳು ಪ್ರಶಂಸಿಸಿದ್ದಾರೆ.
ವರದಿ : ಕೆ ಆರ್ ಶಂಕರ್ ಭದ್ರಾವತಿ