ತಾಳಿಕೋಟೆ: ನೂತನ ತಾಲೂಕಿನ ಪ್ರಥಮ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ ಅಕ್ಟೋಬರ್ 01 ರಂದು ಪಟ್ಟಣದ ಶ್ರೀ ಸಂಗಮೇಶ್ವರ ಸಭಾಭವನದಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಘಟಕದ ಅಧ್ಯಕ್ಷ ಆರ್.ಎಲ್.ಕೊಪ್ಪದ ಹೇಳಿದರು.ದಿ.08-09-2024 ರ ಭಾನುವಾರ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಳಿಕೋಟೆ ಪಟ್ಟಣ ನೂತನ ತಾಲೂಕಾಗಿ ರಚನೆಯಾದ ನಂತರ ನಡೆಯಲಿರುವ ಇದು ಪ್ರಥಮ ತಾಲೂಕ ಸಮ್ಮೇಳನವಾಗಿದೆ. ಸಮ್ಮೇಳನದ ಎಲ್ಲಾ ಸಿದ್ಧತೆಗಳು ನಡೆದಿವೆ. ಸಮ್ಮೇಳನ ಸರ್ವಾಧ್ಯಕ್ಷರನ್ನು ಶೀಘ್ರದಲ್ಲಿ ಆಯ್ಕೆ ಮಾಡಲಾಗುವುದು.
ನಮ್ಮ ತಾಲೂಕಿನಲ್ಲಿಯೇ ಇದ್ದು ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯವಾದ ಸೇವೆಯನ್ನು ಸಲ್ಲಿಸಿದ ಸಾಹಿತಿಯನ್ನು ಗುರುತಿಸಿ ಆಯ್ಕೆ ಮಾಡಲಾಗುವುದು. ಇನ್ನೆರಡು ದಿನಗಳಲ್ಲಿ ಸಮ್ಮೇಳನದ ಎಲ್ಲಾ ಸಮಿತಿಗಳ ಜವಾಬ್ದಾರರನ್ನು ನೇಮಿಸಲಾಗುವುದು ಎಂದ ಅವರು ನಾಡು ನೆಲ ಜಲ ಹಾಗೂ ಭಾಷೆಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಸಮ್ಮೇಳನ ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಇರಲಿದೆ.ಸರ್ವ ಸಮಾಜದ ಬಾಂಧವರ ತನು ಮನ ಧನದ ಸಹಕಾರದೊಂದಿಗೆ ಯಶಸ್ವಿಗೊಳಿಸಲು ಪ್ರಯತ್ನಿಸಲಾಗುವುದು. ಒಂದು ದಿನದ ಸಮ್ಮೇಳನವಾಗಿರುವುದರಿಂದ ಸಮಯದ ಅಭಾವವಿರುತ್ತದೆ ಆದ್ದರಿಂದ ಗೋಷ್ಠಿಗಳನ್ನು ಕಡಿಮೆ ಸಂಖ್ಯೆಯಲ್ಲಿಟ್ಟು ಕಾರ್ಯಕ್ರಮವನ್ನು ಪ್ರಭಾವ ಪೂರ್ಣವಾಗಿ ಮಾಡಲು ಪ್ರಯತ್ನಿಸಲಾಗುವುದು ಎಂದ ಅವರು ಇದೊಂದು ಐತಿಹಾಸಿಕವಾದ ಸಮ್ಮೇಳನವನ್ನಾಗಿಸಲು ಎಲ್ಲರ ಸಹಕಾರ ಬೇಕು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಾಗುವುದು ಎಂದರು. ಸುದ್ಧಿಗೋಷ್ಠಿಯಲ್ಲಿ ಗೌರವ ಕಾರ್ಯದರ್ಶಿಗಳಾದ ಗಂಗಾಧರ ಕಸ್ತೂರಿ,ಡಾ.ನಜೀರ ಕೋಳ್ಯಾಳ,ಕೋಶಾಧ್ಯಕ್ಷ ರಾಜು ಹಂಚಾಟೆ,ಸಂಘಟನಾ ಕಾರ್ಯದರ್ಶಿಗಳಾದ ಜೈ ಭೀಮ್ ಮುತ್ತಗಿ, ಸಂಗನಗೌಡ ಅಸ್ಕಿ,ಪದಾಧಿಕಾರಿಗಳಾದ ಬಿ.ಆರ್.ಪೊಲೀಸ್ ಪಾಟೀಲ,ಪಿ.ಬಿ.ಗುಬ್ಬೇವಾಡ,ಎಂ.ಎಚ್.ಹಂದ್ರಾಳ,
ಎಸ್.ವಿ.ಜಾಮಗೊಂಡಿ,ಸದಸ್ಯರಾದ ರಾಜು ವಿಜಾಪೂರ,ಆರ್.ಎಸ್.ಹಿಪ್ಪರಗಿ,ಎಂ.ಜಿ.ಕತ್ತಿ,
ಪ್ರಭುಗೌಡ ಚೌಧರಿ,ಛಾಯಾಗ್ರಾಹಕ ಸಿದ್ದು,
ಕಟ್ಟಿಮನಿ ಸಿದ್ದು ಉಪಸ್ಥಿತರಿದ್ದರು.
ವರದಿ :ಉಸ್ಮಾನ ಬಾಗವಾನ




















