ಹುಬ್ಬಳ್ಳಿ: ಆಧುನಿಕ ಯುಗದಲ್ಲಿ ನಮ್ಮ ತಪ್ಪು ಜೀವನಶೈಲಿ ಮತ್ತು ಕೆಟ್ಟ ಹವ್ಯಾಸಗಳು ನಮ್ಮನ್ನು ಮಾರಣಾಂತಿಕ ಕಾಯಿಲೆಗಳತ್ತ ದೂಡುತ್ತಿವೆ. ಧೂಮಪಾನ ಮತ್ತು ಮದ್ಯಪಾನ ಕೇವಲ ವೈಯಕ್ತಿಕ ಆರೋಗ್ಯವನ್ನು ಹಾಳುಮಾಡುವುದಿಲ್ಲ, ಬದಲಿಗೆ ಇಡೀ ಕುಟುಂಬವನ್ನೇ ಆರ್ಥಿಕ ಹಾಗೂ ಮಾನಸಿಕವಾಗಿ ಕುಗ್ಗಿಸುತ್ತದೆ ಎಂದು ಡಾ. ಮಹಾಂತೇಶ ಸಜ್ಜನರ ಹೇಳಿದರು.
ಅವರು, ನಗರದ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಧೂಮಪಾನವು ಶ್ವಾಸಕೋಶದ ಕ್ಯಾನ್ಸರ್, ಗಂಟಲಿನ ಕ್ಯಾನ್ಸರ್ ಮತ್ತು ಉಸಿರಾಟದ ತೀವ್ರ ತೊಂದರೆಗಳಿಗೆ ನೇರ ಕಾರಣವಾದರೆ, ಮದ್ಯಪಾನವು ಲಿವರ್ ಸಿರೋಸಿಸ್, ಯಕೃತ್ತಿನ ವೈಫಲ್ಯ ಹಾಗೂ ಹೃದಯದ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತದೆ. ಇದರೊಂದಿಗೆ ಇಂದಿನ ಯುವ ಪೀಳಿಗೆ ಹೆಚ್ಚಾಗಿ ಬಳಸುತ್ತಿರುವ ಜಂಕ್ ಫುಡ್ ಹಾಗೂ ಸಂಸ್ಕರಿಸಿದ ಸಕ್ಕರೆ ದೇಹಕ್ಕೆ ಒಂದು ನಿಧಾನಗತಿಯ ವಿಷವಾಗಿದೆ. ಇವುಗಳಿಂದಾಗಿ ಅಕಾಲಿಕ ಬೊಜ್ಜು, ಮಧುಮೇಹ ಮತ್ತು ತೀವ್ರ ರಕ್ತದೊತ್ತಡ ದಂತಹ ದೀರ್ಘಕಾಲದ ಕಾಯಿಲೆಗಳು ಸಣ್ಣ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿವೆ. ಮತ್ತೊಂದೆಡೆ ಮೊಬೈಲ್ ಮತ್ತು
ಟಿವಿಗಳ ಅತಿಯಾದ ವೀಕ್ಷಣೆ ಅಥವಾ ಸ್ಟೀನ್ ಅಡಿಕ್ಷನ್ ಇಂದಿನ ಪ್ರಮುಖ ದೀರ್ಘಕಾಲದ ಸಮಸ್ಯೆಯಾಗಿದೆ. ಇದು ಕೇವಲ ಕಣ್ಣಿನ ದೃಷ್ಟಿ ಮಂದವಾಗುವುದು ಮತ್ತು ಕುತ್ತಿಗೆ ನೋವಿಗೆ ಸೀಮಿತವಾಗಿರದೆ, ತೀವ್ರ ಮಾನಸಿಕ ಒತ್ತಡ ಹಾಗೂ ನಿದ್ರಾಹೀನತೆಗೆ ಕಾರಣವಾಗುತ್ತಿದೆ. ಇದರೊಂದಿಗೆ ಯಾವುದೇ ದೈಹಿಕ ಶ್ರಮವಿಲ್ಲದ ಜಡ ಜೀವನಶೈಲಿಯು ರಕ್ತಪರಿಚಲನೆಯನ್ನು ಕುಂದಿಸಿ, ಹೃದಯಾಘಾತದ ಅಪಾಯವನ್ನು ದುಪ್ಪಟ್ಟುಗೊಳಿಸುತ್ತದೆ. “ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ, ರೋಗ ಬರದಂತೆ ತಡೆಯುವುದೇ ಮೇಲು” ಆದ್ದರಿಂದ ಇಂದಿನಿಂದಲೇ ಧೂಮಪಾನ, ಮದ್ಯಪಾನಕ್ಕೆ ಇತಿಶ್ರೀ ಹಾಡಿ, ದಿನಕ್ಕೆ ಕನಿಷ್ಠ 30 ನಿಮಿಷಗಳ ನಡಿಗೆ, ಪೌಷ್ಟಿಕ ಆಹಾರ, ಸಮರ್ಪಕ ನಿದ್ರೆ ಮತ್ತು ಮಾನಸಿಕ ನೆಮ್ಮದಿಗಾಗಿ ಧ್ಯಾನವನ್ನು ರೂಢಿಸಿಕೊಳ್ಳಬೇಕಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಎಸ್. ಎಸ್. ಹಿರೇಮಠ, ಸಂಸ್ಥೆಯ ಮೇಲ್ವಿಚಾರಕರಾದ ನಾಗರಾಜ್, ಕಲ್ಪನಾ ಹಾಗೂ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.




















