ಅದೊಂದು ಕಾಲವಿತ್ತು…
ಸೂರ್ಯ ಮುಳುಗಿದರೆ ಸಾಕು, ಇಡೀ ಜಗತ್ತು
ಮೌನದ ಮಡಿಲಲ್ಲಿ ಮಲಗುತ್ತಿತ್ತು.
ಕತ್ತಲೆಯೆಂದರೆ ಭಯವಲ್ಲ, ಅದೊಂದು ವಿಶ್ರಾಂತಿ,
ಬಳಲಿದ ಜೀವಕ್ಕೆ ಪ್ರಕೃತಿ ನೀಡುತ್ತಿದ್ದ ಪರಮ ಶಾಂತಿ.
ಹಗಲಿಡೀ ಬೆವರು ಸುರಿಸಿದ ಕಾಯಕಕ್ಕೆ
ಅಲ್ಲಿತ್ತು ಇರುಳ ಸಾಂತ್ವನದ ಅಪ್ಪುಗೆ;
ನಕ್ಷತ್ರಗಳ ಕಣ್ಣ ಮಿಣುಕಿನಲ್ಲೇ ಕಾಣುತ್ತಿತ್ತು
ಜೀವನ ಪ್ರೀತಿಯ ಅಮೃತದ ಹನಿಗಳ ತೇಜಸ್ಸು.
ಆದರೆ ಇಂದು?
ಕತ್ತಲೆಯನ್ನೇ ಕೊಂದು ಕೃತಕ ಬೆಳಕನ್ನು ಸೃಷ್ಟಿಸಿದೆವು,
ಹಗಲು-ರಾತ್ರಿಯ ನಡುವಿನ ಗೆರೆಯನ್ನು ಅಳಿಸಿ ಹಾಕಿದೆವು.
ನಮ್ಮದೇ ಸುಖದ ಸಮಾಧಿಯ ಮೇಲೆ
ಬಣ್ಣದ ಬಲ್ಬುಗಳ ತೋರಣ ಕಟ್ಟಿ ಮೆರೆದೆವು.
ನಕ್ಷತ್ರಗಳ ಕದ್ದ ನಮ್ಮ ಈ ನಗರದ ದೀಪಗಳು
ಕಣ್ಣಿಗೆ ಹೊಳಪು ನೀಡಬಹುದು, ಆದರೆ ಆತ್ಮಕ್ಕೆ?
ಕತ್ತಲೆಯಲ್ಲಿ ಅಡಗಿದ್ದ ಆ ಮೌನದ ಶಕ್ತಿ,
ಧ್ಯಾನದಂತಹ ಆ ನಿಶ್ಶಬ್ದದ ತೃಪ್ತಿ,
ಎಲ್ಲವನ್ನೂ ಮಾರಿಕೊಂಡೆವು ಈ ‘ವಿಕಾಸ’ದ ಹೆಸರಿನಲ್ಲಿ!
ನಾವು ಸಾಧಿಸಿದ್ದಾದರೂ ಏನನ್ನು?
ಕಣ್ಣು ತೆರೆದಿದ್ದರೂ ದೃಷ್ಟಿ ಕಳೆದುಕೊಂಡೆವು,
ಬೆಳಕಿನ ಅಬ್ಬರದಲ್ಲಿ ಬದುಕಿನ ನೆಮ್ಮದಿ ಕಳೆದುಕೊಂಡೆವು.
ರಾತ್ರಿಯನ್ನೂ ಹಗಲಾಗಿಸುವ ಈ ವ್ಯರ್ಥ ಹಂಬಲದಲ್ಲಿ,
ಕೊನೆಗೆ… ಕತ್ತಲಲ್ಲಿ ಕಳೆದುಹೋಗುವ ಹಕ್ಕನ್ನೂ ಕಳೆದುಕೊಂಡೆವು!

- ಡಾ. ಪ್ರಸನ್ನ ದೇವರಮಠ ಅನಿಲಕುಮಾರ್, ಮಾಗಳ
ಶಿಕ್ಷಕರು ಮತ್ತು ಸಾಹಿತಿಗಳು.




















