ಬಳ್ಳಾರಿ / ಕಂಪ್ಲಿ : ತಾಲೂಕಿನ ರಾಮಸಾಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ರಾಮಸಾಗರ ಗ್ರಾಮದಲ್ಲಿ ಇಂದು ಕುಷ್ಠ ರೋಗದಿಂದ ಅಂಗವಿಕಲತೆ ಹೊಂದಿರುವ ವ್ಯಕ್ತಿಗೆ ಜೀವನೋಪಾಯಕ್ಕಾಗಿ ಡೇಮಿಯನ್ ಫೌಂಡೇಶನ್ (DFIT) ವತಿಯಿಂದ ಕಿರಾಣಿ ಅಂಗಡಿಯ ಸಾಮಗ್ರಿಗಳನ್ನು ನೀಡಿ ನೆರವು ನೀಡಲಾಯಿತು. ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಅರುಣ್ ಜಿ. ಅವರ ನೇತೃತ್ವದಲ್ಲಿ ಈ ಶ್ಲಾಘನೀಯ ಕಾರ್ಯಕ್ರಮ ನಡೆಯಿತು. ಸಂಕಷ್ಟದಲ್ಲಿರುವ ವ್ಯಕ್ತಿ ಯಾರ ಮೇಲೆಯೂ ಅವಲಂಬಿತರಾಗದೆ, ಸ್ವಂತ ಕಾಲಿನ ಮೇಲೆ ನಿಂತು ಗೌರವಯುತ ಬದುಕು ಸಾಗಿಸಲಿ ಎಂಬ ಉದ್ದೇಶದಿಂದ ಈ ಜೀವನೋಪಾಯದ ನೆರವನ್ನು ಒದಗಿಸಲಾಗಿದೆ.
ಈ ಸಂದರ್ಭದಲ್ಲಿ ಡೇಮಿಯನ್ ಫೌಂಡೇಶನ್‌ನ ಅಧಿಕಾರಿ ಸುಧಾಕರ್, ಬಳ್ಳಾರಿ ಡಿ.ಎಲ್.ಒ (DLO) ಕಚೇರಿಯ ಮೇಲ್ವಿಚಾರಕರಾದ ಪಂಚಾಕ್ಷರಿ, ಕಂಪ್ಲಿ ತಾಲೂಕಿನ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಪಿ. ಬಸವರಾಜ ಹಾಗೂ ಫಲಾನುಭವಿಯ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ಆರೋಗ್ಯ ಇಲಾಖೆ ಮತ್ತು ಡೇಮಿಯನ್ ಫೌಂಡೇಶನ್‌ನ ಈ ಜಂಟಿ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್




















