ಬಳ್ಳಾರಿ / ಕಂಪ್ಲಿ : ಇಲ್ಲಿನ ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವ ದಳ ಸೋಮವಾರ ಪಟ್ಟಣದ ವಚನ ದಾಸೋಹಿ ಮುದಕಪ್ಪ ನೆಲಜೇರಿ ನಿವಾಸದಲ್ಲಿ ಹಮ್ಮಿಕೊಂಡಿದ್ದ ವಚನ ಶ್ರಾವಣ ಕಾರ್ಯಕ್ರಮ ನಡೆಯಿತು.
ಪುರಸಭೆ ಮಾಜಿ ಸದಸ್ಯ ಎಸ್.ಎಂ.ನಾಗರಾಜ ಷಟ್ಸ್ಥಲ ಧ್ವಜಾರೋಹಣ ನೆರವೇರಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶರಣ ಸಾಹಿತ್ಯ ನಿತ್ಯ ಜೀವನದಲ್ಲಿ ಹಾಸು ಹೊಕ್ಕಾಗಬೇಕಿದೆ. ಶರಣ ಸಾಹಿತ್ಯವು ಸರಳ ಸುಂದರ ಬದುಕನ್ನು ಪ್ರೇರೇಪಿಸುತ್ತದೆ ಎಂದರು.
ಕನ್ನಡ ವಿವಿಯ ಸಂಶೋಧನಾರ್ಥಿ ಬೆರ್ಗಿ ಜಯಶ್ರೀ ಶರಣ ಸಾಹಿತ್ಯ ಕುರಿತ ಕನ್ನಡ ಸಾಹಿತ್ಯ ಕೃತಿಗಳು ಕುರಿತು ಮಾತನಾಡಿ, ಶರಣ ಸಾಹಿತ್ಯ ಜಗತ್ತಿನ ಶ್ರೇಷ್ಠ ಸಾಹಿತ್ಯವಾಗಿದ್ದು ಕನ್ನಡ ಸಾಹಿತ್ಯದಲ್ಲಿ ಶರಣ ಸಾಹಿತ್ಯ ಕುರಿತು ನಾನಾ ಕೃತಿಗಳು ಲೋಕಾರ್ಪಣೆಗೊಂಡಿವೆ. ಶರಣ ಸಾಹಿತ್ಯವು ಕನ್ನಡ ಸಾಹಿತ್ಯದಲ್ಲಿ ಮಹತ್ವದ ಸ್ಥಾನ ಗಳಿಸಿದೆ ಎಂದರು.
ಚಿಕ್ಕಜಾಯಿಗನೂರಿನ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಬಿ.ಎಂ.ಗಾಯತ್ರಿದೇವಿ ಕಾಯಕ ಶ್ರೇಷ್ಠತೆ ಕುರಿತು ಮಾತನಾಡಿ, ಕಾಯಕಗಳಲ್ಲಿ ಮೇಲು ಕೀಳು ಇಲ್ಲ. ಶರಣರು ಕಾಯಕದಿಂದ ಕೈಲಾಸ ಕಂಡಿದ್ದು, ಕಾಯಕವನ್ನು ಶ್ರದ್ಧೆ ನಿಷ್ಠೆಯಿಂದ ನಿರ್ವಹಿಸಿದರೆ ಕಲ್ಯಾಣ ರಾಜ್ಯವನ್ನು ಕಟ್ಟಬಹುದು. ಸತ್ಯ ಶುದ್ಧ ಕಾಯಕವನ್ನು ಶರಣರು ಪರಿಚಯಿಸಿದ್ದಾರೆ. ನಮ್ಮ ಕಾಯಕವನ್ನು ಶುದ್ಧತೆಯಿಂದ ನಿರ್ವಹಿಸಿದಲ್ಲಿ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಶ್ರೀರಕ್ಷಾ, ಮಲ್ಲಮ್ಮ, ಪ್ರಭಾವತಿ ನೆಲಜೇರಿ ವಚನಗಾಯನ ಮಾಡಿದರು. ಇಸಿಒ ಟಿ.ಎಂ.ಬಸವರಾಜ, ಪ್ರಮುಖರಾದ ಜಿ.ಪ್ರಕಾಶ, ಮುದಕಪ್ಪ ನೆಲಜೇರಿ, ಡಾ.ಬಿ.ಸುನಿಲ್, ಬಿ.ಎಂ.ಪುಷ್ಪಾ ರುದ್ರಯ್ಯ, ಅಶೋಕ ಕುಕನೂರು, ಡಾ.ಎಸ್.ಎಂ.ಸಾವಿತ್ರಿ, ವೀರಯ್ಯಸಾಲಿಮಠ, ಚಂದ್ರಯ್ಯಸೊಪ್ಪಿಮಠ, ಕೃಷ್ಣ ಎಸ್ ಪೋಳ್, ಹನುಮಂತಪ್ಪ, ದೊಡ್ಡಬಸಪ್ಪ, ಎನ್.ಬಿ.ರೇಣುಕಾರಾಧ್ಯ, ಗವಿವೀರನಗೌಡ, ಕೆ.ಎಂ.ವಾಗೀಶ್, ಜಿ.ಮೇಲಾರೆಡ್ಡಿ ಇತರರಿದ್ದರು.
ಎಸ್.ರಾಮಪ್ಪ ನಿರೂಪಿಸಿ ವಂದಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















