
ಬಳ್ಳಾರಿ / ಕಂಪ್ಲಿ : ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳನ್ನು ಬೆಳೆಸಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಜೊತೆಗೆ ಸರ್ವತೋಮುಖ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದು ತಹಶೀಲ್ದಾರ್ ಜೂಗಲ್ ಮಂಜುನಾಯಕ ಹೇಳಿದರು.
ಪಟ್ಟಣದ ಸಣಾಪುರ ರಸ್ತೆಯಲ್ಲಿರುವ ರೈನ್ಬೋ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆರಂಭಗೊಂಡ ಎರಡು ದಿನದ ಕಂಪ್ಲಿ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಶಿಕ್ಷಣದ ಜೊತೆಗೆ ಕ್ರೀಡೆಗೂ ಹೆಚ್ಚಿನ ಅಧ್ಯತೆ ನೀಡುವ ಮೂಲಕ ಸಾಧನೆಯ ಗುರಿ ತಲುಪಬೇಕು. ಆಧುನಿಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಆ ದೃಷ್ಠಿಯಿಂದ ಒಳ್ಳೆಯ ಕ್ರೀಡಾಪಟುಗಳಾಗುವ ಜೊತೆಗೆ ಉನ್ನತ ಮಟ್ಟದ ಶಿಕ್ಷಣದೊಂದಿಗೆ ಹುದ್ದೆಗಳನ್ನು ಪಡೆದುಕೊಳ್ಳಬೇಕು ಎಂದರು.
ರೈನ್ಬೋ ಕಾಲೇಜಿನ ಸಂಸ್ಥಾಪಕ ಕಾರ್ಯದರ್ಶಿ ಕೆ.ಎಸ್.ಚಾಂದ್ಬಾಷಾ ಇವರು ಪ್ರತಿಜ್ಞಾವಿಧಿ ಬೋಧಿಸಿದ ನಂತರ ಮಾತನಾಡಿ, ಕ್ರೀಡಾಕೂಟದಲ್ಲಿ ನಿರ್ಣಾಯಕರ ತೀರ್ಪು ನ್ಯಾಯಯುತವಾಗಿರುವುದು ಕ್ರೀಡೆಯ ನಿಜವಾದ ಮೌಲ್ಯವನ್ನು ಮತ್ತು ಕ್ರೀಡಾಸ್ಪೂರ್ತಿಯನ್ನು ಕಾಪಾಡಲು ಅತ್ಯಂತ ಮುಖ್ಯವಾಗಿದೆ. ಇದು ಸೋಲು-ಗೆಲುವುಗಳಿಗಿಂತ ಕ್ರೀಡಾಮನೋಭಾವಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ಆರೋಗ್ಯದಿಂದಿರಲು ಕ್ರೀಡೆಗಳು ಸಹ ಸಹಕಾರಿಯಾಗಲಿವೆ. ಆದ್ದರಿಂದ ಶಿಕ್ಷಣದ ಜೊತೆಗೆ ಕ್ರೀಡೆಗಳಿಗೆ ಆಧ್ಯತೆ ನೀಡುವ ಮೂಲಕ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸರಾವ್ ಇವರು ಕ್ರೀಡಾ ಧ್ವಜರೋಹಣ ನೆರವೇರಿಸಿದರು.
ರೈನ್ಬೋ ಕಾಲೇಜಿನ ಪ್ರಾಚಾರ್ಯ ಡಿ.ಕೆ ಅಜೀಜ್ ಉಲ್ ಹಕ್ ಅಧ್ಯಕ್ಷತೆವಹಿಸಿದ್ದರು. ಇಲ್ಲಿನ ಕ್ರೀಡಾಕೂಟದಲ್ಲಿ ಪಟ್ಟಣ ಹಾಗೂ ಗ್ರಾಮೀಣ ಭಾಗದ ಒಟ್ಟು 7 ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕ್ರೀಡಾಕೂಟದ ಉದ್ಘಾಟನಾ ಪಂದ್ಯದ ವಾಲಿಬಾಲ್ ಕ್ರೀಡೆಯಲ್ಲಿ ರೈನ್ಬೋ ಕಾಲೇಜಿನ ಬಾಲಕರ ತಂಡ ಮೊದಲ ಗೆಲುವಿನೊಂದಿಗೆ ಶುಭಾರಂಭ ಮಾಡಿತು.
ಈ ಸಂದರ್ಭದಲ್ಲಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ, ಅಕ್ಕಿಗಿರಣಿ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ, ರೈನ್ಬೋ ಸಂಸ್ಥೆಯ ಅಧ್ಯಕ್ಷ ಶಾರುಖ್ ಕೆ.ಎಸ್, ಖಜಾಂಚಿ ಕೆ.ಎಸ್ ಮೆಹಬೂಬ, ಕಾಲೇಜು ಉಪನ್ಯಾಸಕರಾದ ಮಾರೆಪ್ಪ, ಸಿದ್ದಪ್ಪ ಪರಮೇಶ್ವರ, ವಿರೇಶ ಕೆ.ಬಿ, ಜಿ.ಮಹಾಬಲೇಶ್ವರಪ್ಪ, ಬಸವರಾಜ ನಾಯಕ, ಬಸವರಾಜಸ್ವಾಮಿ, ಶಿಕ್ಷಣ ಸಂಯೋಜಕ ಟಿ.ಎಂ.ಬಸವರಾಜ, ಉಪ ಪ್ರಾಚಾರ್ಯ ನವೀನ್ ಕುಮಾರ ಹೆಚ್.ಆರ್, ದೈಹಿಕ ಶಿಕ್ಷಣ ನಿರ್ದೇಶಕ ಸಿ.ಜಡೆಪ್ಪ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಭೀರಲಿಂಗೇಶ್ವರ, ಮುಖಂಡರಾದ ಭಟ್ಟ ಪ್ರಸಾದ್, ಬಿ.ಸಿದ್ದಪ್ಪ, ಸಿ.ಆರ್.ಹನುಮಂತ, ಬಾಲೆಸಾಬ್, ವೆಂಕಟರಮಣ, ರಮೇಶ ಶಿವಪುರ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















