ಮಡಿಕೇರಿ :ನಗರ ಆರೋಗ್ಯ ಕೇಂದ್ರದಲ್ಲಿ ವಿಶ್ವ
ಸೊಳ್ಳೆ ದಿನವನ್ನು ಆಚರಿಸಲಾಯಿತು.
ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಸುನಿಲ್ ಅವರು ಮಾತನಾಡಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಮೊದಲು ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಿದಾಗ ಸೊಳ್ಳೆಗಳಿಂದ ಹರಡಬಹುದಾದ ರೋಗಗಳನ್ನು ತಪ್ಪಿಸಬಹುದಾಗಿದೆ ಎಂದರು. ಮಳೆಗಾಲದಲ್ಲಿ ಡೆಂಗ್ಯೂ ಇಲಿ ಜ್ವರ ಪ್ರಕರಣಗಳು ಹೆಚ್ಚಾಗುತ್ತಿದ್ದು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದಾಗ ಮಾತ್ರ ರೋಗಿಗಳ ನಿಯಂತ್ರಣ ಸಾಧ್ಯವೆಂದು ತಿಳಿಸಿದರು.
ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಸಾರ್ವಜನಿಕರ ಸಹಕಾರ ಮುಖ್ಯವಾಗಿ ಬೇಕಾಗಿದೆ ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ.ಶ್ರೀನಾಥ್ ರವರು ಮಾತನಾಡಿ ಅನಾಫಿಲೀಸ್ ಎಂಬ ಹೆಣ್ಣು ಸೋಂಕಿತ ಸೊಳ್ಳೆಯಿಂದ ಮಲೇರಿಯಾ ರೋಗ ಬರುವುದನ್ನು ವೈದ್ಯ ವಿಜ್ಞಾನಿ ಸರ್ ಡಾ. ರೊನಾಲ್ಡ್ ರಾಸ್ ಅವರು ಭಾರತದಲ್ಲಿ 1897 ರ ಆಗಸ್ಟ್ 20 ರಂದು ಕಂಡು ಹಿಡಿದರು. ಇದಕ್ಕಾಗಿ ಇವರಿಗೆ 1902ರಲ್ಲಿ ನೊಬೆಲ್ ಪ್ರಶಸ್ತಿ ನೀಡುವ ಮೂಲಕ ಗೌರವಿಸಲಾಯಿತು.
ಈ ನೆನಪಿಗಾಗಿ ವಿಶ್ವ ಸೊಳ್ಳೆ ದಿನ ಆಚರಿಸುವ ಮೂಲಕ ಇದರ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ರೋಗಗಳ ನಿಯಂತ್ರಣ ಬಗ್ಗೆ ತಿಳಿಸುವುದು ಈ ದಿನದ ಉದ್ದೇಶವಾಗಿದೆ ಎಂದು ತಿಳಿಸಿದರು.
ಸೊಳ್ಳೆಗಳ ನಿಯಂತ್ರಣ ಕ್ರಮಗಳಾದ ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ಜಾಗ್ರತೆ ವಹಿಸುವುದು, ನೀರಿನ ತೊಟ್ಟಿ ಮುಚ್ಚುವುದು, ಸೊಳ್ಳೆ ಪರದೆ ಬಳಸುವುದು, ಜ್ವರ ತಲೆನೋವು, ಚಳಿ, ದೇಹದಲ್ಲಿ ನೋವು, ಕಾಣಿಸಿಕೊಂಡರೆ ತಕ್ಷಣ ವೈದ್ಯರಲ್ಲಿ ತೋರಿಸಿಕೊಳ್ಳುವಂತೆ ತಿಳಿಸಿದರು.
ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಕೃತ ರವರು ಮಾತನಾಡಿ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗಿ, ಚಿಕನ್ ಗುನ್ಯಾ ಅನೇಕ ಎನ್ಸೆಫಾಲಿಟೀಸ್ ಹರಡುವ ಮತ್ತು ತಡೆಗಟ್ಟುವ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭ ಆರೋಗ್ಯ ನಿರೀಕ್ಷಣಾಧಿಕಾರಿ ದೇವಿ ಪ್ರಸಾದ್, ಭಾರತಿ, ಕಿಶೋರ್ ಹಾಗೂ ರೇವತಿ ಸೇರಿದಂತೆ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಔಷದಾಲಯದ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತರು ಹಾಜರಿದ್ದರು.
ವರದಿ: ಪ್ರಿತುನ್ ಪೂವಣ್ಣ




















