ಕೊಟ್ಟೂರು ತಾಲೂಕು ಕಛೇರಿಯಲ್ಲಿ ಇಂದು ಡಿ ದೇವರಾಜ ಅರಸು ಅವರ ಜನ್ಮ ದಿನಾಚರಣೆಯನ್ನು ಬಿಸಿಎಂ ಇಲಾಖೆಯ ಸಹಭಾಗಿತ್ವದಲ್ಲಿ ಆಚರಿಸಲಾಯಿತು.
ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿದ ಗ್ರೇಟ್-2 ತಹಶೀಲ್ದಾರರಾದ ಎಂ. ಪ್ರತಿಭಾ ಇವರು ಡಿ ದೇವರಾಜ ಅರಸು ರವರು ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಇವರನ್ನು ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಹರಿಕಾರ ಎಂದು ಕರೆಯಲಾಗುತ್ತಿತ್ತು. ಎಲೆಕ್ಟ್ರಾನಿಕ್ ಸಿಟಿ ಕಟ್ಟಲು ಇವರು ಕಾರಣೀಭೂತರು.
ಮೈಸೂರು ರಾಜ್ಯ 1973 ನವೆಂಬರ್ 1 ರಂದು “ಕರ್ನಾಟಕ” ಎಂದು ಮರು ನಾಮಕರಣಗೊಂಡ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದರು.
ಭೂ ಸುಧಾರಣೆ ಮತ್ತು ಉಳುವವನೇ ಭೂಮಿಯ ಒಡೆಯ ಎಂಬ ಕಾನೂನುಗಳನ್ನು ಜಾರಿಗೆ ತರುವ ಮೂಲಕ ದುಡಿಯುವ ವರ್ಗಕ್ಕೆ ಜಮೀನು ಸಿಗುವಂತೆ ಮಾಡಿದ ಹೆಮ್ಮೆ ಇವರದಾಗಿದೆ. ದಿವಂಗತ ದೇವರಾಜು ಅರಸು ಅವರ ದೂರದೃಷ್ಟಿಯ ಆಡಳಿತದ ನಿರ್ಧಾರಗಳು ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾದವು. ಗೇಣಿ ಶಾಸನ, ಹಾವನೂರು ಆಯೋಗದಂತಹ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದರು. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಾಸ್ಟಲ್ ವ್ಯವಸ್ಥೆ ಜಾರಿಗೆ ತರುವ ಮೂಲಕ ಬಡಮಕ್ಕಳು ವಿದ್ಯಾಭ್ಯಾಸದಿಂದ ಹೊರಗುಳಿಯದೇ ಜ್ಞಾನವನ್ನು ಪಡೆಯುವಂತಾಗಿದ್ದು, ಅವರನ್ನು ಇಂದಿಗೂ ಮರೆಯುವಂತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಮೇಲ್ವಿಚಾರಕರಾದ ಶಿವಲೀಲಾ ಬಣಕಾರ್, ಮೆಟ್ರಿಕ್ ಪೂರ್ವ ಬಾಲಕ ವಿದ್ಯಾರ್ಥಿ ನಿಲಯ ಮೇಲ್ವಿಚಾರಕರಾದ ರೇವಣ್ಣ, ಕುಬೇರ, ಶಿರಸ್ತೇದಾರ್ ರೇಖಾ ಎಸ್, ಕಂದಾಯ ನಿರೀಕ್ಷಕರಾದ ಶಿವಕುಮಾರ್ ಹಾಗೂ ಹಾಲಸ್ವಾಮಿ, ತಾಲೂಕ ಕಚೇರಿಯ ಸಿಬ್ಬಂದಿಯಾದ ದೇವರಾಜ ಅರಸು, ಮುಸ್ತಾಫ, ಎಸ್ ಎಂ ಗುರುಬಸವರಾಜ, ಗ್ರಾಮ ಆಡಳಿತ ಅಧಿಕಾರಿಗಳಾದ ಹರೀಶ, ರಮೇಶ, ಸುಧಾ ಜೈನರ್, ಯಶೋಧ, ಶ್ರೀದೇವಿ ಹಾಗೂ ಹಾಸ್ಟಲ್ ವಿದ್ಯಾರ್ಥಿನಿಯರು ಹಾಜರಿದ್ದರು.
ವರದಿ:ಕೆ. ಗೋಣೆಪ್ಪ




















