
ಮಡಿಕೇರಿ : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಬದಲಿಗೆ ನೂತನವಾಗಿ ಜಾರಿಗೆ ಬಂದಿರುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಮತ್ತು ಅಜೀವಿಕ ಮಿಷನ್ ಗ್ರಾಮೀಣ-2026 ಯೋಜನೆಯಡಿ ಜಿಲ್ಲೆಯಾದ್ಯಂತ ಸೆಪ್ಟಂಬರ್ ೧೫ರ ವರೆಗೆ ಒಂದು ತಿಂಗಳ ಕಾಲ ಜಾಬ್ ಕಾರ್ಡ್ ಮೇಳ ನಡೆಯಲಿದೆ ಎಂದು ಕೊಡಗು ಜಿ.ಪಂ. ಸಿಇಒ ಆನಂದ ಪ್ರಕಾಶ್ ಮೀನಾ ಅವರು ತಿಳಿಸಿದ್ದಾರೆ.
ಜಿಲ್ಲೆಯ 102 ಗ್ರಾಮ ಪಂಚಾಯತ್ಗಳಲ್ಲಿ ಒಂದು ತಿಂಗಳ ಕಾಲ ಜಾಬ್ ಕಾರ್ಡ್ ಮೇಳ ನಡೆಯಲಿದೆ. ಗ್ರಾಮೀಣ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ವಿಜಿ ಜಿ ರಾಮ್ ಜಿ ಯೋಜನೆಯಡಿಯಲ್ಲಿ ಸಮುದಾಯ ಆಧಾರಿತ ಮತ್ತು ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ.
ವೈಯಕ್ತಿಕ ಬಾವಿ, ದನದ ಕೊಟ್ಟಿಗೆ, ಕೋಳಿ ಶೆಡ್ ಸೇರಿದಂತೆ ಒಟ್ಟಾರೆ 318 ಕಾಮಗಾರಿಗಳಿಗೆ ಅವಕಾಶವಿದೆ ಎಂದು ತಿಳಿಸಿದರು.
ಹಿಂದಿನ ನರೇಗಾ ಯೋಜನೆಯಡಿಯಲ್ಲಿ ಗ್ರಾಮೀಣ ಭಾಗದ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ೧೦೦ ದಿನಗಳ ಉದ್ಯೋಗ ನೀಡಲಾಗುತ್ತಿತ್ತು, ಇಲ್ಲಿ ೧೨೫ ದಿನಗಳ ಉದ್ಯೋಗವಕಾಶ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಈಗಾಗಲೇ ಗ್ರಾ.ಪಂ. ಗಳು ನಿಯಮಾನುಸಾರ ಕ್ರಿಯಾಯೋಜನೆ ಸಲ್ಲಿಸಿದ್ದು ಅವುಗಳಿಗೆ ಅನುಮೋದನೆ ನೀಡಲಾಗಿದೆ. ಜಿಲ್ಲೆಯಲ್ಲಿಯೂ ವಿಬಿ ಜಿ ರಾಮ್ ಜಿ ಯೋಜನೆಯಡಿ ಕಾಮಗಾರಿಗಳು ಆರಂಭಗೊಂಡಿದ್ದು ಗ್ರಾಮೀಣ ಜನರಿಗೆ ದಿನವೊಂದಕ್ಕೆ ರೂ. 382 ಕೂಲಿ ನಿಗದಿಪಡಿಸಲಾಗಿದೆ ಎಂದರು.
ನಮೂನೆ-6 ರಲ್ಲಿ ಕೆಲಸಕ್ಕೆ ಬೇಡಿಕೆ ಸಲ್ಲಿಸಿದಲ್ಲಿ 15 ದಿನಗಳ ಒಳಗಾಗಿ ಗ್ರಾ.ಪಂ.ವತಿಯಿಂದ ಉದ್ಯೋಗ ಒದಗಿಸಲಾಗುತ್ತದೆ. ಕೊಡಗಿನ ಗ್ರಾಮೀಣ ಭಾಗದ ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಜಿಲ್ಲೆಯಾದ್ಯಂತ ಜಾಬ್ ಕಾರ್ಡ್ ಮೇಳವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳುವ ಸಲುವಾಗಿ 5 ತಾಲೂಕುಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಜಾಬ್ ಕಾರ್ಡ್ ಪಡೆದುಕೊಳ್ಳಲು ಹಾಗೂ ಕಾಮಗಾರಿ ಪಡೆಯಲು ಮತ್ತು ವಿಬಿ ಜಿ ರಾಮ್ ಜಿ ಯೋಜನೆಯಡಿಯಲ್ಲಿ ಕೆಲಸ ಪಡೆಯಲು ಗ್ರಾಮೀಣ ಭಾಗದ ಜನರು ತಮ್ಮ ಸಂಬಂಧಪಟ್ಟ ಗ್ರಾಮ ಪಂಚಾಯತ್ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಮಾಹಿತಿ ನೀಡಿದ್ದಾರೆ.
ವರದಿ: ಪ್ರಿತುನ್ ಪೂವಣ್ಣ




















