ಈ ಪುಸ್ತಕದ ಲೇಖಕಿ: ಐಶ್ವರ್ಯ ಎಂ ಕಲಿವಾಳ
ಈ ಪುಸ್ತಕದಲ್ಲಿರುವ ಲೇಖನಗಳನ್ನು ಯಾರದ್ದೋ ಬರಹ ಅಥವಾ ಅನಿಸಿಕೆಯಲ್ಲ. ಇವೆಲ್ಲಾ ಲೇಖಕಿಯವರೇ ತನ್ನ ಏರುಪೇರಿನ ಬದುಕಿನಲ್ಲಿ ಎದುರಿಸಿದ ಸಮಸ್ಯೆ ಸವಾಲುಗಳಿಂದ ಹಾಗೂ ತಾನು ಬಹಳ ಹತ್ತಿರವಿದ್ದು ಈ ಸಮಾಜವನ್ನು ಕಂಡು, ಯಾವುದು ಸರಿ? ಯಾವುದು ತಪ್ಪು? ಎಂದು ತಾನೇ ಅರ್ಥೈಸಿಕೊಂಡ ಹಾಗೂ ಅನುಭವಿಸಿದ ಅನುಭವಗಳೇ ಅಕ್ಷರ ರೂಪವಾಗಿ ನಮ್ಮೆದುರಿಗೆ ಪುಸ್ತಕ ರೂಪದಲ್ಲಿದೆ. ಹಾಗಾಗಿ “ಭಾವನೆಗಳ ಪಯಣ” ಎಂಬ ಪುಸ್ತಕ ಒಂದು ತೆರನಾಗಿ ಪ್ರಾಯೋಗಿಕ ಪುಸ್ತಕ ಎಂದರೆ ಖಂಡಿತ ತಪ್ಪಾಗಲಾರದು. ಇದರಲ್ಲಿರುವ ಪ್ರತಿಯೊಂದು ಲೇಖನವು ಬದುಕಿನ ಹೊಸತನದ ಬಗ್ಗೆ ಓದುಗರಿಗೆ ಹರಿವು ನೀಡುತ್ತದೆ.
ಬುದ್ಧಿಜೀವಿಯಾದ ಮನುಷ್ಯನಿಗೆ ಪಂಚೇಂದ್ರಿಯಗಳು ಅತ್ಯವಶ್ಯಕ ಹಾಗೂ ಅವುಗಳ ನಿಯಂತ್ರಣವು ತುಂಬಾ ಮಹತ್ವ. ಇದರ ಜೊತೆಗೆ ಮನುಷ್ಯನಿಗೆ ತನ್ನ ಭಾವನೆಗಳ ನಿಯಂತ್ರಣವೂ ಇರಬೇಕು. “ಭಾವನೆಗಳು ಹಾಗೂ ಪಂಚೇಂದ್ರಿಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.” ಇವು ಒಂದಕ್ಕೊಂದು ಪೂರಕ ಸಂಬಂಧ ಹೊಂದಿವೆ, ಪಂಚೇಂದ್ರಿಯಗಳ ನಿಯಂತ್ರಣವನ್ನು ಮನೆ ಶಾಲೆ ನೆರೆಹೊರೆಯರಿಂದ ಹಾಗೂ ಪ್ರತಿದಿನ ಹಲವಾರು ಸನ್ನಿವೇಶಗಳಿಂದ ತಿಳಿಯುತ್ತೇವೆ. ಅಷ್ಟು ಯಾಕೆ ಚಿಕ್ಕ ವಯಸ್ಸಿನಿಂದಲೇ ಪಂಚೇಂದ್ರಿಯಗಳ ನಿಯಂತ್ರಣವನ್ನು ಕಲಿಯುತ್ತಾ ಬರುತ್ತೇವೆ. ಆದರೆ ಭಾವನೆಗಳ ನಿಯಂತ್ರಣ ಹಾಗೂ ಭಾವನೆಗಳನ್ನು ವ್ಯಕ್ತಪಡಿಸುವ ಬಗೆಗೆ ಹೆಚ್ಚಿನ ಅರಿವು ನಮಗಿರುವುದಿಲ್ಲ. ಇದರಿಂದ ಎಷ್ಟೋ ಸಲ ಭಾವನೆಗಳ ಕೈಗೆ ಬುದ್ಧಿ ನೀಡಿ ನಮ್ಮ ಬದುಕಿನಲ್ಲಿ ಇಲ್ಲದ ಆಪತ್ತುಗಳನ್ನು ನಾವೇ ತಂದುಕೊಳ್ಳುತ್ತೇವೆ. ಭಾವನೆಗಳನ್ನು ಹೇಗೆ ನಿಯಂತ್ರಿಸಬೇಕು ಮತ್ತೆ ಹೇಗೆ ನಿರ್ವಹಣೆ ಮಾಡಬೇಕೆಂಬ ಅರಿವು ಮನುಷ್ಯನಲ್ಲಿ ಕಡಿಮೆ. ಅದರಲ್ಲೂ ಆಧುನಿಕತೆಗೆ ತನ್ನನ್ನು ತಾನು ಅರ್ಪಿಸಿಕೊಂಡು ಬೆಳೆಯುತ್ತಿರುವ ಮನುಷ್ಯನಿಗೆ ಭಾವನೆಗಳ ನಿಯಂತ್ರಣಕ್ಕಿಂತ ತಾನು ಬಯಸಿದ್ದು ತನಗೆ ಬೇಕೇ ಬೇಕು ಎಂಬ ಹುಚ್ಚು ಹಂಬಲ ಹೆಚ್ಚಿದೆ ಇಂಥವರಿಂದ ಸಮಾಜದಲ್ಲಿ ಆಪತ್ತುಗಳು ಹೆಚ್ಚು ಜರುಗುತ್ತವೆ. ಕೆಲವು ಸಲ ಮತ್ತೊಂದು ಜೀವವನ್ನು ತೆಗೆಯುವ ಮಟ್ಟಕ್ಕೆ ಬರುತ್ತಾರೆ. ಇನ್ನು ಕೆಲವೊಮ್ಮೆ ಕೆಲವರ ಜೀವನವೇ ಹಾಳುಗೆಡುವುದು ನಡೆಯುತ್ತದೆ.
ಜನರು ಭಾವನೆಗಳ ನಿಯಂತ್ರಣವನ್ನು ಕಳೆದುಕೊಂಡರೆ ಅವರ ಬದುಕಿನಲ್ಲಿ ನೆಮ್ಮದಿ ಇರದಂತಾಗುತ್ತದೆ. ಹಾಗೂ ಅವರ ಸುತ್ತಲಿನ ಸಮಾಜದಲ್ಲಿ ಶಾಂತಿ ಸಹ ಬಾಳ್ವೆಯು ಬರಿದಾಗುತ್ತದೆ. ಇದು ಹೀಗೆ ಮುಂದುವರೆದರೆ ಬದುಕುವ ಬದುಕಿಗೆ ಅರ್ಥವೇ ಇಲ್ಲದೆ ಜೀವಿಸುವ ಜೀವಿ ಮನುಷ್ಯನಾಗುತ್ತಾನೆ. ಇದರಿಂದ ಬದುಕೆಂಬ ಪಯಣದಲ್ಲಿ ಭಾವನೆಗಳನ್ನು ಸಮರ್ಪಕವಾಗಿ ಹಾಗೂ ಸಮಯಾನುಕುಲವಾಗಿ ನಿರ್ವಹಿಸಿಕೊಂಡು ಸಾಗಬೇಕು.
ಇದೆಲ್ಲಾ ನಿಜ ಆದರೆ ಹೇಗೆ ಭಾವನೆಗಳನ್ನು ನಿರ್ವಹಿಸಿಕೊಂಡು ಸಾಗುವುದು? ಈ ಪ್ರಶ್ನೆಗೆ ಉತ್ತರವಾಗಿ ಐಶ್ವರ್ಯ ಎಂ ಕಲಿವಾಳ ಅವರು ರಚಿಸಿರುವ ಭಾವನೆಗಳ ಪಯಣ ಎಂಬ ಪುಸ್ತಕವೇ ಸೂಕ್ತ. ಈ ಪುಸ್ತಕದಲ್ಲಿ 25 ಲೇಖನಗಳಿವೆ, ಪ್ರತಿಯೊಂದು ಲೇಖನವೂ ನಾವು ಬದುಕುವ ಬದುಕಿನ ಮಹಾತ್ಮಾಂಶಗಳ ಬಗ್ಗೆ ಚರ್ಚಿಸುತ್ತದೆ, ಹಾಗೂ ನಮ್ಮತನವನ್ನು ನಾವೇ ಹೇಗೆ ರೂಪಿಸಿಕೊಳ್ಳಬೇಕೆಂಬ ಅರಿವನ್ನು ನೀಡುತ್ತದೆ. ಅಷ್ಟೇ ಅಲ್ಲದೆ ಇಲ್ಲಿಯವರೆಗೂ ಮಾತನಾಡಿದ ಭಾವನೆಗಳ ನಿರ್ವಹಣೆಗೆ ಹಾಗೂ ನಿಯಂತ್ರಣದ ಬಗ್ಗೆ ಓದುಗರಿಗೆ ಅಪಾರವಾದ ಜ್ಞಾನವನ್ನು ನೀಡುತ್ತದೆ. ಬದುಕಿನಲ್ಲಿ ಮಾನವೀಯತೆ ಹಾಗೂ ನೈತಿಕತೆಗೆ ಹೆಚ್ಚಿನ ಆದ್ಯತೆಯನ್ನು ಈ ಪುಸ್ತಕ ನೀಡಿದೆ. ಇಂದಿನ ಸಮಾಜಕ್ಕೆ ಈ ಪುಸ್ತಕ ಅತ್ಯಮೂಲ್ಯವಾಗಿದೆ.
ಪ್ರತಿಯೊಬ್ಬ ಮನುಷ್ಯನು ತನ್ನ ನಿತ್ಯ ಜೀವನದಲ್ಲಿ ತಾನು ಎದುರಿಸುವ ಹಾಗೂ ಗೊಂದಲಕ್ಕೊಳಗಾಗುವ ಭಾವನೆಗಳನ್ನೇ ಲೇಖನಗಳಾಗಿ ನಮ್ಮ ಮುಂದಿಟ್ಟಿದ್ದಾರೆ. ಅವಮಾನ, ಅನುಭವ, ನಂಬಿಕೆ, ಜವಾಬ್ದಾರಿ, ಸತ್ಯ, ಸ್ನೇಹ, ಆತ್ಮವಿಶ್ವಾಸ, ಪರಿಶ್ರಮ, ಪ್ರೀತಿ, ಸಂಬಂಧಗಳು, ಮಾನವೀಯತೆಯಂತಹ ಹಲವಾರು ಮಹತ್ವಯುತವಾದ ಲೇಖನಗಳು ಈ ಪುಸ್ತಕದಲ್ಲಿವೆ. ಒಂದೊಂದು ಲೇಖನವು ಓದುವುದರಲ್ಲಿ ತನ್ನನ್ನೇ ತಾನು ಪರೀಕ್ಷೆಗೆ ಒಳಪಡಿಸುವಂತಿದೆ. ನಾನು ಹಿಂದೆ ಮಾಡಿದ್ದು ಸರಿಯೋ? ತಪ್ಪೋ? ಅಥವಾ ಈಗ ನಾನಿರುವ ರೀತಿ ಸರಿಯೋ? ತಪ್ಪೋ? ಎಂಬ ಪ್ರಶ್ನೆಗಳು ಓದುವುದರಲ್ಲಿ ಮೂಡುವಂತೆ ಈ ಪುಸ್ತಕ ಮಾಡುತ್ತದೆ.
ಬರೀ ಪ್ರಶ್ನೆಗಳನ್ನು ಬಿತ್ತುವಲ್ಲಿ ಪುಸ್ತಕ ಸೀಮಿತವಾಗಿದ್ದರೆ ಈ ಪುಸ್ತಕಕ್ಕೆ ಮೆರುಗಿರುತ್ತಿರಲಿಲ್ಲ.
ಈ ಎಲ್ಲಾ ಪ್ರಶ್ನೆಗಳ ಜೊತೆಗೆ ಉತ್ತರವನ್ನು ನೀಡುತ್ತದೆ. ಹಾಗೂ ಮಾನವನು ಮಾನವೀಯ ಗುಣಗಳಿಂದ ಜೀವಿಸುವ ಬಗ್ಗೆ ಒತ್ತಿ ಹೇಳುತ್ತದೆ. ಓದುಗರು ಒಮ್ಮೆ ಓದಲೇಬೇಕಾದ ಮತ್ತು ಓದಿ ಅರ್ಥ ಮಾಡಿಕೊಳ್ಳಬೇಕಾದ ಮಹತ್ವಯುತವಾದ ಪುಸ್ತಕ ಇದಾಗಿದೆ. ಒಟ್ಟಾರೆ ಈ ಪುಸ್ತಕ ಪ್ರತಿಯೊಬ್ಬರ ಬದುಕಿನ ಭಾವನೆಗಳ ನಿರ್ವಹಣೆಯ ಕೈಗನ್ನಡಿಯಾಗಿದೆ.
ಪುಸ್ತಕಕ್ಕಾಗಿ ಸಂಪರ್ಕಿಸಿ: ಐಶ್ವರ್ಯ ಎಂ ಕಲಿವಾಳ. 6362987027
- ರಾಮಕೃಷ್ಣ. ಎನ್





















