
ಕೋಳಾಲ ಗ್ರಾಮದಲ್ಲಿ ಪ್ರಜಾ ಸೇವಾ ಅಭಿಯಾನ ಜನಸಭೆಯಲ್ಲಿ ಡಿ. ಸಿ ಅವರಿಂದ 150 ಅರ್ಜಿ ಸ್ವೀಕಾರ.
10 ತಾಲ್ಲೂಕುಗಳು ಬರಗಾಲ ಪ್ರದೇಶವಾಗಿ ಘೋಷಣೆಯಾಗಿದ್ದು, 15 ಕೋಟಿ ಹಣ ಕುಡಿಯುವ ನೀರು ಹಾಗೂ ವಿವಿಧ ಕಾಮಗಾರಿಗಳಿಗೆ ಬಿಡುಗಡೆ.
ಕೊರಟಗೆರೆ : ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಅರಿಯಲು ಜನರ ಬಳಿಗೆ ಸರ್ಕಾರ, ಜನರಿಗಾಗಿ ಸರ್ಕಾರ ಎಂಬುದು ಪ್ರಜಾ ಸೇವಾ ಅಭಿಯಾನ ಪ್ರಾರಂಭವಾಗಿದ್ದು, ಸಾಕಷ್ಟು ಅರ್ಜಿಗಳನ್ನು ಸ್ಥಳದಲ್ಲಿಯೇ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ತಿಳಿಸಿದರು.
ತಾಲ್ಲೂಕಿನ ಕೋಳಾಲ ಗ್ರಾಮದ ಪಾರ್ವತಿ ಪರಮೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಲಾಗಿದ್ದಪ್ರಜಾ ಸೇವಾ ಅಭಿಯಾನ ಕಾರ್ಯಕ್ರಮದಲ್ಲಿ ಅರ್ಜಿ ಸ್ವೀಕರಿಸಿ ಮಾತನಾಡಿದರು.
ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ. ಪರಮೇಶ್ವರ ಮಾರ್ಗದರ್ಶನದಲ್ಲಿ ಕೋಳಾಲ ಗ್ರಾಮದಲ್ಲಿ ತಾಲ್ಲೂಕು ಆಡಳಿತ ಪ್ರಜಾ ಸೇವಾ ಅಭಿಯಾನ ಮಾಡಲಾಗುತ್ತಿದ್ದು, ಸಾರ್ವಜನಿಕರಿಂದ 150ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಮುಖ್ಯವಾಗಿ ಭೂ ಮಾಪನ ಇಲಾಖೆಯ ತತ್ಕಾಲ್ ಪೋಡಿ, ದುರಸ್ಥಿ, ತಿದ್ದುಪಡಿ, ಆರ್.ಆರ್.ಟಿ ಆಗಿಲ್ಲ ಮತ್ತು 3-4 ತಿಂಗಳಿoದ ದಿನಕ್ಕೆ 7 ಗಂಟೆಯಷ್ಟೇ ಪಂಪ್ ಸೆಟ್ ವಿದ್ಯುತ್ ನೀಡುತ್ತಿದ್ದು, ಹೆಚ್ಚಾಗಿ ವಿದ್ಯುತ್ ವ್ಯವಸ್ಥೆ ಕಲ್ಪಿಸುವಂತೆ ರೈತರು ಮನವಿ ಮಾಡಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಲ್ಲಿ, ಜಿಲ್ಲೆಯಲ್ಲಿ ಕಂದಾಯ ಇಲಾಖೆಯಲ್ಲಿ ಪ್ರಪ್ರಥಮವಾಗಿ ಐತಿಹಾಸಿಕವಾಗಿ ಸುಮಾರು 25 ಸಾವಿರ ಬಡ ಕುಟುಂಬದವರಿಗೆ ನಿವೇಶನದ ಹಕ್ಕು ಪತ್ರ ವಿತರಿಸಲಾಗಿದೆ. 6 ಸಾವಿರ ಬಡ ಕುಟುಂಬಗಳ ಪೋಡಿ ಕಾರ್ಯ ಮುಗಿದಿದೆ, ಕಂದಾಯ ಇಲಾಖೆ ಮತ್ತು ಭೂ ಮಾಪಾನ ಇಲಾಖೆ ಶ್ರಮ ವಹಿಸಿ ಕೆಲಸ ಮಾಡುತ್ತಿದೆ. ಪಡಿತರ ಚೀಟಿಯ ಕೆ-ವೈಸಿಯ ತಾಂತ್ರಿಕ ಸಮಸ್ಯೆ ಕಂಡು ಬಂದಿದೆ, ವಾರದೊಳಗೆ ಸಮಸ್ಯೆ ಬಗೆಹರಿಸುವುದಕ್ಕೆ ಮುಂದಾಗುತ್ತೇವೆ ಎಂದರು.
ಜಿಲ್ಲೆಯಲ್ಲಿ ವಾಡಿಕೆಗಿಂದ 25% ರಷ್ಟು ಮಳೆ ಕಡಿಮೆಯಾಗಿದ್ದು, ಜಿಲ್ಲೆಯ 10 ತಾಲ್ಲೂಕುಗಳನ್ನ ಬರ ಸ್ಥಿತಿ ಪ್ರದೇಶವಾಗಿ ಘೋಷಣೆಯಾಗಿದೆ. 15 ಕೋಟಿ ಹಣ ಕುಡಿಯುವ ನೀರು ಹಾಗೂ ವಿವಿಧ ಕಾಮಗಾರಿಗಳಿಗೆ ಬಿಡುಗಡೆಯಾಗಿದೆ. ಬರದ ಪರಿಸ್ಥಿತಿ ನಿರ್ಮಾಣವಾಗಿರುವ ರಾಜ್ಯ ಸರ್ಕಾರ ಜಿಲ್ಲೆಗೆ 5 ಕೋಟಿ.ರೂ ನೀಡಿದ್ದು, ಇದನ್ನು ಕುಡಿಯುವ ನೀರು ನಿರ್ವಹಣೆಗೆ ಬಳಸಲಾಗುವುದು, ತುಮುಲ್ ವತಿಯಿಂದ ರೈತರಿಗೆ ಒಂದು ಲಕ್ಷದ ಎಂಪಿ ಮಿನಿ ಕಿಟ್ಸ್ ವಿತರಣೆ ಮಾಡಲಾಗುತ್ತಿದೆ, ಪಶು ಸಂಗೋಪನೆ ಇಲಾಖೆಯಿಂದ ರಾಜ್ಯಾದ್ಯಂತ ಹಸುಗಳಿಗೆ ಮಿನಿ ಕಿಟ್ಸ್ ವಿತರಿಸಲಾಗುತ್ತಿದೆ ಎಂದರು.
ಕೋಳಾಲಕ್ಕೆ 100 ಬೆಡ್ ಹಾಸಿಗೆಗೆ ಬೇಡಿಕೆ :
ಕೋಳಾಲ ಹೋಬಳಿ ವ್ಯಾಪ್ತಿಗೆ ನೂರಾರು ಗ್ರಾಮಗಳು ಬರಲಿವೆ, ಆದ್ದರಿಂದ ಉಪಮುಖ್ಯಮಂತ್ರಿಗಳಾದ ಡಾ.ಜಿ ಪರಮೇಶ್ವರ ರವರು, ಕೋಳಾಲ ಹೋಬಳಿ ಕೇಂದ್ರಕ್ಕೆ 100 ಬೆಡ್ ಹಾಸಿಗೆಯ ಸುಸಜ್ಜಿತ ಆಸ್ಪತ್ರೆ ನಿರ್ಮಾಣ, ರೈತರಿಗೆ ವಿದ್ಯುತ್ ಸಮಸ್ಯೆ, ನ್ಯಾಯಬೆಲೆ ಅಂಗಡಿಯಲ್ಲಿ ಇ-ಕೆವೈಸಿ ಮಾಡಿಸಲು ಸರ್ವರ್ ಸಮಸ್ಯೆ, ಗೋಶಾಲೆ ಪ್ರಾರಂಭ, ತತ್ಕಾಲ್ ಪೋಡಿ, ಸೇರಿದಂತೆ 150ಕ್ಕೂ ಅರ್ಜಿಗಳನ್ನು ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರು ನೀಡಿದರು.
ಎಡಿಎಲ್‌ಆರ್ ಮೇಲೆ ಅಸಾಮಾಧಾನ :
ತಾಲ್ಲೂಕಿನ ಸಂಕೇನಹಳ್ಳಿ ಗ್ರಾಮದ ಸರ್ವೇ.ನಂ 5/3 ರಲ್ಲಿ ತತ್ಕಾಲ್ ಪೋಡಿ ಮಾಡುವಂತೆ ರೈತ ನರಸಿಂಹರಾಜು ಭೂ ಮಾಪನ ಇಲಾಖೆಗೆ ಜು.7-2೦22 ರಲ್ಲಿ ಅರ್ಜಿ ಸಲ್ಲಿಸಿದ್ದು ತತ್ಕಾಲ್ ಪೋಡಿ ಮಾಡಿಕೊಡದೆ, ಕಳೆದ ನಾಲ್ಕು ವರ್ಷದಿಂದ ರೈತನನ್ನು ಕಚೇರಿಗೆ ಅಲೆದಾಡಿಸುತ್ತಿದ್ದ ಮಾಹಿತಿ ತಿಳಿದ ಡಿಸಿ, ಎಡಿಎಲ್‌ಆರ್ ಭುವನ್ ಸುಂದರ್ ರವರನ್ನು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಜಿ.ಪಂ ಸಿಇಒ ಬಿ.ವಿ ಆಶ್ವಿಜ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಶೋಕ್, ತಹಶೀಲ್ದಾರ್ ಮಂಜುನಾಥ್, ಗ್ಯಾರಂಟಿ ಸಮಿತಿ ಅಧ್ಯಕ್ಷ ವೆಂಕಟೇಶ್ ಮೂರ್ತಿ, ತಾ.ಪಂ ಇಒ ಅಪೂರ್ವ, ಗಿರೀಶ್, ಕೆಂಪಣ್ಣ, ಮಾಜಿ ಅಧ್ಯಕ್ಷ ಗಿರೀಶ್, ಭದ್ರಣ್ಣ, ಚಂದ್ರು ಅಧಿಕಾರಿಗಳಾದ ವೆಂಕಟೇಶ್, ವೆಂಕಟರಂಗನ್, ಮಧುಚಂದ್ರ, ಆರ್‌ಐ ಬಸವರಾಜು, ಪ್ರತಾಪ್, ಕೃಷ್ಣಮೂರ್ತಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕೊರಟಗೆರೆ ತಾಲೂಕಿನ ಕೋಳಾಲ ಗ್ರಾಮದಲ್ಲಿ ಆಯೋಜನೆ ಮಾಡಲಾಗಿದ್ದ ಪ್ರಜಾ ಸೇವಾ ಅಭಿಯಾನ ಕಾರ್ಯಕ್ರಮದಲ್ಲಿ ವಿಧವಾ ವೇತನ ಮಂಜೂರು ಪತ್ರವನ್ನು ಫಲಾನುಭವಿಗಳಿಗೆ ನೀಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್ ಸೇರಿದಂತೆ ಇತರರು ಇದ್ದರು.
ವರದಿ. ಪ್ರಸನ್ನ ಕುಮಾರ್. ಎಸ್. ಕೊರಟಗೆರೆ




















