
ಕಂಪ್ಲಿ ಕ್ಷೇತ್ರದ ಅಭಿವೃದ್ಧಿಗೆ ಜನಧ್ವನಿಯೇ ಶಕ್ತಿ: ಶಾಸಕ ಜೆ. ಎನ್. ಗಣೇಶ
ವರದಿ: ಜಿಲಾನಸಾಬ್ ಬಡಿಗೇರ್
“ಸಮಸ್ಯೆ ನಿಮ್ಮದು… ಪರಿಹಾರದ ಹೊಣೆ ನಮ್ಮದು!” ಆಶಯದೊಂದಿಗೆ ಕಂಪ್ಲಿ ವಿಧಾನಸಭಾ ಕ್ಷೇತ್ರದ ಪ್ರಜಾ ಸೇವಾ ಆಂದೋಲನ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಶಾಸಕ ಜೆ. ಎನ್. ಗಣೇಶ ಕಾಂಗ್ರೆಸ್ ಸರ್ಕಾರ ಜನರಿಗಾಗಿ ಇದ್ದು, ಮುಖ್ಯಮಂತ್ರಿ ಶ್ರೀ ಡಿ. ಕೆ. ಶಿವಕುಮಾರ್ ಅವರ ಕನಸಿನ ಯೋಜನೆಯಾಗಿರುವ ಪ್ರಜಾ ಸೇವಾ ಆಂದೋಲನದ ಮೂಲಕ ಜನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸುವುದು ಆದ್ಯತೆ ಎಂದರು.
ಜನರ ಅಹವಾಲುಗಳನ್ನು ನೇರವಾಗಿ ಆಲಿಸಿ, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪರಿಹಾರ ಕಂಡುಕೊಳ್ಳುವ ಉದ್ದೇಶವಿದೆ ಎಂದು ತಿಳಿಸಿದರು. “ಸಾರ್ಥಕ ಸೇವೆ–ನಿರಂತರ ಅಭಿವೃದ್ಧಿ–ನಿರಂತರ ಜನಸಂಪರ್ಕ” ಧ್ಯೇಯದೊಂದಿಗೆ ಸಮೃದ್ಧ–ಸುಭದ್ರ ಕಂಪ್ಲಿ ಕ್ಷೇತ್ರದ ಪ್ರಗತಿಗೆ ಸಂಕಲ್ಪ ಹೊಂದಿದ್ದು, ಪ್ರತಿ ಸಮಸ್ಯೆಗೂ ಸ್ಪಂದಿಸುವುದಾಗಿ ಭರವಸೆ ನೀಡಿದರು. “ಒಂದು ಅರ್ಜಿ–ವರ್ಷಗಳ ಸಮಸ್ಯೆಗೆ ಪರಿಹಾರದ ಹೆಜ್ಜೆ” ಎಂಬ ಆಶಯದೊಂದಿಗೆ ಸ್ಥಳದಲ್ಲೇ ಅಹವಾಲು ಸ್ವೀಕಾರ ನಡೆಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಜೂಗಲ್ ಮಂಜುನಾಯಕ, ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀಕುಮಾರ್ , ಕಂಪ್ಲಿ ಪುರಸಭೆ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ, ಇಲಾಖೆ ಅಧಿಕಾರಿಗಳು, ಇಸಿಓ ಟಿ. ಎಂ. ಬಸವರಾಜ, ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸ, ಎಪಿಎಂಸಿ ಅಧ್ಯಕ್ಷ ಎನ್. ಹಬೀಬಿ ರೆಹಮಾನ್, ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.




















