ಶಿವಮೊಗ್ಗ: ನಗರದ ಕೋಟೆ ಶ್ರೀಭೀಮೇಶ್ವರ ದೇವಸ್ಥಾನದಲ್ಲಿ ಜರುಗಿದ ಹಿಂದೂ ಸಂಘಟನಾ ಮಹಾಮಂಡಳಿ (ಹಿಂದೂ ಮಹಾಸಭಾ ಅಂಗಸಂಸ್ಥೆ) ಸಭೆಯಲ್ಲಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಸರ್ರಾಫ್ ಶ್ರೀಧರ್ ರಾವ್ ಹಾಗೂ ಕಾರ್ಯದರ್ಶಿಯಾಗಿ ಎ. ಎನ್. ಸತ್ಯನಾರಾಯಣ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಅಧ್ಯಕ್ಷರಾಗಿದ್ದ ದಿ. ಎಂ. ಕೆ. ಸುರೇಶ್ ಕುಮಾರ್ (ಚಾಲುಕ್ಯ ಸೂರಿ) ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಈ ನೂತನ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಪದಾಧಿಕಾರಿಗಳ ನೇತೃತ್ವದಲ್ಲಿ ಮುಂಬರುವ 82ನೇ ಗಣೇಶೋತ್ಸವವನ್ನು ನಗರದಲ್ಲಿ ಅತ್ಯಂತ ವೈಭವ ಹಾಗೂ ಅದ್ಧೂರಿಯಾಗಿ ಆಚರಿಸಲು ಮತ್ತು ಮುಂಬರುವ ದಿನಗಳಲ್ಲಿ ಸಂಘಟನೆಯ ಸಾಮಾಜಿಕ-ಧಾರ್ಮಿಕ ಕಾರ್ಯ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಸಹಕಾರ್ಯದರ್ಶಿ ಎಸ್. ಎನ್. ಚನ್ನಬಸಪ್ಪ (ಚೆನ್ನಿ), ಖಜಾಂಚಿ ಎಸ್. ಎಂ. ದತ್ತಾತ್ರೇಯ ರಾವ್, ನಿರ್ದೇಶಕರಾದ ಸರ್ರಾಫ್ ಶ್ರೀಪಾದ ರಾವ್, ಹರಿಗೆ ಗೋಪಾಲಸ್ವಾಮಿ, ನಿರಂಜನ್, ರಾಜಶೇಖರ್ ಅಲಸೆ, ಚೇತನ್ ಎಸ್. ಹಾಗೂ ಚಂದ್ರಶೇಖರ್ (ರಾಜು) ಉಪಸ್ಥಿತರಿದ್ದರು ಎಂದು ಸಂಚಾಲಕರಾದ ಎಸ್. ಎಂ. ದತ್ತಾತ್ರೇಯ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ /ಬೆಂಗಳೂರು.




















