ಮಧುಗಿರಿ: ತಾಲೂಕಿನಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ, ಗರಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಶ್ರೀನಿವಾಸಪುರದ ಗ್ರಾಮಸ್ಥರು ಮಳೆರಾಯನ ಕೃಪೆಗಾಗಿ ಜಾನಪದ ಸಂಪ್ರದಾಯದಂತೆ ವಿಭಿನ್ನ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಗ್ರಾಮದಲ್ಲಿ ತೀವ್ರ ನೀರಿನ ಅಭಾವ ಉಂಟಾಗಿದ್ದು, ಬೆಳೆಗಳು ಒಣಗುವ ಹಂತ ತಲುಪಿವೆ. ಜೊತೆಗೆ ದನಕರುಗಳಿಗೆ ಮೇವಿನ ಅಭಾವವೂ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ಮಳೆಯಾಗಲಿ ಎಂದು ಪ್ರಾರ್ಥಿಸಿ ಗ್ರಾಮಸ್ಥರೆಲ್ಲರೂ ಒಂದಾಗಿ ಮಣ್ಣಿನ ದೇವತಾ ವಿಗ್ರಹವನ್ನು ತಯಾರಿಸಿ, ಕಾಡಿನಲ್ಲಿ ಸಿಗುವ ಬಗೆಬಗೆಯ ಹೂಗಳಿಂದ ವಿಶೇಷವಾಗಿ ಅಲಂಕರಿಸಿದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮಳೆರಾಯನಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಅರ್ಪಿಸಿದರು.
ಈ ಆಚರಣೆಯ ಭಾಗವಾಗಿ ಮರುದಿನ ಊರಿನ ಪ್ರತಿಯೊಂದು ಮನೆಗೂ ತೆರಳಿ ದವಸ-ಧಾನ್ಯಗಳನ್ನು ಸಂಗ್ರಹಿಸಿದ ಗ್ರಾಮಸ್ಥರು, ಎಲ್ಲರೂ ಒಂದಾಗಿ ದಾಸೋಹ ಏರ್ಪಡಿಸಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡುತ್ತಾರೆ.
“ವರ್ಷಧಾರೆಯಿಲ್ಲದೆ ಕೆರೆ-ಕಟ್ಟೆಗಳು ಬತ್ತಿಹೋಗಿವೆ. ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಕಂಗೆಟ್ಟಿದ್ದು, ಹಿರಿಯರ ಕಾಲದಿಂದಲೂ ನಡೆದುಬಂದಿರುವ ಈ ಸಾಂಪ್ರದಾಯಿಕ ಆಚರಣೆಯ ಮೂಲಕ ಮಳೆರಾಯನಿಗೆ ಮೊರೆ ಹೋಗಿದ್ದೇವೆ” ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಗ್ರಾಮಸ್ಥರ ಈ ವಿಭಿನ್ನ ಸಾಂಪ್ರದಾಯಿಕ ಆಚರಣೆಯಲ್ಲಿ ಮಹಿಳೆಯರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶೀಘ್ರವೇ ಉತ್ತಮ ಮಳೆಯಾಗಲೆಂದು ಪ್ರಾರ್ಥಿಸಿದರು.
ವರದಿ ರಂಗರಾಜು ಎಂ. ಗರಣಿ




















